ಭ್ರಷ್ಟಾಚಾರ: ದೂರುಗಳಿದ್ದರೆ ಲೋಕಾಯುಕ್ತಕ್ಕೆ ನೀಡಿ- ಪ್ರಕರಣ ದಾಖಲಿಸಲು ಎಡಿಜಿಪಿ ಆದೇಶ
ಭ್ರಷ್ಟಾಚಾರ: ದೂರುಗಳಿದ್ದರೆ ಲೋಕಾಯುಕ್ತಕ್ಕೆ ನೀಡಿ- ಪ್ರಕರಣ ದಾಖಲಿಸಲು ಎಡಿಜಿಪಿ ಆದೇಶ
ಕರ್ನಾಟಕದಲ್ಲಿ ಲೋಕಾಯುಕ್ತ ಅಧಿಕೃತವಾಗಿ ಮತ್ತೆ ಕಾರ್ಯಾರಂಭವಾಗಿದೆ. ಸಾರ್ವಜನಿಕರಿಂದ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲು ಎಡಿಜಿಪಿ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ.
ದಿನಾಂಕ 26-08-2022ರಂದು ಆದೇಶ ಹೊರಡಿಸಿರುವ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಜಿಲ್ಲಾ ಮಟ್ಟದಲ್ಲಿ ಎಸ್‌ಪಿ, ಡಿವೈಎಸ್‌ಪಿ, ಇನ್ಸ್ಪೆಕ್ಟರ್ ಗಳಿಗೆ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಳ್ಳುವಂತೆ ತಮ್ಮ ಅದೇಶದಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ P.C.Act-1988 ನಡಿ ದೂರು ದಾಖಲಿಸಬೇಕು. ಸಾರ್ವಜನಿಕರಿಂದ ಬಂದ ದೂರನ್ನು ಕಾನೂನು ಪ್ರಕಾರ ತನಿಖೆ ನಡೆಸಬೇಕು ಎಂದು ಅವರು ತಿಳಿಸಿದ್ಧಾರೆ.
ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಎಸಿಬಿಯನ್ನು ರದ್ದುಗೊಳಿಸಿ ನೀಡಿದ ಆದೇಶದ ಹಿನ್ನೆಲೆಯಲ್ಲಿ ಎಡಿಜಿಪಿ ಈ ಮಹತ್ವದ ಆದೇಶ ಹೊರಡಿಸಿದ್ಧಾರೆ.
ಲೋಕಾ ಬಲವರ್ಧನೆ
ಕರ್ನಾಟಕ ಲೋಕಾಯುಕ್ತವನ್ನು ಬಲಪಡಿಸಲು ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ.
ಭ್ರಷ್ಟಾಚಾರ ನಿಗ್ರಹ ದಳಕ್ಕೆ ಖಾತೆ ಮತ್ತು ಪ್ರಾಸಿಕ್ಯೂಷನ್‌ಗೆ ಸಿಬ್ಬಂದಿ ನೇಮಕಾತಿಗೆ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ಸದ್ಯ ನಿವೃತ್ತರಾಗಿರುವ ಏಳು ಲೆಕ್ಕ ಪರಿಶೋಧಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಮುಂದಾಗಿದೆ.
ಅದರ ಜೊತೆಗೆ ಲೋಕಾಯುಕ್ತದಲ್ಲಿ ಈಗ ಇರುವ ಸರ್ಕಾರಿ ಅಭಿಯೋಜಕರನ್ನು ಮುಂದಿನ ವರ್ಷಕ್ಕೆ ನವೀಕರಿಸಲಿದೆ.