ಪೊಲೀಸ್ ಇಲಾಖೆಯಲ್ಲಿ ಹೀನಾಯ ಪದ್ಧತಿ ಆರ್ಡರ್ಲಿ ವ್ಯವಸ್ಥೆ ರದ್ಧು!- ಹೈಕೋರ್ಟ್ ಆದೇಶ
ಪೊಲೀಸ್ ಇಲಾಖೆಯಲ್ಲಿ ಹೀನಾಯ ಪದ್ಧತಿ ಆರ್ಡರ್ಲಿ ವ್ಯವಸ್ಥೆ ರದ್ಧು!- ಹೈಕೋರ್ಟ್ ಆದೇಶ
ಉನ್ನತ ಅಧಿಕಾರಿಗಳ ಮನೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಕೂಲಿಯಾಳುಗಳ ರೀತಿಯಲ್ಲಿ ದುಡಿಸಿಕೊಳ್ಳುವ ಪದ್ಧತಿಗೆ ತೆರೆ ಬಿದ್ದಿದೆ. ಇದೊಂದು ಅತ್ಯಂತ ಅಮಾನವೀಯ ಹಾಗೂ ಕೆಟ್ಟ ಪದ್ಧತಿ ಎಂದು ಹೇಳಿರುವ ಮದ್ರಾಸ್ ಹೈಕೋರ್ಟ್, ಈ ವ್ಯವಸ್ಥೆಯನ್ನು ತಕ್ಷಣದಿಂದ ತೆಗೆದುಹಾಕುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆದೇಶ ನೀಡಿದೆ.
ಪೊಲೀಸ್ ಇಲಾಖೆಯಲ್ಲಿ ಇಂತಹ ಒಂದು ಕೆಟ್ಟ ಪದ್ಧತಿ ಇದೆ. ಹಿರಿಯ ಅಧಿಕಾರಿಗಳ ಮನೆಯಲ್ಲಿ ಅವರ ಖಾಸಗಿ, ವೈಯಕ್ತಿಕ ಕೆಲಸಕ್ಕೆ ಪೊಲೀಸ್ ಸಿಬ್ಬಂದಿಯನ್ನು ದುಡಿಸಿಕೊಳ್ಳುವ Orderly ಎಂಬ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ವ್ಯಕ್ತಿಯೊಬ್ಬರು ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಸ್.ಎಮ್ ಸುಬ್ರಮಣಿಯಮ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಜನರ ತೆರಿಗೆ ಹಣದಿಂದ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳ ಮನೆ ಕೆಲಸಕ್ಕೆ ಬಳಸಿಕೊಳ್ಳುವುದು ಅತ್ಯಂತ ದುಃಖದ ವಿಚಾರ. ಇಂತಹ ಅಧಿಕಾರಿಗಳ ಮನೋಸ್ಥಿತಿಯನ್ನು ಪ್ರಶ್ನಿಸುವ ಹಕ್ಕು ಜನತೆಗೆ ಇದೆ ಎಂದು ತೀರ್ಪಿನಲ್ಲಿ ಹೇಳಿರುವ ಹೈಕೋರ್ಟ್, ದೇಶದ ಸಂವಿಧಾನ ಪ್ರಕಾರ, ಸರ್ಕಾರಿ ನೌಕರ ಅಥವಾ ಸಾರ್ವಜನಿಕ ಸೇವಕರಾದವರು ದೇಶದ ಜನರಿಗೆ ಸೇವೆ ಸಲ್ಲಿಸಿ ಎಂದು ಹೇಳುತ್ತದೆ. ಅದು ಬಿಟ್ಟು, ಹಿರಿಯ ಅಧಿಕಾರಿಗಳ ಮನೆಕೆಲಸ ಮಾಡಿ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಮನೆ ಕೆಲಸಕ್ಕೆ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಎಂದು ಹೈಕೋರ್ಟ್ ತಮಿಳುನಾಡು ಡಿಜಿಪಿಗೆ ಆದೇಶ ನೀಡಿದೆ.