"ಓವರ್ ಹೆಡ್" ಲೈನ್‌ನಿಂದ ವಿದ್ಯುತ್ ಆಘಾತವಾದರೆ ವಿದ್ಯುತ್ ಕಂಪೆನಿಗಳೇ ಹೊಣೆ: ಕರ್ನಾಟಕ ಹೈಕೋರ್ಟ್
"ಓವರ್ ಹೆಡ್" ಲೈನ್‌ನಿಂದ ವಿದ್ಯುತ್ ಆಘಾತವಾದರೆ ವಿದ್ಯುತ್ ಕಂಪೆನಿಗಳೇ ಹೊಣೆ: ಕರ್ನಾಟಕ ಹೈಕೋರ್ಟ್
2017-18ರ ಅವಧಿಯಲ್ಲಿ ನಡೆದಿರುವ ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿದ್ಯುತ್ ಆಘಾತದಲ್ಲಿ ಸಾವನ್ನಪ್ಪಿದ ಯಾ ಗಾಯಗೊಂಡ ವ್ಯಕ್ತಿಗಳಿಗೆ ಒಟ್ಟು 1.28 ಕೋಟಿ ರೂ. ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ವಿದ್ಯುತ್ ಕಂಪೆನಿಗಳಿಗೆ ನಿರ್ದೇಶನ ನೀಡಿದೆ.
ವಿದ್ಯುತ್ ಆಪಘಾತಕ್ಕೆ ವಿದ್ಯುತ್ ಕಂಪೆನಿಗಳೇ ಹೊಣೆ. ಮಕ್ಕಳು ಹೈ ಟೆನ್ಶನ್ ಎಲೆಕ್ಟ್ರಿಕಲ್ ತಂತಿ ಬಳಿ ಸುಳಿಯಬಾರದು ಎಂದು ಯಾರೂ ನಿರೀಕ್ಷಿಸಬಾರದು ಎಂದು ಟಿಪ್ಪಣಿ ಮಾಡಿರುವ ಕರ್ನಾಟಕ ಹೈಕೋರ್ಟ್, ಸರ್ಕಾರದ ನಿಯಮಾವಳಿಗಳು ಮತ್ತು ಪರಿಹಾರ ವಿತರಿಸದಿರುವ ಕಂಪೆನಿಗಳ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
ವಿದ್ಯುತ್ ಕಂಪೆನಿಗಳು ಓವರ್ ಹೆಡ್ ಲೈನ್‌ಗಳಿಂದ ಅಪಘಾತ ಸಂಭವಿಸಿದರೆ, ಮುಖ್ಯ ಎಲೆಕ್ಟ್ರಿಕಲ್ ನಿರೀಕ್ಷಣಾ ಕಚೇರಿಯ ವರದಿಗೆ ಕಾಯಬಾರದು. ಎರಡು ತಿಂಗಳಲ್ಲಿ ಸಂತ್ರಸ್ತರಿಗೆ ಅಥವಾ ಅವರ ಕುಟುಂಬಕ್ಕೆ ಪರಿಹಾರ ಪಾವತಿಸಬೇಕು ಎಂದು ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಸಕಲೇಶಪುರ ತಾಲೂಕಿನ ಕಾಫಿ ಎಸ್ಟೇಟ್‌ವೊಂದರಲ್ಲಿ ಸಂಭವಿಸಿದ್ದ ವಿದ್ಯುತ್ ಅಪಘಾತದಲ್ಲಿ ಮೃತಪಟ್ಟ ಕೂಲಿ ಕಾರ್ಮಿಕರೊಬ್ಬರ ಪತ್ನಿ ರೇಖಾ, ಗಾಯಾಳುಗಳಾಗಿರುವ ಬೆಂಗಳೂರಿನ ಲೊಟ್ಟೆಗೊಲ್ಲಹಳ್ಳಿಯ 15 ವರ್ಷದ ಬಾಲಕಿ ಚಂದನಾ ಕೆ ಮತ್ತು ಏಳು ವರ್ಷದ ಮುಯಿಜ್ ಅಹ್ಮದ್ ಶರೀಫ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ವೇಳೆ ಹೈಕೋರ್ಟ್ ಈ ನಿರ್ದೇಶನ ನೀಡಿದೆ.