ಸಾರ್ವಜನಿಕ ಸಂಸ್ಥೆಯ ನೌಕರರು ಭ್ರಷ್ಟಾಚಾರ ನಿಗ್ರಹ ಕಾಯಿದೆ ವ್ಯಾಪ್ತಿಗೆ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸಾರ್ವಜನಿಕ ಸಂಸ್ಥೆಯ ನೌಕರರು ಭ್ರಷ್ಟಾಚಾರ ನಿಗ್ರಹ ಕಾಯಿದೆ ವ್ಯಾಪ್ತಿಗೆ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸರ್ಕಾರದ ಉದ್ಯೋಗಿಗಳು ಎಂದು ಪರಿಗಣಿಸಲ್ಪಡುತ್ತಾರೆ. ಈ ಹಿನ್ನೆಲೆಯಲ್ಲಿ, ಅವರು ಕೂಡ ಭ್ರಷ್ಟಾಚಾರ ನಿಗ್ರಹ ಕಾಯಿದೆ ವ್ಯಾಪ್ತಿಗೆ ಬರುತ್ತಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
"ಕರ್ನಾಟಕ ಹಾಲು ಮಹಾ ಮಂಡಳ" (KMF) ನೌಕರರಿಗೂ ಕೂಡ ಭ್ರಷ್ಟಾಚಾರ ನಿಗ್ರಹ ಕಾಯಿದೆ ಅನ್ವಯವಾಗುತ್ತದೆ ಎಂದು ನ್ಯಾ. ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.
ಭ್ರಷ್ಟತೆ ಎಂಬುದು ಎಲ್ಲೆಡೆ ಆಳವಾಗಿ ವ್ಯಾಪಿಸಿದೆ. ದೇಶದ ಜನಜೀವನ ಇದರಿಂದ ಬಾಧಿತವಾಗಿದೆ. ಸಾರ್ವಜನಿಕ ಆಡಳಿತಕ್ಕೆ ಇದು ಅಪಾಯಕಾರಿ. ವಿಭಿನ್ನ ಪ್ರಕಾರಗಳಲ್ಲಿ, ಸ್ವರೂಪದಲ್ಲಿ ಭ್ರಷ್ಟಾಚಾರ ಮೆರೆಯುತ್ತಿದೆ. ಭ್ರಷ್ಟಾಚಾರದ ವಿಷಯಕ್ಕೆ ಬಂದರೆ ಶೂನ್ಯ ಸಹಿಷ್ಣುತೆ (Zero Tolerence) ಅನಿವಾರ್ಯ. ಉತ್ತಮ ಆಡಳಿತಕ್ಕಾಗಿ ಇದು ಭದ್ರ ಬುನಾದಿ ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಭ್ರಷ್ಟಾಚಾರ ನಿಗ್ರಹ ಕಾಯಿದೆ ಪ್ರಕಾರ KMF ನೌಕರರು ಸಾರ್ವಜನಿಕ ಸೇವಕರಲ್ಲ. ಆ ಕಾರಣಕ್ಕೆ ಕಾಯಿದೆ ತಮಗೆ ಅನ್ವಯ ಮಾಡಲಾಗದು ಎಂದು ಅರ್ಜಿದಾರರು ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಅರ್ಜಿದಾರ ಕೃಷ್ಣಾರೆಡ್ಡಿ ಅವರು ಕೆಎಂಎಫ್‌ನ ನಿರ್ದೇಶಕರಾಗಿದ್ದು, ಆದಾಯಕ್ಕೆ ಮೀರಿದ ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದಾರೆ.
ವಾದವನ್ನು ಆಲಿಸಿದ ಬಳಿಕ ಸುದೀರ್ಘ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋರ್ಟ್, ನಂದಿನಿ ಬ್ರ್ಯಾಂಡ್‌ನ ಉತ್ಪನ್ನಗಳ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಮಹಾಮಂಡಳವು ಸಾರ್ವಜನಿಕ ಸಂಸ್ಥೆಯಾಗಿದ್ದು, ಅದರ ಉದ್ಯೋಗಿಗಳು ಕೂಡಾ ಸರ್ಕಾರದ ಉದ್ಯೋಗಿಗಳು ಎಂದು ಪರಿಗಣಿಸಲ್ಪಡುತ್ತಾರೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಡಿ ಅವರ ವಿರುದ್ಧ ಕ್ರಮ ಜರುಗಿಸಬಹುದು ಎಂದು ಹೇಳಿ, ವಿ ಕೃಷ್ಣಾರೆಡ್ಡಿ ವಿರುದ್ಧ ಎಸಿಬಿ ದಾಖಲಿಸಿದ ಪ್ರಕರಣವನ್ನು ರದ್ದುಗೊಳಿಸಬೇಕು ಎಂಬ ಅರ್ಜಿಯನ್ನು ವಜಾಗೊಳಿಸಿತು.
ಈ ಕುರಿತಂತೆ ಸುಪ್ರೀಂಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಸಾರ್ವಜನಿಕ ಸಿಬ್ಬಂದಿ ಬರುತ್ತಾರೆ. ಕೆಎಂಎಫ್ ಸಹಕಾರಿ ಸಂಘವಾಗಿದೆ. ಹಾಗಾಗಿ ಅವರನ್ನೂ ವಿಚಾರಣೆಗೆ ಒಳಪಡಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿತು.
20-11-2021ರಂದು ಎಸಿಬಿ ನಡೆಸಿದ ದಾಳಿ ವೇಳೆ, KMF ನಿರ್ದೇಶಕ ಕೃಷ್ಣಾರೆಡ್ಡಿ ಅವರ ಅಪಾರ ಪ್ರಮಾಣದ ಆಸ್ತಿಯನ್ನು ಪತ್ತೆ ಮಾಡಲಾಗಿತ್ತು ಮತ್ತು ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆಯ ಪ್ರಕರಣವನ್ನು ಹೂಡಲಾಗಿತ್ತು.