ಲೈಂಗಿಕ ದೌರ್ಜನ್ಯ: ಮಾಜಿ ಸರ್ಕಾರಿ ಅಭಿಯೋಜಕನ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ಲೈಂಗಿಕ ದೌರ್ಜನ್ಯ: ಮಾಜಿ ಸರ್ಕಾರಿ ಅಭಿಯೋಜಕನ ವಿರುದ್ಧ ಆರೋಪಪಟ್ಟಿ ಸಲ್ಲಿಕೆ
ರಾಜ್ಯದ ಗಮನ ಸೆಳೆದಿದ್ದ ಮಂಗಳೂರಿನ ವಕೀಲ ಹಾಗೂ ಮಾಜಿ ಸರ್ಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ಭಟ್ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ.
ಮಂಗಳೂರಿನ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಪ್ರಕರಣ ಇದಾಗಿದೆ. ಪ್ರಕರಣದ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ಹಾಗೂ ಅವರಿಗೆ ಸಹಕಾರ ನೀಡಿದ ಇತರ ಆರೋಪಿಗಳ ವಿರುದ್ಧ ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ.
ಕಳೆದ 2021ರ ಸೆಪ್ಟೆಂಬರ್ 25ರಂದು ಮಧ್ಯಾಹ್ನ ವಕೀಲ ರಾಜೇಶ್ ತಮ್ಮ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕರಂಗಲ್ಪಾಡಿಯ ಕಚೇರಿಯಲ್ಲಿ ಇಂಟರ್ನ್‌ಶಿಪ್‌ಗೆಂದು ಬಂದಿದ್ದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಆರೋಪಿಸಲಾಗಿದೆ.
ಆಕೆಯ ಮೇಲೆ ದುಷ್ಕೃತ್ಯ ನಡೆಸಲು ಯತ್ನಿಸಿದಾಗ ವಿದ್ಯಾರ್ಥಿನಿ ತಪ್ಪಿಸಿಕೊಂಡು ಹೋಗಿದ್ದಳು. ಆಗ ಆಕೆಗೆ ತನ್ನ ಸ್ಥಾನಮಾನದ ಬಗ್ಗೆ ಹೇಳಿ ರಾಜೇಶ್ ಭಟ್ ಆಕೆಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ದೂರಿನ ವಿಚಾರವನ್ನು ಮುಕ್ತಾಯಗೊಳಿಸುವಂತೆ ಮಂಗಳೂರು ವಕೀಲರ ಸಂಘದ ಆಗಿನ ಅಧ್ಯಕ್ಷರಿಗೆ ಒತ್ತಾಯದಲ್ಲಿ ಪತ್ರವನ್ನು ಬರೆಯಿಸಿಕೊಂಡು ಸಹಿ ಪಡೆದುಕೊಂಡಿದ್ದ. ಅದೂ ಸಾಲದು ಎಂಬಂತೆ, ತನ್ನ ಕೃತ್ಯವನ್ನು ಮರೆ ಮಾಚುವ ಉದ್ದೇಶದಿಂದ ವಿದ್ಯಾರ್ಥಿನಿಯ ಗೆಳತಿಯಿಂದ ಒತ್ತಾಯದಲ್ಲಿ ಸಹಿ ಪಡೆದುಕೊಂಡಿದ್ದ.
ಈ ಕೃತ್ಯದ ಕುರಿತು ಆಡಿಯೋ ಪ್ರಸಾರ ಮಾಡಿರುವ ಬಗ್ಗೆಯೂ ಕೃತ್ಯವನ್ನು ಮರೆಮಾಚುವ ಉದ್ದೇಶದಿಂದ ಒತ್ತಾಯದಿಂದ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದ ಎಂಬುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ತಮ್ಮ ಕಚೇರಿಯಲ್ಲಿ ಹಾಕಲಾಗಿದ್ದ ಸಿಸಿ ಕ್ಯಾಮರಾವನ್ನು ಮೊಬೈಲ್‌ಗೆ ಸಂಪರ್ಕಿಸಿಕೊಂಡಿದ್ದ ಆರೋಪಿ ರಾಜೇಶ್, ಅದರ ಮೂಲಕ ವಿದ್ಯಾರ್ಥಿನಿಯ ಕೆಲಸ ಕಾರ್ಯವನ್ನು ಲೈಂಗಿಕ ಉದ್ದೇಶದಿಂದ ವೀಕ್ಷಿಸುತ್ತಿದ್ದರು. ಪ್ರಕರಣ ದಾಖಲಾದ ನಂತರ ತಿಂಗಳುಗಟ್ಟಲೆ ಪೊಲೀಸರ ತನಿಖೆಗೆ ಸಿಗದೆ ತಲೆಮರೆಸಿಕೊಂಡಿದ್ದರು.
ಆರೋಪಿ ವಕೀಲರಿಗೆ ಅನಂತ ಭಟ್ ಮತ್ತು ಅಚ್ಚುತ್ತ ಭಟ್ ಎಂಬವರು ನೆರವು ಮತ್ತು ಆಶ್ರಯ ಒದಗಿಸಿದ್ದರು ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ದೋಷಾರೋಪಣಾ ಪತ್ರದಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಒಟ್ಟು 110 ಮಂದಿ ಸಾಕ್ಷಿದಾರರನ್ನಾಗಿ ಪಟ್ಟಿ ಮಾಡಲಾಗಿದೆ. ಪ್ರಕರಣದ ಗಂಭೀರತೆ ಪರಿಗಣಿಸಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತನಿಖೆಯನ್ನು ಅಂದಿನ ಎಸಿಪಿ ರಂಜಿತ್ ಬಂಡಾರು ಅವರಿಗೆ ವಹಿಸಿದ್ದರು. ಬಳಿಕ, ಈ ಜವಾಬ್ದಾರಿಯನ್ನು ಪೂರ್ಣಗೊಳಿಸಿದ ಸಹಾಯಕ ಪೊಲೀಸ್ ಆಯುಕ್ತ ದಿನಕರ ಶೆಟ್ಟಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ