ಸಂಚಲನ ಮೂಡಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆ: ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದ್ದೇನು?
ಸಂಚಲನ ಮೂಡಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆ: ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದ್ದೇನು?
ದೇಶಾದ್ಯಂತ ಸಂಚಲನ ಮೂಡಿಸಿದ್ದ ನ್ಯಾಯಮೂರ್ತಿಗಳ ವರ್ಗಾವಣೆ ಬೆದರಿಕೆ ಹಾಗೂ ನ್ಯಾ. ಎಚ್.ಪಿ. ಸಂದೇಶ್ ಅವರ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ವಿರುದ್ಧದ ಟಿಪ್ಪಣಿಗೆ ಮತ್ತೊಂದು ತಿರುವು ಸಿಕ್ಕಿದೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಉಪ ತಹಶೀಲ್ದಾರ್ ಮತ್ತು ಡಿಸಿ ಆಪ್ತ ಸಹಾಯಕ ಪಿ ಎಸ್ ಮಹೇಶ್ ಕುಮಾರ್ ಜಾಮೀನು ಅರ್ಜಿಯನ್ನು ಬಿಟ್ಟು ಉಳಿದ ಎಲ್ಲಾ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್, ಬಂಧಿತ ಡಿಸಿ ಜೆ ಮಂಜುನಾಥ್ ಸಲ್ಲಿಸಿರುವ ಮೂರು ಅರ್ಜಿ ವಿಚಾರಣೆ ನಡೆಸಿದ ಸಿಜೆಐ ನ್ಯಾ. ಎನ್ ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಈ ತಡೆಯಾಜ್ಞೆ ನೀಡಿದೆ.
ಮಾನ್ಯ ಹೈಕೋರ್ಟ್ ಮುಂದೆ ಇರುವ ಜಾಮೀನು ಅರ್ಜಿಯನ್ನು ತುರ್ತಾಗಿ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯದ ಹೈಕೋರ್ಟ್‌ಗೆ ನಿರ್ದೇಶನ ನೀಡಿದೆ. ಇದರ ಜೊತೆಗೆ, ಕಳೆದ ಜುಲೈ 7ರಂದು ಹೈಕೋರ್ಟ್ ನ್ಯಾ. ಎಚ್. ಪಿ. ಸಂದೇಶ್ ಅವರು ಮಾಡಿರುವ ಆಕ್ಷೇಪಾರ್ಹ ಆದೇಶ ಮತ್ತು ಇತರ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ತಡೆ ವಿಧಿಸಿದೆ.
ಸೀಮಂತ್ ಕುಮಾರ್ ಸಿಂಗ್ ಅವರ ಸೇವಾ ದಾಖಲೆ, 2016ರ ಬಳಿಕ ACB ಸಲ್ಲಿಸಿರುವ B ರಿಪೋರ್ಟ್‌ಗಳು, ಲಂಚ ಪ್ರಕರಣದಲ್ಲಿ ಆರೋಪಿ DC ಮಂಜುನಾಥ್ ಭಾಗಿಯಾಗಿರುವ ಆರೋಪ, ACB ಅಧಿಕಾರಿಗಳ ನಿರುತ್ಸಾಹ ಮುಂತಾದ ವಿಚಾರಗಳು ಅನಗತ್ಯ ಅಥವಾ ಈ ವಿಷಯಗಳು ಸದ್ರಿ ಪ್ರಕರಣದ ಆರೋಪಿಗಳ ನ್ಯಾಯಯುತ ವಿಚಾರಣೆಗೆ ಅಡ್ಡಿಯಾಗಲಿವೆ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ಹೇಳಿದೆ. ಆ ಕಾರಣಕ್ಕೆ ಹೈಕೋರ್ಟ್ ಆದೇಶಕ್ಕೆ ತಡೆ ನೀಡಲಾಗುತ್ತಿದೆ ಎಂದು ಪೀಠ ವಿವರಿಸಿದೆ.
ಸಂದೇಶ್ ನೇತೃತ್ವದ ನ್ಯಾಯಪೀಠ 2022ರ ಜುಲೈ 7 ಮತ್ತು 11ರಂದು ACB ಮತ್ತು ಸೀಮಂತ್ ಕುಮಾರ್ ಬಗ್ಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿತ್ತು ಮತ್ತು ಆದೇಶ ಹಾಳೆಯಲ್ಲಿ ನಮೂದಿಸಲಾಗಿತ್ತು. ಈ ಕ್ರಮವನ್ನು ಸುಪ್ರೀಂ ಕೋರ್ಟಿನಲ್ಲಿ ಮೂರು ವಿಶೇಷ ಮನವಿಗಳ ಮೂಲಕ ಪ್ರಶ್ನಿಸಲಾಗಿತ್ತು.
ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಅರ್ಹತೆ(ಮೆರಿಟ್) ಮೇಲೆ ನಿರ್ಧರಿಸುವ ಬದಲು ಹೈಕೋರ್ಟ್ ಇತರೆ ವಿಚಾರಗಳ ಮೇಲೆ ಗಮನವಿರಿಸಿದೆ. ಇವು ಅಪ್ರಸ್ತುತವಾಗಿವೆ. ಮತ್ತು ಇವೆಲ್ಲ ಮೇಲ್ನೋಟಕ್ಕೆ ವಿಚಾರಣೆಯ ವ್ಯಾಪ್ತಿ ಮೀರಿದ್ದಾಗಿದೆ ಎಂದು ನ್ಯಾಯಪೀಠ ಹೇಳಿದೆ.
ಆರೋಪಿ ಮಹೇಶ್ ಜಾಮೀನು ಅರ್ಜಿ ವಿಚಾರಣೆ ಯಾವುದೇ ಅಡ್ಡಿಯಾಗಬಾರದು. ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಹೈಕೋರ್ಟ್ ನ್ಯಾಯಪೀಠವನ್ನು ಕೋರುತ್ತೇವೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೂ ಆರೋಪಿ ಡಿಸಿ ಜೆ ಮಂಜುನಾಥ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಡೆಸಬೇಕು. ಇದಕ್ಕೆ ವಿಶೇಷ ಮನವಿ ಇತ್ಯರ್ಥವಾಗಲಿ ಎಂದು ಕಾಯಬಾರದು ನ್ಯಾಯಪೀಠ ಎಂದು ಸ್ಪಷ್ಟಪಡಿಸಿದೆ.