ಜನರಿಗೆ ಕ್ಷಿಪ್ರ ನ್ಯಾಯ ದೊರಕಿಸುವಲ್ಲಿ ವಕೀಲರ ಪಾತ್ರ ಬಹುಮುಖ್ಯ: ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅಭಿಮತ
ಜನರಿಗೆ ಕ್ಷಿಪ್ರ ನ್ಯಾಯ ದೊರಕಿಸುವಲ್ಲಿ ವಕೀಲರ ಪಾತ್ರ ಬಹುಮುಖ್ಯ: ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅಭಿಮತ
ಜನಸಾಮಾನ್ಯರಿಗೆ ಕ್ಷಿಪ್ರವಾಗಿ ನ್ಯಾಯ ದೊರಕಿಸಿ ಕೊಡುವಲ್ಲಿ ವಕೀಲರ ಪಾತ್ರ ಅತಿ ಪ್ರಮುಖವಾದದ್ದು. ವಕೀಲರ ಸಮರ್ಪಕ ಕಾರ್ಯನಿರ್ವಹಣೆಯಿಂದ ನ್ಯಾಯಾಂಗದ ಕೆಲಸವೂ ಸಲೀಸಾಗಿ ನಡೆಯುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಶ್ರೀ ವಿಶ್ವಜಿತ್ ಶೆಟ್ಟಿ ಅಭಿಪ್ರಾಯಪಟ್ಟರು.
ಮಂಗಳೂರು ವಕೀಲರ ಸಂಘ , ಮಂಗಳೂರು ನ್ಯಾಯಾಂಗ ಇಲಾಖೆ ಯ ಜಂಟಿ ಆಶ್ರಯದಲ್ಲಿ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿ ಅವರು ಭಾಷಣ ಮಾಡಿದರು.
ಕ್ಷಿಪ್ರ ನ್ಯಾಯದಾನಕ್ಕೆಂದೇ ನಮ್ಮ ವ್ಯವಸ್ಥೆಯಲ್ಲಿ ರಾಜಿ ಸಂಧಾನ, ಮಧ್ಯಸ್ಥಿಕೆ ಕೇಂದ್ರ, ಲೋಕ ಅದಾಲತ್ ಮೊದಲಾದ ವೇದಿಕೆಗಳಿವೆ. ಅದನ್ನು ಪರಿಣಾಮಕಾರಿಯಾಗಿ ಬಳಸುವಂತೆ ಕರೆ ನೀಡಿದ ಅವರು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ನ್ಯಾಯಾಲಯಗಳ ಹೊರೆಯನ್ನು ತಗ್ಗಿಸಬೇಕು ಎಂದು ಮನವಿ ಮಾಡಿದರು.
ಕಾನೂನು ಪದವೀಧರರಿಗೂ ಸಂವಿಧಾನದ ಮೂಲಭೂತ ಕರ್ತವ್ಯಗಳ ಬಗ್ಗೆ ಅರಿವು ಇಲ್ಲ. 1976ರಲ್ಲಿ ಸಂವಿಧಾನದ 42ನೇ ತಿದ್ದುಪಡಿಯಲ್ಲಿ ಆರ್ಟಿಕಲ್ 51(A) ಜಾರಿಗೆ ತರಲಾಗಿದೆ. ಇದರಲ್ಲಿ ಮೂಲಭೂತ ಕರ್ತವ್ಯಗಳನ್ನು 7ರಿಂದ 10ಕ್ಕೇರಿಸಲಾಗಿದೆ.
ಸಂವಿಧಾನವನ್ನು ಗೌರವಿಸುವುದು, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು ಕೂಡ ಮೂಲಭೂತ ಕರ್ತವ್ಯ. ಇನ್ನೊಂದು ಪ್ರಮುಖವಾದದ್ದು ನೆಲ-ಜಲ ಹಾಗೂ ಗಾಳಿ ಸಹಿತ ಪ್ರಕೃತಿಯನ್ನು ಕಾಪಾಡುವುದು... ಇದರಲ್ಲಿ ನಾವು ವಿಫಲರಾಗಿದ್ದೇವೆ ಎಂದು ನನ್ನ ಅನಿಸಿಕೆ ಎಂದು ಅವರು ಹೇಳಿದರು.
ಅದೇ ರೀತಿ, ಇನ್ನೊಂದು ಧರ್ಮವನ್ನು ಗೌರವಿಸುವುದು, ಇನ್ನೊಬ್ಬರ ಧಾರ್ಮಿಕ ಭಾವನೆಗಳನ್ನು ಗೌರವಿಸುವುದು.. ಇದರಲ್ಲೂ ಸಮಾಜ ಹಾದಿ ತಪ್ಪಿದೆ. ನಾವು ನಾಗರಿಕರಿಗೆ ತಿಳಿಹೇಳಬೇಕಾದ ಅಗತ್ಯವಿದೆ ಎಂದು ನ್ಯಾ. ವಿಶ್ವಜಿತ್ ಒತ್ತಿ ಹೇಳಿದರು.
ಸಮಾರಂಭದಲ್ಲಿ ರಾಜ್ಯದ ನೂತನ ಜಿಲ್ಲಾ ನ್ಯಾಯಾಧೀಶರಾಗಿ ನಿಯುಕ್ತಿಗೊಂಡ ವಕೀಲರ ಸಂಘದ ಸದಸ್ಯ ಶ್ರೀ ಸಿರಾಜುದ್ದೀನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಪ್ರಥ್ವಿರಾಜ ರೈ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀಧರ ಎಣ್ಮಕಜೆ ಎಲ್ಲರನ್ನೂ ಸ್ವಾಗತಿಸಿದರೆ, ಖಜಾಂಚಿ ಶಶಿರಾಜ ರಾವ್ ಕಾವೂರು ಧನ್ಯವಾದ ಸಮರ್ಪಿಸಿದರು. ಶುಕರಾಜ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.