ಹೆತ್ತೂರಿನ ಹೆಮ್ಮೆಯ ಎಚ್‌ಪಿ ಸಂದೇಶ್: ಹೈ ಕೋರ್ಟ್ ನ್ಯಾಯಮೂರ್ತಿ ಆಗಿದ್ದರೂ ಕಷ್ಟಕ್ಕೆ ಜಮೀನು ಮಾರಾಟ ಮಾಡಿದ್ದು ಸತ್ಯ...!!!
ಹೆತ್ತೂರಿನ ಹೆಮ್ಮೆಯ ಎಚ್‌ಪಿ ಸಂದೇಶ್: ಹೈ ಕೋರ್ಟ್ ನ್ಯಾಯಮೂರ್ತಿ ಆಗಿದ್ದರೂ ಕಷ್ಟಕ್ಕೆ ಜಮೀನು ಮಾರಾಟ ಮಾಡಿದ್ದು ಸತ್ಯ...
ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಸಂಜಾತ ಹೈಕೋರ್ಟ್ ನ್ಯಾಯಮೂರ್ತಿ ಈಗ ದೇಶಾದ್ಯಂತ ಸುದ್ದಿಯಲಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ದನಿ ಎತ್ತಿದ್ದಾರೆ. ಅವರ ಒಂದೊಂದು ಮಾತುಗಳು ಹಾಲಿ ಸರ್ಕಾರಕ್ಕೆ ಚಾಟಿ ಬೀಸಿವೆ. ಹೈಕೋರ್ಟ್ ಜಡ್ಜ್ ಒಬ್ಬರು ಹೀಗೆ ಬಹಿರಂಗವಾಗಿ ಧ್ನನಿ ಎತ್ತಿದ್ದು ಕರ್ನಾಟಕದ ಇತಿಹಾಸದಲ್ಲಿ ಇದೇ ಮೊದಲು.
ನನ್ನ ಹುಟ್ಟೂರು ಇದೇ ಆಗಿರುವುದರಿಂದ ಹೆತ್ತೂರು ಎಂದಾಕ್ಷಣ ಒಂದಷ್ಟು ನನ್ನ ಗೆಳೆಯರು ನನಗೆ ಕರೆ ಮಾಡಿದ್ದರು. ಎಲ್ಲರಿಗೂ ಒಂದೇ ಕುತೂಹಲ!
ಭ್ರಷ್ಟಾಚಾರ ದ ಬಗ್ಗೆ ದನಿ ಎತ್ತಿದ್ದಕ್ಕಿಂತ ಬಹುತೇಕರಿಗೆ ಕುತೂಹಲ ಇದ್ದಿದ್ದು ಅವರು ಹೇಳಿದ 'ನಾವು ನಾಲ್ಕು ಎಕರೆ ಜಮೀನು ಮಾರಿದ್ದೇವೆ’ ಎಂಬ ಮಾತು.
ಒಬ್ಬ ಹೈ ಕೋರ್ಟ್ ಜಡ್ಜ್ ಸಾಲ ತೀರಿಸಲೋ, ತೋಟಕ್ಕೆ ಗೊಬ್ಬರ ಹಾಕಿಸಲು, ಕಾಫಿ ಗಿಡ ನೆಡಲು, ಜಮೀನು ಉಳಿಮೆ ಮಾಡಲು ನಾಲ್ಕೆಕರೆ ಜಮೀನು ಮಾರುತ್ತಾರೆಂದರೆ ಇದು ನಂಬುವ ಮಾತೇ ...? ಈ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ.
ನನಗೆ ಕರೆ ಮಾಡಿದ್ದ ಅಷ್ಟು ಜನರೂ ಕೂಡ ಕೇಳಿದ್ದು ನಾಲ್ಕೆಕಕರೆ ಜಮೀನು ಮಾರಿರುವುದು ನಿಜವೇ...? ಈ ಎಂಬ ಪ್ರಶ್ನೆ ಇಟ್ಟುಕೊಂಡೇ ಮಾತನಾಡಿಸಿದರು.
ನನ್ನನ್ನು ಒಳಗೊಂಡಂತೆ ಎಲ್ಲರನ್ನು ಕಾಡುವ ಪ್ರಶ್ನೆ ಇದು. ದೊಡ್ಡ ದೊಡ್ಡವರ ಪ್ರಕರಣಗಳಲ್ಲಿ ಒಂದು ಬೇಲ್ ಕೊಡಿಸಿದರೆ ಸಾಕು ಕೋಟಿಗಟ್ಟಲೆ ಹಣ ನೀಡುತ್ತಾರೆ. ಜಡ್ಜ್ ಗಳನ್ನು ಕೊಂಡುಕೊಳ್ಳುವ ಜನರಿದ್ದಾರೆ ಎಂಬ ಮಾತಿನ ಈ ಕಾಲದಲ್ಲಿ ಹೈ ಕೋರ್ಟ್ ಜಡ್ಜ್ ಒಬ್ಬರು ನಾಲ್ಕೆಕರೆ ಜಮೀನು ಮಾರಿದ್ದೇನೆ.... ಬೇಕಿದ್ದರೆ ಹೋಗಿ ಪರಿಶೀಲಿಸಬಹುದು ಎಂದು ಬಹಿರಂಗವಾಗಿ ಹೇಳುತ್ತಾರೆಂದರೆ ಅವರ ಆತ್ಮಸ್ಥೈರ್ಯ, ಬದ್ದತೆ ಹೇಗಿರಬಹುದು ಎಂದು ನೀವೇ ಊಹಿಸಿಕೊಳ್ಳಿ....!
ಅನೇಕರು ನನಗೆ ಕರೆ ಮಾಡಿ ಕೇಳಿದ್ದಕ್ಕೆ ಎರಡು ಕಾರಣಗಳಿವೆ ಒಂದು ಅವರು ಹುಟ್ಟಿ ಬೆಳೆದ ಹೆತ್ತೂರಿನವನು ನಾನು ಕೂಡ. ಎರಡನೆಯದು ಅವರು ಹೈ ಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕವಾದಾಗ ನಮ್ಮ ಭಾವ ಮದನ ಗೌಡರು ಮತ್ತು ನಾವೆಲ್ಲ ಸೇರಿಕೊಂಡು 2019 ಫೇಬ್ರವರಿ 9 ರಂದು ಹಾಸನದ ರಾಮ ಹೋಟೆಲ್ ನಲ್ಲಿ ಅವರಿಗೆ ಗೌರವ ನೀಡುವ ಅಭಿನಂದನೆ ಕಾರ್ಯಕ್ರಮ ಮಾಡಿದ್ದೆವು. ಅಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸೇರಿದಂತೆ ಗಣ್ಯರು ಬಂದಿದ್ದರು ಯಶಸ್ವಿ ಕಾರ್ಯಕ್ರಮ ನಡೆಸಿದ್ದೆವು.
ನನಗೆ ಅವರ ಪರಿಚಯವಾಗಿದ್ದು 10 ವರ್ಷದ ಹಿಂದೆ. ಅದಾದ ನಂತರ ಮತ್ತೆ ಭೇಟಿಯಾಗಿದ್ದು ಈ ಕಾರ್ಯಕ್ರಮದಲ್ಲೆ. ನನ್ನ ಬರವಣಿಗೆ ಹಾಗೂ ಪತ್ರಿಕೋದ್ಯಮದ ಬಗ್ಗೆ ಗೊತ್ತಿದ್ದ ಅವರು ಎರಡನೆ ಬಾರಿ ಸಿಕ್ಕಾಗ 'ಚೆನ್ನಾಗಿ ಬೆಳೆಯುತ್ತಿದಿದ್ದೀಯಾ Keep it up. ಹುಟ್ಟಿದ ಊರಿಗೆ ಮತ್ತು ನಮ್ಮೆಲ್ಲರಿಗೂ ಗೌರವ ತರಬೇಕು’ ಎಂದು ಬೆನ್ನು ತಟ್ಟಿದ್ದರು. ಅವರ ಮಾತಿಗೆ ಮೂಖನಾಗಿದ್ದೆ. ಏಕೆಂದರೆ ಹೈ ಕೋರ್ಟ್ ಜಡ್ಜ್ ಒಬ್ಬರು ಹೀಗೆ ಹೇಳುವಾಗ ಆದ ಸಂತೋಷ ಅಷ್ಟಿಷ್ಟಲ್ಲ. ಅವರ ನಂಬರ್ ಕೂಡ ಕೊಟ್ಟು ಬೆಂಗಳೂರಿನ ಕಡೆ ಬಂದಾಗ ಮನೆಯವರನ್ನು ಕರೆದುಕೊಂಡು ಮನೆಗೆ ಬನ್ನಿ ಎಂದಿದ್ದರು. ಊರು, ಅಪ್ಪ, ಅಮ್ಮ, ಮಾವನ ಬಗ್ಗೆ ವಿಚಾರಿಸಿಕೊಂಡಿದ್ದರು.
ಇದಾಗಿ ಮೂರು ವರ್ಷ ಕಳೆದಿದೆ. ಹೈ ಕೋರ್ಟ್ ನ್ಯಾಯಾಧೀಶರೊಬ್ಬರು ಎತ್ತಿದ ಪ್ರಶ್ನೆಗಳು ಮತ್ತು ಅವರ ಬದ್ದತೆಯ ಬಗೆಗಿನ ಬಗ್ಗೆ ನನ್ನ ಒಂದೆರಡು ಅನಿಸಿಕೆ ಹೇಳಲೇಬೇಕಿದೆ.
ಮೂರು ತಿಂಗಳ ಹಿಂದೆ ಹಾಸನದ ನಿರ್ಮಾಪಕ, ಗುತ್ತಿಗೆದಾರರೊಬ್ಬರು ಸಿಕ್ಕಿ ಪರಿಚಯ ಆದರು. ಮಾತನಾಡುತ್ತಾ ಹೆತ್ತೂರು ಎಂದಾಕ್ಷಣ ಸಹಜವಾಗಿ ಸಂದೇಶ್ ಅವರ ಹೆಸರು ಪ್ರಸ್ತಾಪವಾಯಿತು. ಅವರಿಗೆ ಸಂದೇಶ್ ಅವರು ಪರಿಚಯವಿದ್ದರು. ಅವರದೇ ಗೆಳೆಯನ ಒಂದು ಪ್ರಮುಖ ಕೇಸ್ ಬೇಲ್ ಗಾಗಿ ಇವರ ಬೆಂಚ್ ಮುಂದೆ ಬರುವುದಿತ್ತು. ಸಹಜವಾಗಿ ಏನಾದರೂ ಸಹಾಯ ಮಾಡಬಹುದೆಂದು ಸಂದೇಶ್ ಅವರ ಮನೆಗೆ ಹೋದರು. ಮಾತನಾಡಿದ ನಂತರ "ಹೀಗೆ ಗೆಳೆಯನ ಕೇಸಿದೆ ಸ್ವಲ್ಪ ಸಹಾಯ ಮಾಡಿ’ ಎಂದು ಕೇಳಿಕೊಂಡರು. ಮಾರನೆ ದಿನ ಆ ಕೇಸ್ ಬಂದಾಗ ಆ ವ್ಯಕ್ತಿ ಕಟಕಟೆಯಲ್ಲಿ ನಿಂತಿದ್ದರು. ಆತನನ್ನು ಕಂಡ ಕೂಡಲೇ ಕೆಂಡಾಮಂಡಲರಾದ ಸಂದೇಶ್ ಇನ್ಫ್ಲೂಯನ್ಸ್ ಮಾಡಿಸುತ್ತೀರಾ...? ಎಂದು ತರಾಟೆಗೆ ತೆಗೆದುಕೊಂಡಿದ್ದಲ್ಲದೇ. ಇನ್ನೊಮ್ಮೆ ಹೀಗೆ ಮಾಡಿದರೆ ಸರಿ ಇರುವುದಿಲ್ಲ ಎಂದು ಹೇಳಿ ಆಗಬೇಕಿದ್ದ ಬೇಲ್ ಮುಂದಕ್ಕೆ ಹೋಯ್ತು. ಊರು -ಮನೆ ಎಂದು ಹೋದರೆ ಅವರು ಮಾಡಿದ್ದು ಹೀಗೆ ಎಂದು ನನ್ನೊಂದಿಗೆ ಹಂಚಿಕೊಂಡರು. ಬೇಸರಿಸಿಕೊಂಡರು.
ಹಾಗಾಗಿ ಅವರಿಗೆ ಸಹಾಯ ಮಾಡಿ ಎಂದು ಹೋಗುವರು ವಿರಳ ಎಂದೇ ಹೇಳುತ್ತಾರೆ. ಕಾನೂನು ನೀಡುವ ವಿಷಯದಲ್ಲಿ ಊರು ಅಣ್ಣ, ತಮ್ಮ , ಬಂಧು ಬಾಂಧವ ಯಾವುದೂ ಪರಿಗಣಿಸುವುದಿಲ್ಲ. ಸಂವಿಧಾನಕ್ಕಷ್ಟೆ , ಕಾನೂನಿಗಷ್ಟೆ ಗೌರವ ಕೊಡುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿ.
ನನಗೆ ಕರೆ ಮಾಡಿದ್ದವರು ಕೇಳಿದ ಇನ್ನೊಂದು ಪ್ರಶ್ನೆ ಅವರಿಗೆ ಜಾತಿ ಪ್ರೇಮ ಇದೆಯೇ...? ಎಂದು.
ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಅವರ ಬಗ್ಗೆ ನಾನು ಹೇಳಿದ್ದು ಒಂದೇ ಮಾತು ಅವರ ವಿಷಯದಲ್ಲಿ 'ನಾವೇ ಸ್ವಲ್ಪ ಜಾಸ್ತಿ ಜಾತಿವಾದಿಗಳು' ಎಂದೆ.
ಇದರ ಹೊರತಾಗಿ ಅವರು ನಮ್ಮೂರಿಗೆ ಸಹಾಯ ಮಾಡಿದ್ದಾರೆಂದರೆ ಫಸ್ಟ್ ಗ್ರೇಡ್ ಕಾಲೇಜು ಉಳಿಸಿಕೊಟ್ಟಿದ್ದು. ವಿದ್ಯಾರ್ಥಿಗಳು ದಾಖಲಾತಿ ಇಲ್ಲ ಎಂದು ಹೆತ್ತೂರಿನ ಫಸ್ಟ್ ಗ್ರೇಡ್ ಡಿಗ್ರಿ ಕಾಲೇಜನ್ನು ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಸೇರಿದ ಅಗತ್ಯ ವಿದ್ಯಾರ್ಥಿಗಳ ಫೀಸನ್ನು ಕಟ್ಟಿ ವಿದ್ಯಾರ್ಥಿಗಳಿಗಾಗಿ ಹಾಗೂ ಊರಿಗಾಗಿ ಕಾಲೇಜನ್ನು ಉಳಿಸಿಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ
ನಾಲ್ಕೆಕರೆ ಮಾರಿರುವುದು ನಿಜ:
ಹೌದು ಕಷ್ಟಕ್ಕಾಗಿ ಹೈ ಕೋರ್ಟ್ ಜಡ್ಜ್ ಒಬ್ಬರು ನಾಲ್ಕೆಕರೆ ಮಾರುತ್ತಾರೆಂದರೆ ನಂಬುವ ಮಾತಾ...? ಆದರೂ ಕೂಡ ಅದು ಸತ್ಯ. ಸಂದೇಶ್ ಅವರದ್ದು ಜಾಯಿಂಟ್ ಫ್ಯಾಮಿಲಿ. ಇಂದಿಗೂ ಎಲ್ಲರೂ ಒಟ್ಟಿಗೆ ಇದ್ದಾರೆ ಮೆಕ್ಕಿರ ಮನೆ ಗ್ರಾಮದಲಿದ್ದ ನಾಲ್ಕು ಎಕರೆ ತರಿ ಜಮೀನನ್ನು ನಾಲ್ಕು ವರ್ಷದ ಹಿಂದೆ ಕಷ್ಟ ಎಂದಾಗ ಅವರ ತಮ್ಮ ಸತೀಶ್ ಅವರಿಗೆ ಅನುಕೂಲವಾಗಲು ಮಾರಾಟ ಮಾಡಿದ್ದಾರೆ. ಖುದ್ದು ಸಂದೇಶ್ ಅವರು ಬಂದು ಸಹಿ ಹಾಕಿ ಹೋಗಿದ್ದಾರೆ . ಹೀಗೆಂದು ಸತೀಶ್ ತಿಳಿಸಿದ್ದಾರೆ. ಮೂವರು ಸೋದರರ ಪೈಕಿ ಸತೀಶ್ ಊರಲ್ಲಿ ಜಮೀನು ಮಾಡಿಕೊಂಡಿದ್ದು ಹೇಮಂತ್ ಎನ್ನುವರು ಬೆಂಗಳೂರಿನಲ್ಲಿ ಬೇಕರಿ ಮಾಡಿಕೊಂಡಿದ್ದಾರೆ. ಇವರಿರುವ ಸ್ಥಾನಕ್ಕೆ ಜಮೀನು ಉಳಿಸಿಕೊಳ್ಳುವುದು ಕಷ್ಟವಿರಲಿಲ್ಲ. ಆದರೆ ಯಾರನ್ನೂ ಕೈ ಚಾಚದೆ ಸ್ವಾಭಿಮಾನದಿಂದ ಬದುಕುತ್ತಿರುವ ಕುಟುಂಬ ಇದು. ಸಂದೇಶ್ ಅವರು ಕೂಡ ಎಲ್ಲರಿಗೂ ಆ ಪಾಠವನ್ನೇ ಹೇಳಿಕೊಟ್ಟಿದ್ದಾರೆ. ಕಷ್ಟ ಕಾಲದಲ್ಲಿ ಜಮೀನು ಮಾರಿದ್ದೇವೆ ಇಂದಿಗೂ ತಮ್ಮ ಸಂದೇಶ್ ಬಂದಾಗ ತೋಟಕ್ಕೆ ಬರುತ್ತಾರೆ... ನೋಡುತ್ತಾರೆ. ಗಿಡ ಹಾಕಿಸಲು ಅಥವಾ ಕೆಲಸ ಮಾಡಿಸಲು , ಹುಷಾರಿಲ್ಲದಿದ್ದಾಗ ಆಸ್ಪತ್ರೆಗೆ ಎಂದು ಸಹಾಯ ಹಣ ಹಾಕುತ್ತಾರೆ . ಅದೇನಿದ್ದರೂ ಸಾವಿರಗಳಲ್ಲಿ ಮಾತ್ರ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಅವರಿಂದ ಪಡೆಯುತ್ತೇವೆ’ ಎನ್ನುತ್ತಾರೆ ಸತೀಶ್.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಸಂದೇಶ್ ಮುಂದೆ ತಾಯಿಯನ್ನೂ ಕಳೆದುಕೊಂಡರು. ಎಲ್ಲರನ್ನೂ ಅಮ್ಮನೇ ಓದಿಸಿದ್ದು. ಆಗ ಏಲಕ್ಕಿ ಮಾರಿ ಅದರಲ್ಲಿ ಬಂದ ಹಣದಲ್ಲಿ ಎಲ್ಲರನ್ನೂ ಓದಿಸಿದರು. ಹೆತ್ತೂರಿನಲ್ಲಿ ಪ್ರಾಥಮಿಕ ಶಾಲೆ ಓದು ಮುಗಿಸಿ ಹೈಸ್ಕೂಲು ಕಾಲೇಜು ಸಕಲೇಶಪುರದಲ್ಲಿ . ನಂತರ ಹಾಸನದದಲ್ಲಿ ಕಾನೂನು ಪದವಿ ಪಡೆದುಕೊಂಡು ಹೈ ಕೋರ್ಟ್ ಜಡ್ಜ್ ಆಗುವವರೆಗೆ ಬೆಳೆದು ನಿಂತವರು. ಇಂದಿಗೂ ಊರಿನಲ್ಲಿ ನಡೆಯುವ ಸುಗ್ಗಿಗೆ ಪ್ರತಿ ವರ್ಷ ಬಂದು ಹೋಗುತ್ತಾರೆ.
ಸಾಲ ಆದಾಗ ಮಾರಿದೆವು
ಸ್ವಲ್ಪ ಸಾಲ ಇತ್ತು, ತೋಟ ಮಾಡಲು ಕಷ್ಟ ಆಗಿತ್ತು ಹಣಕಾಸು ಬೇಕಾಗಿತ್ತು ಮಾರಿದ್ದೇವೆ. ಜಮೀನು ಮಾಡುವ ಪರಿಸ್ಥಿತಿ ಬಂದಿತ್ತು ನಾನು ಸಾಲ ಮಾಡಿಕೊಂಡಿದ್ದೆ ಆಗ ಕುಂಟೆಗೆ ಐದು ಸಾವಿರ ಎಂದು ಮಾರಿದ್ದು ನಿಜ. ಅದು ತರಿ ಜಮೀನು. ಮಾರುತ್ತೇನೆಂದು ಕೇಳಿದಾಗ ಆಯ್ತು ಮಾರಿ ಬಂದು ಸೈನ್ ಹಾಕುತ್ತೇನೆಂದು ಹೇಳಿ ಬಂದು ಸಹಿ ಹಾಕಿದರು.ನಮ್ಮ ಆಸ್ತಿ ಭಾಗ ಮಾಡಿಲ್ಲ ಮೂರು ಜನ ಇದ್ದೇವೆ. ಹೇಮಂತ್ ಬೇಕರಿ ಇಟ್ಟುಕೊಂಡಿದ್ದಾನೆ. ಇವರು ಹೈ ಕೋರ್ಟ್ ಜಡ್ಜ್ ಆಗಿ ಒಂದು ಅಂಗುಲ ಜಮೀನು ಮಾಡಿಲ್ಲ. ನಮಗೆ ಈಗ ಉಳಿದಿರುವುದು 7 ಎಕರೆ ಇದೆ. ಯಾರಾದರೂ ಸಹಾಯ ಮಾಡಿ ಅಣ್ಣನಿಗೆ ಒಂದು ಮಾತು ಹೇಳಿ ಎಂದು ಕೆಲವರು ಬರುತ್ತಾರೆ ಅಣ್ಣ ಅಂತಹವರನ್ನು ಆಲೋ ಮಾಡುವುದೇ ಇಲ್ಲ. ಊರಿಗೆ ಬಂದಾಗ ಮನೆಗೆ ಬರುತ್ತಾರೆ . ಎಪ್ರಿಲ್ ನಲ್ಲಿ ರಜೆ ಮಾಡಿ ಬಂದಿದ್ದರು. ಒಟ್ಟಿಗೆ ತೋಟಕ್ಕೆ ಹೋಗುತ್ತೇವೆ - ಸತೀಶ್ , ಹಿರಿಯ ಸಹೋದರ
ಯಾರಿಗೂ ಮೋಸ ಮಾಡಬಾರದು ಎಂದು ಹೇಳುತ್ತಾರೆ.
"ಯಾರಿಗೂ ಅನ್ಯಾಯ ಮಾಡಬಾರದು, ಮೋಸ ಮಾಡಬಾರದು. ನಾವೇನಾದರೂ ಸಂಘ-ಸಂಸ್ಥೆ ಮಾಡಿದ್ದರೆ ಅದು ಇನ್ನೊಬ್ಬರ ದುಡ್ಡು.. ನಮ್ಮದಲ್ಲ.." ಕಂಡೋರ ದುಡ್ಡು ತಿನ್ನಬಾರದು ಎಂದು ಹೇಳುತ್ತಾರೆ. ನಾವು ತಾತ ಮಾಡಿದ ಮನೆಯಲಿದ್ದೆವು ಈಗ ಗೌಡಪ್ಪನ ಕೆರೆ ಹತ್ತಿರ ಇದ್ದೇವೆ" - ಸತೀಶ್
ಗೌರವಾನ್ವಿತ ನ್ಯಾಯಮೂರ್ತಿಗಳಾದ ಹೆಚ್.ಪಿ. ಸಂದೇಶ್ ಸರ್, ದೇವರು ಕೊಟ್ಟ ವರ. ನಾನು ಸದಾ ನಮ್ಮ ದೇಶದ ಎಲ್ಲಾ ನ್ಯಾಯಾಲಯದ ನ್ಯಾಯ ಮೂರ್ತಿಗಳನ್ನು ಮತ್ತು ಐಎಎಸ್ ಅಧಿಕಾರಿಗಳನ್ನು ದೇವರ ಸ್ಥಾನದಲ್ಲಿ ನೋಡುತ್ತೇನೆ, ನಾನಷ್ಟೆ ಅಲ್ಲಾ, ಈ ದೇಶದ ಪ್ರತಿಯೊಬ್ಬ ಉತ್ತಮ ಪ್ರಜೆಯು, ಇವರನ್ನು ಇದೇ ದೃಷ್ಟಿಯಲ್ಲಿ ನೋಡುತ್ತಾರೆ. ಯಾಕೆಂದರೆ ತಪ್ಪು ಮಾಡಿದವರಿಗೆ ಅಂತಿಮವಾಗಿ ಶಿಕ್ಷೆ ಕೊಡುವ ಶಕ್ತಿ ಇರೋದು ಮತ್ತು ಅವರನ್ನು ಶಿಕ್ಷೆಕೊಡುವ ಮುಖಾಂತರ ಒಳ್ಳೆಯ ವ್ಯಕ್ತಿಯಾಗಿ ಪರಿವರ್ತನೆ ಮಾಡುವ ಶಕ್ತಿ ಇರೋದು ನ್ಯಾಯಮೂರ್ತಿಗಳಿಗೆ ಮಾತ್ರ ಹಾಗೂ ಈ ದೇಶದ ಪಾಲಸೀ ಮೇಕರ್ಸ್ ಐಎಎಸ್ ಅಧಿಕಾರಿಗಳು. ಹಾಗಾಗಿ ಇವರಿಬ್ಬರನ್ನು ನಾನು ದೇವರ ಸ್ಥಾನದಲ್ಲಿ ನೋಡುತ್ತೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆ, ಎರಡೂ ಜನಸಾಮಾನ್ಯರ ನಂಬಿಕೆ ಕಳೆದುಕೊಂಡಿವೆ. ಇಂತಹ ಸಮಯದಲ್ಲಿ, ಮಾನ್ಯ ನ್ಯಾಯಮೂರ್ತಿಗಳಾದ ಸಂದೇಶ್ ಸರ್ ನಿಲುವು, ನಮ್ಮಗಳಲ್ಲಿ, ನ್ಯಾಯಾಂಗದ ಮೇಲೆ ಪುನಃ ನಂಬಿಕೆ ಬರಲು ಶುರುವಾಗಿದೆ. ಇತ್ತೀಚೆಗೆ, ಹೆತ್ತೂರಿನ ಅಂದರೆ ಸಂದೇಶ್ ಸರ್ ಹುಟ್ಟೂರಿನ ಡಿಗ್ರಿ ಕಾಲೇಜಿನಲ್ಲಿ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ, ಅಲ್ಲಿ ಆ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಮೇಡಂ, ಒಂದು ಅಚ್ಚರಿಯ ವಿಷಯ ಹೇಳಿದರು, ಅದೇನೆಂದರೆ ಪ್ರತೀ ವರ್ಷ ಹೆತ್ತೂರಿನ ಡಿಗ್ರಿ ಕಾಲೇಜ್ ಗೆ ಸೇರು ಎಲ್ಲಾ ವಿದ್ಯಾರ್ಥಿಗಳ ಫೀ ನ್ನು ಸಂದೇಶ್ ಸರ್ ಭರಿಸುತಿದ್ದಾರೆ" ಅಂತ. ನಿಜವಾಗಿಯೂ ಅಂದು ನಾನು ಮನಸ್ಸಿನಲ್ಲೇ ಅವರಿಗೆ ಧನ್ಯವಾದ ಅರ್ಪಿಸಿದೆ. ಇಂತಹ ಮಹಾನ್ ವ್ಯಕ್ತಿಗಳು ಈ ವ್ಯವಸ್ಥೆಯಲ್ಲಿ ಇರುವುದು, ಈ ದೇಶದ ಒಬ್ಬ ಪ್ರಜೆಯಾಗಿ ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳಲು ಸಂತಸವಾಗುತ್ತದೆ.
- ಕವಿತಾ ಕೆ.ಆರ್., ಜ್ಯೂನಿಯರ್ ಇಂಜಿನಿಯರ್, ನಗರಸಭೆ, ಹಾಸನ.
ಟಿವಿ9 ಹೆಮ್ಮೆಯ ಕನ್ನಡತಿ ಪ್ರಶಸ್ತಿ ವಿಜೇತೆ
ಬರಹ ಸಂಗ್ರಹ: ಹೆತ್ತೂರು ನಾಗರಾಜ್, ಪತ್ರಕರ್ತ