ವಕೀಲರ ವಿರುದ್ಧ ಕ್ರಮ: ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಿ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!
ವಕೀಲರ ವಿರುದ್ಧ ಕ್ರಮ: ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಲು ಸೂಚಿಸಿ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್!
'ಹಿರಿಯ ವಕೀಲ'ರೊಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವಕೀಲರ ಪರಿಷತ್(ಐಬಿಸಿ)ಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಸದ್ರಿ ಪ್ರಕರಣದಲ್ಲಿ ಮೇಲ್ಮನವಿ ಪ್ರಾಧಿಕಾರ ಐಬಿಸಿ. ಅಲ್ಲಿಗೆ ಮೊದಲು ಅರ್ಜಿ ಸಲ್ಲಿಸಬೇಕಿತ್ತು. ಅದನ್ನು ಬಿಟ್ಟು ಸಂವಿಧಾನದ ವಿಧಿ 32ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದೇಕೆ ಎಂದು ಪ್ರಶ್ನಿಸಿತು.
ಈ ಪ್ರಶ್ನೆಗೆ ಅರ್ಜಿದಾರರ ಪರ ವಕೀಲರು ಉತ್ತರ ನೀಡಿದರು. ಆದರೆ, ಈ ವಾದವನ್ನು ನ್ಯಾಯಪೀಠ ಒಪ್ಪಿಕೊಳ್ಳಲಿಲ್ಲ. ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅರ್ಜಿದಾರರಿಗೆ ಅವಕಾಶ ನೀಡಿ ಅರ್ಜಿಯನ್ನು ವಜಾಗೊಳಿಸಿತು.
ನ್ಯಾ. U.U. ಲಲಿತ್, ನ್ಯಾ. ರವೀಂದ್ರ ಭಟ್ ಮತ್ತು ನ್ಯಾ. ಸುಧಾಂಶು ದುಲಿಯಾ ಅವರಿದ್ದ ವಿಭಾಗೀಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತು.
ವಕೀಲರ ವಿರುದ್ಧದ ಅರ್ಜಿಯನ್ನು ಸಲ್ಲಿಸಲು ಭಾರತೀಯ ವಕೀಲರ ಪರಿಷತ್ ವನ್ನು ಸಂಪರ್ಕಿಸಬಹುದು ಎಂದು ಸುಪ್ರೀಂ ಕೋರ್ಟ್ ಸೂಚಿಸಿತು.
ಈ ಪ್ರಕರಣದಲ್ಲಿ ಆರೋಪಿತ ಹಿರಿಯ ವಕೀಲರು ಈ ಹಿಂದೆ ಸುಪ್ರೀಂಕೋರ್ಟ್ ಮುಂದೆ ಕೈಬರಹ ತಜ್ಞರ ವರದಿಯನ್ನು ವಂಚನೆ ಮೂಲಕ ಸಲ್ಲಿಸಿದ್ದು, SLP ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ಆ ಬಳಿಕ ಸದ್ರಿ ಆರೋಪಿ ಹಿರಿಯ ವಕೀಲರ ವಿರುದ್ಧ Advocates Act -1961ರ ಸೆಕ್ಷನ್ 35ರಡಿ 'ವೃತ್ತಿ ದುರ್ನಡನೆ' ಆರೋಪದಡಿ ಪಂಜಾಬ್ ಮತ್ತು ಹರಿಯಾಣ ವಕೀಲರ ಪರಿಷತ್ತು ಮತ್ತು ಐಬಿಸಿಗೆ ದೂರು ಸಲ್ಲಿಸಲಾಗಿತ್ತು. ಆದರೂ ಈ ಸಂಸ್ಥೆಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.