2022 ಜುಲೈ 16ರಿಂದ ರಾಜ್ಯಾದ್ಯಂತ "ಪೌತಿ ಖಾತೆ ವರ್ಗಾವಣೆ" ಅಭಿಯಾನ
2022 ಜುಲೈ 16ರಿಂದ ರಾಜ್ಯಾದ್ಯಂತ "ಪೌತಿ ಖಾತೆ ವರ್ಗಾವಣೆ" ಅಭಿಯಾನ
ಮೃತರ ಹೆಸರಿನಲ್ಲಿರುವ ಭೂದಾಖಲೆಗಳನ್ನು ಹಾಲಿ ವಾರಸುದಾರರು ಸೂಕ್ತ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿದಲ್ಲಿ, ಅಂತಹ ವಾರಿಸುದಾರರಿಗೆ ತಕ್ಷಣ ಖಾತೆ ಮಾಡಿಕೊಡುವ ಅಭಿಯಾನ ಜುಲೈ 16, 2022ರಿಂದ ರಾಜ್ಯಾದ್ಯಂತ ನಡೆಯಲಿದೆ.
ಆಸ್ತಿ ಮಾಲಕರು ಮೃತ ಹಿನ್ನೆಲೆಯಲ್ಲಿ ತಲೆ ತಲಾಂತರಗಳಿಂದ ಆಸ್ತಿ ವಿಭಜನೆಯಾಗದೇ ಉಳಿದಿವೆ. ಆಸ್ತಿ ಹಕ್ಕಿದ್ದರೂ ಅಂಥವರಿಗೆ ಬ್ಯಾಂಕ್ ಸಾಲ ಸಹಿತ ಹಲವು ತೊಡಕು ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸೂಕ್ತ ದಾಖಲೆ ನೀಡಿದರೆ, ಹಾಲಿ ವಾರಸುದಾರರಿಗೆ ಅರ್ಜಿ ಸಲ್ಲಿಸಿದ ತಕ್ಷಣವೇ ದಾಖಲೆ ನೀಡಲು ಪೌತಿ ಖಾತೆಗೆ ತಿದ್ದುಪಡಿ ತರಲಾಗುತ್ತಿದೆ.
ಜುಲೈ 16ರಿಂದ ಈ ಅಭಿಯಾನ, ಕಂದಾಯ ಇಲಾಖೆಯಲ್ಲಿ ರಾಜ್ಯದಲ್ಲೆಡೆ ನಡೆಯಲಿದೆ. ಖಾತೆ ವರ್ಗಾವಣೆಯಿಂದ ಲಕ್ಷಾಂತರ ರೈತರಿಗೆ ಅನುಕೂಲವಾಗಲಿದೆ ಎನ್ನಲಾಗಿದೆ.
ಪೌತಿ ಹಿನ್ನೆಲೆಯಲ್ಲಿ ಖಾತೆ ಪಡೆಯಲು ಅರ್ಹ ಅಭ್ಯರ್ಥಿಗಳು ಗ್ರಾಮ ಸಭೆಗಳಲ್ಲೇ ಅರ್ಜಿ ಸಲ್ಲಿಸಬಹುದಾಗಿದೆ. ಸೂಕ್ತ ದಾಖಲೆ ಒದಗಿಸಿದರೆ, ಖಾತೆಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಬಹುದು.
ಪೌತಿ ಖಾತೆ ವರ್ಗಾವಣೆಯ ಅಧಿಕಾರವನ್ನು ಇನ್ನು ಮುಂದೆ ಆಯಾ ಪ್ರದೇಶದ ಸಹಾಯಕ ಆಯುಕ್ತರಿಗೆ ನೀಡಲಾಗಿದೆ. ಪ್ರತಿ ತಿಂಗಳು ನಡೆಯುವ ಗ್ರಾಮ ವಾಸ್ತವ್ಯ ಸಭೆಗಳಲ್ಲೇ ಜಿಲ್ಲಾಧಿಕಾರಿಗಳು ಖಾತೆಗಳನ್ನು ವಿತರಿಸಲಿದ್ದಾರೆ.
ರಾಜ್ಯದಲ್ಲಿ ಲಕ್ಷಾಂತರ ಪೌತಿ ಖಾತೆಗಳಿದ್ದು, ಇವು ಕಾಲಾನುಕಾಲಕ್ಕೆ ವಾರಾಸುದಾರರಿಗೆ ವರ್ಗಾವಣೆಯಾಗದೆ ತೊಂದರೆಯಾಗುತ್ತಿದೆ. ಪೌತಿ ವರ್ಗಾವಣೆಗೆ ಪ್ರತಿ ಹಂತದಲ್ಲೂ ಡಿ ದರ್ಜೆಯಿಂದ ಉನ್ನತ ಅಧಿಕಾರಿ ವರೆಗೆ ಲಂಚಕ್ಕಾಗಿ ಹಣದ ಹೊಳೆಯೇ ಹರಿಯುತ್ತಿತ್ತು. ಜನರೂ ಬೇಸತ್ತು ಹೋಗಿದ್ದರು.
ಗ್ರಾಮಸಭೆಯಲ್ಲಿ ಇಡೀ ಊರಿನವರೇ ಭಾಗವಹಿಸಿರುತ್ತಾರೆ. ಈ ಸಮಯದಲ್ಲಿ ಮೃತರ ಹೆಸರಿನಲ್ಲಿರುವ ಪೌತಿ ಖಾತೆಯನ್ನು ವರ್ಗಾಯಿಸುವಾಗ ಅವರ ಮಕ್ಕಳು, ಸೊಸೆಯರು, ಮೊಮ್ಮಕ್ಕಳ ವಿವರವನ್ನು ಸ್ಥಳೀಯರಿಂದ ಖಚಿತಪಡಿಸಿಕೊಳ್ಳಲು ಅವಕಾಶವಿದೆ.
'ಪೌತಿ ಖಾತೆ'ಗಳನ್ನು ಇತ್ಯರ್ಥ ಮಾಡುವಾಗ ವಂಶವೃಕ್ಷವನ್ನು ಸರಿಯಾಗಿ ನೀಡಲಾಗುತ್ತಿಲ್ಲ. ಮೃತರ ಮಕ್ಕಳು, ಮೊಮ್ಮಕ್ಕಳು, ಇನ್ನಿತರರು ಬೇರೆ ಸ್ಥಳದಲ್ಲಿದ್ದರೆ ಅವರ ಹೆಸರನ್ನೇ ಕೈ ಬಿಡಲಾಗುತ್ತಿತ್ತು. ಹೆಣ್ಮಕ್ಕಳ ಹೆಸರನ್ನೂ ಹಲವೆಡೆ ಕೈಬಿಟ್ಟ ಬಗ್ಗೆ ದೂರುಗಳು ಕೇಳಿಬಂದಿದ್ದವು.
ಪೌತಿ ಖಾತೆ ವರ್ಗಾಯಿಸುವ ಕೆಲಸ ಸ್ಥಳದಲ್ಲೇ ಇತ್ಯರ್ಥವಾದರೆ ಈ ಅಪಸ್ವರ ತಪ್ಪಿದಂತಾಗುತ್ತದೆ ಎಂದು ಕಂದಾಯ ಸಚಿವಾಲಯ ಅಭಿಪ್ರಾಯಪಟ್ಟಿದೆ.
ಪೌತಿ ಖಾತೆ ಇದ್ದರೆ, ಮೃತರ ಜೀವಂತ ವಾರಿಸುದಾರರಿಗೆ ಖಾತೆ ವರ್ಗಾವಣೆ ಮಾಡುವುದು ವಿಪರೀತ ವಿಳಂಬ ಆಗುತ್ತಿತ್ತು. ಡಿ ದರ್ಜೆ ನೌಕರನಿಂದ ಅಧಿಕಾರಿಗಳು ಪ್ರತಿ ಹಂತಕ್ಕೆ ಸಾವಿರಕ್ಕೂ ಅಧಿಕ ಹಣವನ್ನು ಅರ್ಜಿದಾರರಿಂದ ಪಡೆದುಕೊಳ್ಳುತ್ತಿದ್ದರು. ಮಿತಿ ಮೀರಿದ ಭ್ರಷ್ಟಾಚಾರದಿಂದ ಜನ ಬೇಸತ್ತು ಹೋಗಿದ್ದರು.
ಈ ನಿಟ್ಟಿನಲ್ಲಾದರೂ, ಕನಿಷ್ಟ ಭ್ರಷ್ಟಾಚಾರಕ್ಕೆ ಸ್ವಲ್ಪ ಕಡಿವಾಣ ಬೀಳಬಹುದು ಎಂದು ಜನರ ಆಶಯ.