ಹೈಕೋರ್ಟ್ ಜಡ್ಜ್, ವಕೀಲರ ಮಧ್ಯೆ ಜಟಾಪಟಿ: ಮಾತಿನ ಸಮರಕ್ಕೆ ವೀಡಿಯೋ ಚಿತ್ರೀಕರಣಕ್ಕೆ ಅನುಮತಿಸಿದ್ದೇ ಕಾರಣ?
ಹೈಕೋರ್ಟ್ ಜಡ್ಜ್ ವಕೀಲರ ಮಧ್ಯೆ ಜಟಾಪಟಿ: ಮಾತಿನ ಸಮರಕ್ಕೆ ವೀಡಿಯೋ ಚಿತ್ರೀಕರಣಕ್ಕೆ ಅನುಮತಿಸಿದ್ದೇ ಕಾರಣ?
ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣವೊಂದರ ಕಲಾಪನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಲು ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ನೀಡಿರುವ ಅನುಮತಿಯಿಂದಾಗಿ ವಕೀಲರು ಮತ್ತು ಜಡ್ಜ್ ಮಧ್ಯೆ ಜಟಾಪಟಿ, ಮಾತಿನ ಚಕಮಕಿ ನಡೆದ ಪ್ರಸಂಗ ಕೊಲ್ಕೊತಾ ಹೈಕೋರ್ಟ್‌ನಲ್ಲಿ ವರದಿಯಾಗಿದೆ.
ಕೊಲ್ಕತಾ ಹೈಕೋರ್ಟ್ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಮತ್ತು ಕೊಲ್ಕತ್ತಾ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಅರುಣವ್ ಘೋಷ್ ನಡುವೆ ಮಾಕ್ಸಮರ ಏರ್ಪಟ್ಟಿದೆ. ವಕೀಲರ ಸಂಘದ ಅಧ್ಯಕ್ಷರ ಮಾತು ಎಲ್ಲೆ ಮೀರುತ್ತಲೇ ಅವರಿಗೆ ನ್ಯಾಯಾಂಗ ನಿಂದನೆ ಅಡಿ ಜೈಲಿಗೆ ಕಳುಹಿಸುವುದಾಗಿ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ.
ಕೊಲ್ಕತ್ತಾ ಸ್ಕೂಲ್ ಸರ್ವಿಸ್ ಕಮಿಷನ್ ಗೆ ಸಂಬಂಧಿಸಿದ ಶಿಕ್ಷಕರ ನೇಮಕಾತಿಯಲ್ಲಿ ನಡೆದ ಹಗರಣದ ತನಿಖೆಯನ್ನು ನ್ಯಾಯಾಲಯ ಸಿಬಿಐಗೆ ವಹಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಅವರ ಪೀಠ ಮಾಧ್ಯಮದವರಿಗೆ ಕಲಾಪವನ್ನು ಚಿತ್ರಿಸಿಕೊಳ್ಳಲು ಅನುಮತಿ ನೀಡಿತ್ತು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಲೈವ್ ಮಾಡಬಾರದು ಎಂಬ ಷರತ್ತು ವಿಧಿಸಿತ್ತು.
ಜಡ್ಜ್ ಅವರ ಈ ಸೂಚನೆಗೆ ವಕೀಲರ ಸಂಘದ ಅಧ್ಯಕ್ಷ ಅರುಣವ್ ಘೋಷ್ ಆಕ್ಷೇಪ ವ್ಯಕ್ತಪಡಿಸಿದರು. ಈ ಸೂಚನೆ ನ್ಯಾಯಾಲಯದ ಘನತೆಗೆ ಧಕ್ಕೆ ತರುತ್ತದೆ ಎಂದು ಹೇಳಿದರು. ಇದಕ್ಕೆ ಬೇಸರಗೊಂಡ, ನ್ಯಾಯಮೂರ್ತಿಗಳು, ನಿಮ್ಮಂತಹ ಪುಂಡರನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ಗೊತ್ತಿದೆ ಎಂದು ವಾರ್ನಿಂಗ್ ನೀಡಿದರು. ಇದಕ್ಕೆ ಪ್ರತಿಯಾಗಿ, ನಿಮಗೆ ಕಾನೂನೇ ಗೊತ್ತಿಲ್ಲ ಎಂದು ವಕೀಲ ಘೋಷ್ ಜರೆದರು.