-->
20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

20 ವರ್ಷಗಳ ಕಾಲಬದ್ಧ ವೇತನ ಭಡ್ತಿ: ಸರ್ಕಾರಿ ಆದೇಶ ಪೂರ್ವಾನ್ವಯಗೊಳಿಸಿ ಜಾರಿ- ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು







ಸರಕಾರದ ಯಾವುದೇ ಒಂದು ಹುದ್ದೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿ ಆ ಅವಧಿಯಲ್ಲಿ ಒಂದೇ ಒಂದು ಪದೋನ್ನತಿ ಪಡೆಯದೆ ಮುಂದುವರಿದಿರುವ ಅಥವಾ ಮುಂದುವರೆಯುವ ಸರಕಾರಿ ನೌಕರನಿಗೆ ಆ ಹುದ್ದೆಗೆ ನಿಗದಿಪಡಿಸಲಾದ ವೇತನ ಶ್ರೇಣಿಯಲ್ಲಿ ಅಥವಾ ಅವನು ಹೊಂದಿರುವ ಆಯ್ಕೆ ಕಾಲಿಕ ವೇತನ ಶ್ರೇಣಿಯಲ್ಲಿ ಅಥವಾ ಹಿರಿಯ ವೇತನ ಶ್ರೇಣಿಯಲ್ಲಿ ಆಯಾ ಪ್ರಕರಣದನ್ವಯ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ದಿನಾಂಕ 1.4.2002 ರಿಂದ ಜಾರಿಗೆ ಬರುವಂತೆ ಅಥವಾ 20 ವರ್ಷಗಳ ಸೇವೆ ಪೂರ್ಣಗೊಳಿಸಿದ ದಿನಾಂಕದಿಂದ ಇದರಲ್ಲಿ ಯಾವುದು ನಂತರವೋ ಆ ದಿನಾಂಕದಿಂದ ಮಂಜೂರು ಮಾಡತಕ್ಕದ್ದು ಎಂಬುದಾಗಿ ಸರಕಾರಿ ಆದೇಶ ಸಂಖ್ಯೆ ಎಫ್ ಡಿ 13 ಎಸ್ ಆರ್ ಪಿ 2002 ದಿನಾಂಕ 9.05.2002 ಪ್ರಕಾರ ಆದೇಶಿಸಲಾಗಿದೆ.




ಮೇಲ್ಕಾಣಿಸಿದ ಸರಕಾರಿ ಆದೇಶದ ಪ್ರಕಾರ ದಿನಾಂಕ 1.4.2002 ರ ಪೂರ್ವದಲ್ಲಿ ಒಂದೇ ಹುದ್ದೆಯಲ್ಲಿ ಯಾವುದೇ ಪದೋನ್ನತಿ ಪಡೆಯದೆ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರು ತಮಗೆ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ಸಕ್ಷಮ ಪ್ರಾಧಿಕಾರ ತಿರಸ್ಕರಿಸಿದ ಹಲವಾರು ಪ್ರಕರಣಗಳು ಇವೆ. ಈ ರೀತಿ ತಿರಸ್ಕರಿಸಲು ನೀಡಿದ ಕಾರಣವೇನೆಂದರೆ ದಿನಾಂಕ 1.4.2002 ರಿಂದ ಸದರಿ ಸರಕಾರಿ ಆದೇಶ ಜಾರಿಗೆ ಬರತಕ್ಕದ್ದು ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವುದರಿಂದ ದಿನಾಂಕ 1.4.2002 ರ ಪೂರ್ವದಲ್ಲಿ ಒಂದೇ ಹುದ್ದೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರಿಗೆ ಸದರಿ ಆದೇಶವು ಅನ್ವಯವಾಗುವುದಿಲ್ಲ. ಹಾಗಾಗಿ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ನೀಡಲು ನಿಯಮಾನುಸಾರ ಅವಕಾಶವಿಲ್ಲ.




ಒಂದೇ ಹುದ್ದೆಯಲ್ಲಿ 20 ವರ್ಷಗಳ ಕಾಲ ಬೇರೆ ಬೇರೆ ಘಟಕಗಳಲ್ಲಿ ಸೇವೆ ಸಲ್ಲಿಸಿದ ನೌಕರರಿಗೆ ಕಾಲಬದ್ಧ ವೇತನ ಭಡ್ತಿಯನ್ನು ನಿರಾಕರಿಸಿದ ಹಲವಾರು ನಿದರ್ಶನಗಳಿವೆ. ಹಾಗೆಯೇ ಒಂದೇ ವೇತನ ಶ್ರೇಣಿಯ ಹುದ್ದೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರೂ ಹುದ್ದೆಯ ಪದನಾಮ ಬದಲಾವಣೆಯಾಗಿದೆ ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸಿದ ನಿದರ್ಶನಗಳಿವೆ. ಇಂತಹ ಪ್ರಕರಣಗಳಲ್ಲಿ ಭಾದಿತ ನೌಕರರು ನ್ಯಾಯಕಾಂಕ್ಷಿಯಾಗಿ ಹೈಕೋರ್ಟಿನ ಮೆಟ್ಟಲೇರಿದ್ದು ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ಅರ್ಜಿದಾರರ ಪರವಾಗಿದ್ದು, 20 ವರ್ಷಗಳ ಕಾಲಬದ್ಧ ವೇತನ ಭಡ್ತಿ ಪ್ರಕರಣದಲ್ಲಿ ಸರಕಾರಿ ಆದೇಶವನ್ನು ಪೂರ್ವಾನ್ವಯಗೊಳಿಸಿ ಅನುಷ್ಠಾನಗೊಳಿಸಲು ಹೈಕೋರ್ಟ್ ಆದೇಶಿಸಿದೆ.




ಶ್ರೀ ಮಂಜುನಾಥ ಜಿ.ಎಸ್. Vs ಕರ್ನಾಟಕ ಸರಕಾರ ಮತ್ತಿತರರು ಈ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಹೈಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಗಳಾದ ಶ್ರೀ ಜಿ. ನರೇಂದರ್ ಮತ್ತು ಶ್ರೀ ಎಂ. ಜಿ. ಎಸ್. ಕಮಲ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠವು ದಿನಾಂಕ 4-3-2022 ರಂದು ಮಹತ್ವದ ತೀರ್ಪನ್ನು ನೀಡಿದೆ.




ಅರ್ಜಿದಾರರಾದ ಶ್ರೀ ಮಂಜುನಾಥ ಜಿ.ಎಸ್. ಅವರಿಗೆ ದಿನಾಂಕ 1.4.2002 ರಿಂದ ಅನ್ವಯವಾಗುವಂತೆ 20 ವರ್ಷಗಳ ಕಾಲಬದ್ಧ ವೇತನ ಭಡ್ತಿ ನಿಯಮದ ಅನುಸಾರ ಒಂದು ಹೆಚ್ಚುವರಿ ವೇತನ ಭಡ್ತಿಯನ್ನು ನೀಡುವಂತೆ ಆದೇಶಿಸಿತು. ಸದರಿ ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.




ಶ್ರೀ ಮಂಜುನಾಥ ಜಿ. ಎಸ್. ಎಂಬವರು ಶಿವಮೊಗ್ಗ ಜಿಲ್ಲೆಯಲ್ಲಿ ಸರಕಾರಿ ಸೇವೆಗೆ ಸೇರಿ ಗ್ರಾಮ ಲೆಕ್ಕಾಧಿಕಾರಿ ಹುದ್ದೆಯಲ್ಲಿ ದಿನಾಂಕ 21-2.1972 ರಿಂದ ಸೇವೆ ಸಲ್ಲಿಸುತ್ತಿದ್ದರು. ದಿನಾಂಕ 31.5.1995 ರಂದು ಅವರು ಮೈಸೂರು ಜಿಲ್ಲೆಗೆ ವರ್ಗಾವಣೆ ಹೊಂದಿ ಒಂದೇ ಹುದ್ದೆಯಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ದಿನಾಂಕ 30.09.2005 ರಂದು ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಿದರು.




ದಿನಾಂಕ 1.4.2002 ರಂದು ತಾನು 20 ವರ್ಷಗಳ ಕಾಲ ಯಾವುದೇ ಪದೋನ್ನತಿ ಪಡೆಯದೆ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವುದರಿಂದ ತನಗೆ ದಿನಾಂಕ 9-5-2002 ರ ಸರಕಾರಿ ಆದೇಶದನ್ವಯ ಒಂದು ಹೆಚ್ಚುವರಿ ವೇತನ ಭಡ್ತಿ ನೀಡಬೇಕೆಂದು ಶ್ರೀ ಮಂಜುನಾಥ ಜಿ.ಎಸ್. ಅವರು ಸಲ್ಲಿಸಿದ ಅರ್ಜಿಯನ್ನು ಅರ್ಜಿದಾರರು ಶಿವಮೊಗ್ಗದಿಂದ ಮೈಸೂರಿಗೆ ವರ್ಗಾವಣೆ ಹೊಂದಿರುವುದರಿಂದ ಜೇಷ್ಠತಾ ನಿಯಮ 6 ರ ಅನ್ವಯ ಮೈಸೂರು ಘಟಕದಲ್ಲಿ ಸೇವಾ ಜೇಷ್ಠತೆಯನ್ನು ಕಳೆದುಕೊಂಡಿರುವುದರಿಂದ ಅವರಿಗೆ 20 ವರ್ಷಗಳ ಕಾಲ ಬದ್ಧ ವೇತನ ಭಡ್ತಿ ನಿಯಮದ ಪ್ರಕಾರ ಒಂದು ಹೆಚ್ಚುವರಿ ವೇತನ ಭಡ್ತಿ ನೀಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು.



ಈತನ್ಮಧ್ಯೆ ದಿನಾಂಕ 11.2.2011ರಂದು ಸರಕಾರವು ಆದೇಶ ಹೊರಡಿಸಿ ಸರಕಾರಿ ನೌಕರರು ಬೇರೆ ಬೇರೆ ಘಟಕಗಳಲ್ಲಿ ಸೇವೆ ಸಲ್ಲಿಸಿದ್ದರೂ ಯಾವುದೇ ಪದೋನ್ನತಿ ಪಡೆಯದೆ ಒಂದೇ ಹುದ್ದೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಲ್ಲಿ ಹೆಚ್ಚುವರಿ ವೇತನ ಭಡ್ತಿ ಪಡೆಯಲು ಅರ್ಹರು. ಆದರೆ ಪದೋನ್ನತಿ ನೀಡುವ ಸಂದರ್ಭದಲ್ಲಿ ಬೇರೆ ಘಟಕಗಳಲ್ಲಿ ಸಲ್ಲಿಸಿದ ಸೇವೆಯನ್ನು ಸೇವಾ ಜೇಷ್ಠ ತೆಗೆ ಪರಿಗಣಿಸುವಂತಿಲ್ಲ ಎಂದು ಆದೇಶಿಸಿತು.



ದಿನಾಂಕ 11.2.2011ರ ಸರಕಾರಿ ಆದೇಶದನ್ವಯ ತಮಗೆ 20 ವರ್ಷಗಳ ಕಾಲಬದ್ಧ ವೇತನ ಭಡ್ತಿ ನಿಯಮಾನುಸಾರ ಒಂದು ಹೆಚ್ಚುವರಿ ವೇತನ ಭಡ್ತಿ ನೀಡಬೇಕೆಂದು ಕೋರಿ ಶ್ರೀ ಮಂಜುನಾಥ ಜಿ.ಎಸ್‌ ಅವರು ದಿನಾಂಕ 8.10.2014 ರಂದು ಮೈಸೂರಿನ ಜಿಲ್ಲಾಧಿಕಾರಿಗಳಿಗೆ ಹಾಗೂ ದಿನಾಂಕ 9-10-2014 ರಂದು ನಂಜನಗೂಡು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.




ಮಾನ್ಯ ಜಿಲ್ಲಾಧಿಕಾರಿಗಳು ನಂಜನಗೂಡು ತಹಶೀಲ್ದಾರರಿಂದ ಈ ಬಗ್ಗೆ ವರದಿಯನ್ನು ಕೋರಿದ್ದು ದಿನಾಂಕ 20.11.2018 ರಂದು ನಂಜನಗೂಡು ತಹಶೀಲ್ದಾರರು ವರದಿ ಸಿದ್ಧಪಡಿಸಿ ಅರ್ಜಿದಾರರು ಒಂದು ಹೆಚ್ಚುವರಿ ವೇತನ ಬಡ್ತಿಗೆ ಅರ್ಹರು ಎಂಬ ಶಿಫಾರಸಿನೊಂದಿಗೆ ಮೈಸೂರಿನ ಸಹಾಯಕ ಆಯುಕ್ತರಿಗೆ ಎಲ್ಲಾ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಿದರು. ತಹಶೀಲ್ದಾರರ ವರದಿಯನ್ನು ಸಮರ್ಥಿಸಿ ತನ್ನ ಶಿಫಾರಸಿನೊಂದಿಗೆ ಸಹಾಯಕ ಆಯುಕ್ತರು ದಿನಾಂಕ 6.2.2019 ರಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದರು.




ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಇವರು ತಮ್ಮ ದಿನಾಂಕ 12.07.2019ರ ಆದೇಶದಲ್ಲಿ ಸರಕಾರಿ ಆದೇಶವು ಅನುಷ್ಠಾನ ಗೊಳ್ಳುವ ದಿನಾಂಕ 11.2.2011 ಆಗಿದೆ. ಸದರಿ ದಿನಾಂಕಕ್ಕೂ ಪೂರ್ವದಲ್ಲಿ ಅಂದರೆ ದಿನಾಂಕ 30.9.2005 ರಂದು ಅರ್ಜಿ ಅರ್ಜಿದಾರರು ಸೇವೆಯಿಂದ ನಿವೃತ್ತರಾಗಿರುವುದರಿಂದ 20 ವರ್ಷಗಳ ಕಾಲಬದ್ಧ ವೇತನ ಭಡ್ತಿ ಪಡೆಯಲು ಅರ್ಹರಲ್ಲ ಎಂಬ ಕಾರಣ ನೀಡಿ ಅರ್ಜಿದಾರರಾದ ಶ್ರೀ ಮಂಜುನಾಥ ಜಿ.ಎಸ್. ಅವರ ಮನವಿಯನ್ನು ತಿರಸ್ಕರಿಸಿದರು.





ಜಿಲ್ಲಾಧಿಕಾರಿಗಳ ಆದೇಶದಿಂದ ಬಾಧಿತರಾದ ಶ್ರೀ ಮಂಜುನಾಥ ಜಿ.ಎಸ್. ಅವರು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದರು.



ಅರ್ಜಿದಾರರು ದಿನಾಂಕ 30.9‌.2005 ರಂದು ಸೇವೆಯಿಂದ ನಿವೃತ್ತರಾಗಿರುವುದರಿಂದ ದಿನಾಂಕ 11.2.2011ರ ಆದೇಶವನ್ನು ಪೂರ್ವಾನ್ವಯಗೊಳಿಸಿ 20 ವರ್ಷಗಳ ಕಾಲಬದ್ಧ ವೇತನ ಭಡ್ತಿ ನಿಯಮದ ಅನುಸಾರ ಒಂದು ಹೆಚ್ಚುವರಿ ವೇತನ ಭರ್ತಿ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯದೊಂದಿಗೆ ಮಾನ್ಯ ಮೈಸೂರು ಜಿಲ್ಲಾಧಿಕಾರಿಗಳ ಆದೇಶವನ್ನು ಸ್ಥಿರೀಕರಿಸಿದ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಅರ್ಜಿದಾರರ ಮೇಲ್ಮನವಿಯನ್ನು ತಿರಸ್ಕರಿಸಿತು.

ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಮಾನ್ಯ ಕರ್ನಾಟಕ ಹೈಕೋರ್ಟಿನಲ್ಲಿ ರಿಟ್ ದಾಖಲಿಸಿದರು. 



ಉಭಯ ಪಕ್ಷಕಾರರ ವಾದವನ್ನು ಆಲಿಸಿದ ನ್ಯಾಯ ಪೀಠವು ಅರ್ಜಿದಾರರು ಗ್ರಾಮ ಲೆಕ್ಕಾಧಿಕಾರಿ ಹುದ್ದೆಯಲ್ಲಿ 20 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿದ್ದು ದಿನಾಂಕ 9.5.2002 ರ ಸರಕಾರಿ ಆದೇಶದ ಲಾಭ ಪಡೆಯಲು ಅರ್ಹರಾಗಿರುತ್ತಾರೆ ಎಂಬ ಅಭಿಪ್ರಾಯದೊಂದಿಗೆ ರಿಟ್ ಅರ್ಜಿಯನ್ನು ಪುರಸ್ಕರಿಸಿತು. ದಿನಾಂಕ 1.4.2002 ರಂದು ಅರ್ಜಿದಾರರು ಒಂದು ಹೆಚ್ಚುವರಿ ವೇತನ ಭಡ್ತಿ ಪಡೆಯಲು ಅರ್ಹರಾಗಿದ್ದು ನಿಯಮಾನುಸಾರ ಪರಿಷ್ಕೃತ ಪಿಂಚಣಿ ನಿಗದಿಪಡಿಸಿ ಆರ್ಥಿಕ ಸೌಲಭ್ಯಗಳನ್ನು ಅರ್ಜಿದಾರರಿಗೆ ನೀಡುವಂತೆ ಸರಕಾರಕ್ಕೆ ಆದೇಶಿಸಿತು.


ಅರ್ಜಿದಾರರಾದ ಶ್ರೀ ಮಂಜುನಾಥ ಜಿ. ಎಸ್. ಅವರಂತೆ ದಿನಾಂಕ 1.4.2002 ರ ಪೂರ್ವದಲ್ಲಿ ಒಂದೇ ಹುದ್ದೆಯಲ್ಲಿ ಯಾವುದೇ ಪದೋನ್ನತಿ ಪಡೆಯದೆ 20 ವರ್ಷಗಳ ಸೇವೆ ಸಲ್ಲಿಸಿದ ಹಲವಾರು ಸರಕಾರಿ ನೌಕರರು ದಿನಾಂಕ 9.5.2002 ರ ಸರಕಾರಿ ಆದೇಶದ ಪ್ರಯೋಜನ ದೊರಕದೆ ವಂಚಿತರಾಗಿದ್ದಾರೆ. ಬಹುತೇಕ ನೌಕರರು ಸೇವೆಯಿಂದ ನಿವೃತ್ತರಾಗಿದ್ದಾರೆ. ಇಂತಹವರ ಪಾಲಿಗೆ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ವರದಾನವಾಗಿದೆ.



✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ


Photo: Sri Prakash Nayak, Mangaluru




Ads on article

Advertise in articles 1

advertising articles 2

Advertise under the article