ಮನೆ ಮನೆಯಲ್ಲಿ ರಾಷ್ಟ್ರಧ್ವಜ: ನ್ಯಾಯಾಧೀಶರು, ನ್ಯಾಯಾಲಯಗಳಲ್ಲಿ 'ತಿರಂಗಾ' ಹಾರಿಸಲು ಹೈಕೋರ್ಟ್ ನಿರ್ದೇಶನ
ಮನೆ ಮನೆಯಲ್ಲಿ ರಾಷ್ಟ್ರಧ್ವಜ: ನ್ಯಾಯಾಧೀಶರು, ನ್ಯಾಯಾಲಯಗಳಲ್ಲಿ 'ತಿರಂಗಾ' ಹಾರಿಸಲು ಹೈಕೋರ್ಟ್ ನಿರ್ದೇಶನ
'ಪ್ರತಿಮನೆಯಲ್ಲೂ ರಾಷ್ಟ್ರಧ್ವಜ' ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯದ ಎಲ್ಲ ಕೋರ್ಟ್‌ಗಳಲ್ಲೂ ಮತ್ತು ಎಲ್ಲ ನ್ಯಾಯಾಧೀಶರ ಮನೆಗಳಲ್ಲೂ ಆಗಸ್ಟ್ 13ರಿಂದ 15ರ ವರೆಗೆ ರಾಷ್ಟ್ರಧ್ವಜ ಹಾರಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ನಿರ್ದೇಶನದ ಪ್ರಕಾರ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇ ಗೌಡ ಸುತ್ತೋಲೆ ಹೊರಡಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.
ಭಾರತದ ತ್ರಿವರ್ಣ ಧ್ವಜ ನಮ್ಮ ರಾಷ್ಟ್ರೀಯ ಹೆಮ್ಮೆಯ ಸಂಕೇತವಾಗಿದೆ. ಧ್ವಜಕ್ಕೆ ಗೌರವ ಸೂಚಿಸುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅನುಷ್ಠಾನ ಸಮಿತಿಯು ಪ್ರತಿ ಭಾರತೀಯ ಪ್ರಜೆ ತನ್ನ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವುದಕ್ಕೆ ಪ್ರೋತ್ಸಾಹ ನೀಡಲು ಅಮೃತ ಮಹೋತ್ಸವದ ಅಡಿ ‘ಹರ್ ಘರ್ ತಿರಂಗಾ’ ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರದ ಪ್ರಜೆಗಳಲ್ಲಿ ರಾಷ್ಟ್ರಭಕ್ತಿ ಹುಟ್ಟುಹಾಕುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅವಿರತವಾಗಿ ಕೊಡುಗೆ ನೀಡಿದವರರನ್ನು ಸ್ಮರಿಸಿಕೊಳ್ಳುವ ಚಿಂತನೆಯೊಂದಿಗೆ ಈ ಅಭಿಯಾನ ನಡೆಸಲಾಗುತ್ತಿದೆ. ಹೀಗಾಗಿ, ಆಗಸ್ಟ್ 13ರಿಂದ 15ರ ನಡುವೆ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಿಸಲು ಉತ್ತೇಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ದೇಶದ ಎಲ್ಲ ಹೈಕೋರ್ಟ್ಗಳಲ್ಲಿ, ವಿಚಾರಣಾ ನ್ಯಾಯಾಲಯಗಳಲ್ಲಿ, ನ್ಯಾಯಾಧೀಶರು ಮತ್ತು ನ್ಯಾಯಾಂಗ ಸಿಬ್ಬಂದಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಕೇಂದ್ರ ಸಚಿವರು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ, ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಹಾಗೂ ನ್ಯಾಯಾಂಗ ಅಧಿಕಾರಿಗಳು ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್ 13ರಿಂದ 15ರ ನಡುವೆ ರಾಷ್ಟ್ರ ಧ್ವಜ ಹಾರಿಸಬೇಕು ಎಂದು ಸುತ್ತೋಲೆಯಲ್ಲಿ ನಿರ್ದೇಶಿಸಲಾಗಿದೆ.