ವಕೀಲರ ಆರೋಗ್ಯ ವಿಮೆ: ಉಳಿದ 50 ಕೋಟಿ ರೂ. ನೀಡಲು ಸರ್ಕಾರಕ್ಕೆ ವಕೀಲರಿಂದ ಒತ್ತಾಯ
ವಕೀಲರ ಆರೋಗ್ಯ ವಿಮೆ: ಉಳಿದ 50 ಕೋಟಿ ರೂ. ನೀಡಲು ಸರ್ಕಾರಕ್ಕೆ ವಕೀಲರಿಂದ ಒತ್ತಾಯ
ರಾಜ್ಯದ ವಕೀಲರಿಗೆ ಆರೋಗ್ಯ ವಿಮೆ ಕಲ್ಪಿಸಲು 50 ಕೋಟಿ ರೂ. ನೀಡಲು ಒಪ್ಪಿರುವ ರಾಜ್ಯ ಸರ್ಕಾರ ಉಳಿದ 50 ಕೋಟಿ ರೂ. ಹೊಂದಿಸುವ ಜವಾಬ್ದಾರಿಯನ್ನು ವಕೀಲರಿಗೆ ನೀಡಿದೆ.
ಸರ್ಕಾರ ಮೂಲ ನಿಧಿಯಾಗಿ 50 ಕೋಟಿ ರೂ. ನೀಡಿದರೂ ಇನ್ನುಳಿದ ವಕೀಲರಿಂದ 50 ಕೋಟಿ ರೂ. ಹೊಂದಿಸಲು ವಕೀಲರ ಸಂಘದಿಂದ ಸಾಧ್ಯವಾಗದು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಂ ಕಾಶೀನಾಥ್ ಸ್ಪಷ್ಟವಾಗಿ ಸರ್ಕಾರಕ್ಕೆ ತಿಳಿಸಿದರು.
ಈ ಅಭಿಪ್ರಾಯಕ್ಕೆ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಕೆ ಬಿ ನಾಯಕ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರೂ ದನಿಗೂಡಿಸಿದ್ದು, ಉಳಿದ ಹಣವನ್ನೂ ವಕೀಲರ ಕಲ್ಯಾಣಕ್ಕಾಗಿ ಮೀಸಲಿಡುವಂತೆ ಕಾನೂನು ಇಲಾಖೆಗೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಎಂ ಮಾಧುಸ್ವಾಮಿ, ಬಾಕಿ ಇರುವ 50 ಕೋಟಿ ರೂಪಾಯಿ ಹೊಂದಿಸುವುದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸುವುದಕ್ಕೆ ಉಪ ಸಮಿತಿ ರಚಿಸಲು ವಕೀಲರ ಸಂಘಕ್ಕೆ ನಿರ್ದೇಶಿಸಿದರು.
ಕರ್ನಾಟಕದ ವಕೀಲ ಸಮುದಾಯ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಸೌಲಭ್ಯ ಯೋಜನೆ ರೂಪಿಸಲು ಒಟ್ಟು 100 ಕೋಟಿ ರೂಪಾಯಿ ಮೂಲನಿಧಿ ಸ್ಥಾಪಿಸಲು ಕರ್ನಾಟಕ ಸರ್ಕಾರದ ವತಿಯಿಂದ ನೆರವು ನೀಡುವ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಲಾಗಿತ್ತು.
ವಕೀಲರ ಆರೋಗ್ಯ ಯೋಜನೆಗೆ ಮೂಲ ನಿಧಿ ಸ್ಥಾಪಿಸಿ ಅದನ್ನು ನಿರ್ವಹಿಸಲು ನಿಯಮ ರಚಿಸುವ ಹಾಗೂ ನಿಧಿಯ ಪೂರ್ಣ ಪ್ರಮಾಣದ ಪ್ರಸ್ತಾವಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿತ್ತು. ಆದರೆ, ಅದನ್ನು ಷರತ್ತಿಗೆ ಒಳಪಟ್ಟು ಯೋಜನೆ ಜಾರಿಗೊಳಿಸಲು ಸರ್ಕಾರವು ತಾತ್ವಿಕ ಅನುಮೋದನೆ ನೀಡಿತ್ತು.
ಈ ವಿಷಯವನ್ನು ಕಾನೂನು ಇಲಾಖೆಯ ಆಡಳಿತ ವಿಭಾಗದ ಅಧೀನ ಕಾರ್ಯದರ್ಶಿ ಹೊರಡಿಸಿದ ಆದೇಶದಲ್ಲಿ ಸ್ಪಷ್ಟಪಡಿಸಲಾಗಿತ್ತು.