RTI ಅಡಿ ವಿಳಂಬ ಮಾಹಿತಿ: BEO ಮಾಹಿತಿ ಅಧಿಕಾರಿಗೆ 35 ಸಾವಿರ ದಂಡದ ಬರೆ!
RTI ಅಡಿ ವಿಳಂಬ ಮಾಹಿತಿ: BEO ಮಾಹಿತಿ ಅಧಿಕಾರಿಗೆ 35 ಸಾವಿರ ದಂಡದ ಬರೆ!
ಬೆಂಗಳೂರಿನ ಕೆ. ಆರ್. ಪುರ ಕ್ಷೇತ್ರ ಶಿಕ್ಷಣಾಧಿಕಾರಿ (BEO)ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ರಾಜ್ಯ ಹೈಕೋರ್ಟ್ ಭರ್ಜರಿ 35 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಕಾಯ್ದೆಯಡಿ ವೈಟ್‌ಫೀಲ್ಡ್ ನಿವಾಸಿ ಸಿಜೋ ಸೆಬಾಸ್ಟಿನ್ ಎಂಬವರು ಕೋರಿದ್ದ ಮಾಹಿತಿ ಒದಗಿಸಲು 2 ವರ್ಷ ವಿಳಂಬ ಮಾಡಿದ ಕಾರಣ ಅಧಿಕಾರಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಮಾಹಿತಿ ಒದಗಿಸಲು ವಿಳಂಬ ಮಾಡಿದ್ದ BEO ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ದಂಡ ವಿಧಿಸಿದ ಕರ್ನಾಟಕ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ವೈಟ್‌ಫೀಲ್ಡ್ ನಿವಾಸಿ ಸಿಜೋ ಸೆಬಾಸ್ಟಿನ್ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಇದನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠ ಈ ಆದೇಶ ಮಾಡಿದೆ.
ಸಿಜೋ ಅವರು ಕೆಲವು ಮಾಹಿತಿಗಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಕೆ ಆರ್ ಪುರ BEO ಕಚೇರಿಗೆ 2019ರಲ್ಲಿ ಅರ್ಜಿ ಸಲ್ಲಿಸಿದ್ದರು. ಕಾಲಮಿತಿ ಅವಧಿ ಕಳೆದರೂ ಸಿಜೋ ಕೋರಿದ ಮಾಹಿತಿ ನೀಡಿರಲಿಲ್ಲ. ಸಾರ್ವಜನಿಕ ಮಾಹಿತಿ ಅಧಿಕಾರಿ ಶಂಕರ್ ವಿರುದ್ಧ ಅರ್ಜಿದಾರರು 2020ಲ್ಲಿ ಮಾಹಿತಿ ಹಕ್ಕು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ಆಯೋಗ ಶಂಕರ್‌ಗೆ 2021ರ ನವೆಂಬರ್ 10ರಂದು ನೋಟಿಸ್ ಜಾರಿ ಮಾಡಿತ್ತು. ಹಾಗೂ ಈ ನೋಟೀಸ್ ಬಳಿಕ 2021ರ ಡಿಸೆಂಬರ್ 13ರಂದು ಶಂಕರ್ ಸಂಬಂಧಪಟ್ಟ ಮಾಹಿತಿಯನ್ನು ಅಂಚೆ ಮೂಲಕ ಅರ್ಜಿದಾರರಿಗೆ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಗವು ಸದ್ರಿ ಮೇಲ್ಮನವಿಯನ್ನು 2022ರ ಜನವರಿ 25ರಂದು ಇತ್ಯರ್ಥಪಡಿಸಿತ್ತು.
ಪ್ರಕರಣದಲ್ಲಿ ಅರ್ಜಿದಾರರು ಕೋರಿದ್ದ ಮಾಹಿತಿ ಒದಗಿಸಲು 2 ವರ್ಷ ವಿಳಂಬ ಮಾಡಿದ್ದರೂ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಪೀಠ, ವಿಳಂಬ ಮಾಡಿದ ಕೆ.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪಿಐಒ ಶಂಕರ್‌ಗೆ 25 ಸಾವಿರ ರೂ. ದಂಡ ವಿಧಿಸಿತು. ಅರ್ಜಿದಾರ ಸಿಜೋ ಅವರಿಗೆ 10 ಸಾವಿರ ರೂ. ಪರಿಹಾರ ಪಾವತಿಸಲು ಆದೇಶಿಸಿತು.
ಶಂಕರ್ 30 ದಿನಗಳಲ್ಲಿ ದಂಡ ಹಾಗೂ ಪರಿಹಾರದ ಮೊತ್ತ ಪಾವತಿಸಬೇಕು. ಅದು ತಪ್ಪಿದರೆ, ಮೊದಲ 30 ದಿನಗಳಿಗೆ 2% ಹಾಗೂ ನಂತರದ ದಿನಗಳಿಗೆ 3% ಬಡ್ಡಿ ಪಾವತಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್ ಹೇಳಿದೆ.