
ಇನ್ನು ಪ್ರತಿ ಹಿಶೆಗೂ ಹೊಸ ಸರ್ವೇ ನಂಬರ್!- ಭೂಮಾಪನ ಇಲಾಖೆಯಲ್ಲಿ ಹೊಸ ನಿಯಮ
ಇನ್ನು ಪ್ರತಿ ಹಿಶೆಗೂ ಹೊಸ ಸರ್ವೇ ನಂಬರ್!- ಭೂಮಾಪನ ಇಲಾಖೆಯಲ್ಲಿ ಹೊಸ ನಿಯಮ
ಹಿಸ್ಸಾ ಆಸ್ತಿಗೂ ಹೊಸ ಸರ್ವೇ ನಂಬರ್ ನೀಡುವ ನಿಟ್ಟಿನಲ್ಲಿ ಸರ್ವೇ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಇಲಾಖೆಯ ಅಧಿಕಾರಿಗಳ ಪ್ರಕಾರ ಈ ವ್ಯವಸ್ಥೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ.
ಇದರ ಪ್ರಕಾರ, ಯಾವುದೇ ಕೃಷಿ ಭೂಮಿಯಲ್ಲಿ ಒಂದು ಸರ್ವೇ ನಂಬರ್‌ನಲ್ಲಿ ಭಾಗಶಃ ಮಾರಾಟ, ದಾನ, ವಿಭಾಗ ಸೇರಿದಂತೆ ಯಾವುದಾದರೂ ಹೊಸ ಆಸ್ತಿಯ ವರ್ಗಾವಣೆ ಯಾ ವಹಿವಾಟು ನಡೆದರೆ, ಹಾಗೆ ಸೃಷ್ಟಿಯಾಗುವ ಹಿಸ್ಸಾ ಆಸ್ತಿಗೆ ಹೊಸ ಸರ್ವೇ ನಂಬರ್ ನೀಡಲು ಸರ್ವೇ ಇಲಾಖೆ ಮುಂದಾಗಿದ್ದು, ಈ ವ್ಯವಸ್ಥೆ ಮುಂದಿನ ತಿಂಗಳಿನಿಂದಲೇ ಜಾರಿಗೆ ಬರಲಿದೆ.
ಇದು ಕೇವಲ ಹೊಸ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಭೂ ಪರಿವರ್ತನೆಯಾದರೂ ಅದಕ್ಕೆ ಬೇರೆ ಸರ್ವೇ ನಂಬರ್ ನೀಡಲಾಗುವುದು. 'ಸ್ವಯಂಚಾಲಿತ ಮೋಜಿಣಿ ವ್ಯವಸ್ಥೆ'ಯಿಂದ ಕೃಷಿ ಭೂಮಿಯ ಯಾವುದಾದರೂ ಸರ್ವೆ ನಂಬರ್‌ನ ಹಿಸ್ಸಾದಲ್ಲಿ ಮಾರಾಟ, ವಿಭಾಗವಾದರೆ, ಈ ಹಿಂದಿನ ಕ್ರಮದಂತೆ, ಆ ಸರ್ವೇ ನಂಬರ್‌ನಲ್ಲಿರುವ ಹಿಸ್ಸಾದ ಅಂತಿಮ ಸಂಖ್ಯೆಯ ನಂತರದ ಹಿಸ್ಸಾ ದಾಖಲಾಗುವುದಿಲ್ಲ. ಬದಲಿಗೆ ಆ ಗ್ರಾಮದಲ್ಲಿರುವ ಕೊನೆ ಸರ್ವೇ ನಂಬರ್ ನಂತರದ ಹೊಸ ಸರ್ವೆ ನಂಬರ್ ನೀಡಲಾಗುತ್ತಿದೆ.
ಉದಾಹರಣೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದಲ್ಲಿ ಸರ್ವೇ ನಂಬರ್ 37ರ ಹಿಸ್ಸಾ 5ರಲ್ಲಿ ಅವರ ಕುಟುಂಬದಲ್ಲೇ ಐದು ಭಾಗವನ್ನಾಗಿ ಮಾಡಿಕೊಂಡಿದ್ದರೆ ಒಬ್ಬರಿಗೆ 37/5 ಹಾಗೇ ಉಳಿದುಕೊಳ್ಳಲಿದೆ. ಆ ಗ್ರಾಮದ ಕೊನೆಯ ಸರ್ವೆ ನಂಬರ್ 161 ಎಂದಿದ್ದರೆ, ನಾಲ್ವರಿಗೆ 162ರಿಂದ 165 ಎಂದು ಉಳಿದ ನಾಲ್ವರಿಗೆ ಹೊಸ ಸರ್ವೇ ನಂಬರ್ ನೀಡಲಾಗುತ್ತದೆ. RTC ಸ್ವಯಂಚಾಲಿತವಾಗಿ ರಚನೆಯಾಗಿ, ಅದರ 10ನೇ ಕಾಲಂನಲ್ಲಿ ಮೂಲ ಸರ್ವೆ ನಂಬರ್ (Mother Survey Number) ಕೂಡ ದಾಖಲಾಗುತ್ತದೆ.
2022ರ ಆಗಸ್ಟ್ 16ರಿಂದ ಸರ್ವೇ ಇಲಾಖೆ 'ಸ್ವಯಂಚಾಲಿತ ಮೋಜಿಣಿ ವ್ಯವಸ್ಥೆ' ಪ್ರಾಯೋಗಿಕವಾಗಿ ಆರಂಭಿಸಿತ್ತು. ಇದಕ್ಕೆ ಕೆಲ ತಾಂತ್ರಿಕ ಸಮಸ್ಯೆ ಎದುರಾದ ಪರಿಣಾಮ ಆ ಸಮಸ್ಯೆಗಳನ್ನು ನಿವಾಸಿಸಿ ಸಪ್ಟೆಂಬರ್ 10ರಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸರ್ವೇ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ತಿಳಿಸಿದ್ದಾರೆ.
ಹಾಗೆ ಜಾರಿಗೆ ಬರಲಿರುವ ನೂತನ ಪದ್ಧತಿ ಪ್ರಕಾರ, ಭೂಪರಿವರ್ತನೆ (ಕನ್ವರ್ಷನ್) ಆದ ಭೂಮಿಗೂ ನೂತನ ಸರ್ವೇ ನಂಬರ್ ದೊರೆಯಲಿದೆ. ಈ ಮೊದಲು 5 ಎಕರೆಯಲ್ಲಿ 1 ಎಕರೆ ಭೂ ಪರಿವರ್ತನೆ ಆಗಿದ್ದರೆ ಅದು ಎಲ್ಲೂ ದಾಖಲಾಗುತ್ತಿರಲಿಲ್ಲ. ಈಗ ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ, ಭೂ ಪರಿವರ್ತನೆ ಆದ ಒಂದು ಎಕರೆಗೂ ಹೊಸ ಸರ್ವೆ ನಂಬರ್, ಹೊಸ RTC ದೊರೆಯಲಿದೆ.
ಅದೇ ರೀತಿ, ಒಂದು 11 A ಆಕಾರ್ ಬಂದ್ (ಪೋಡಿ ಸ್ಕೆಚ್) ಪಡೆದ ನಂತರ ಮತ್ತೆ ಸರ್ವೇ ಇಲಾಖೆಗೆ ಬರಬೇಕಾಗುವುದಿಲ್ಲ. ಹಲವು ಮ್ಯೂಟೇಷನ್‌ಗಳಿದ್ದರೂ ಅದನ್ನು ಒಂದೇ ಸಮಯದಲ್ಲೇ ಮಾಡಲಾಗುತ್ತದೆ. ಭೂ ದಾಖಲೆಗಳನ್ನು ಸಮರ್ಪಕವಾಗಿ ಇಡಲು ಮತ್ತು ಎಲ್ಲವನ್ನೂ ಸ್ಪಷ್ಟಗೊಳಿಸಲು ಈ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.
ಈ ವ್ಯವಸ್ಥೆ ಜಾರಿಗೆ ಬಂದರೆ, ಹೊಸ ತಾಂತ್ರಿಕ ಸಮಸ್ಯೆಯೂ ಉಂಟಾಗಬಹುದು. ರಾಜ್ಯ ಸರ್ಕಾರದ ಅಧಿಕೃತ ಅಂತರ್ಜಾಲ ತಾಣದಲ್ಲಿ ಗ್ರಾಮ ನಕಾಶೆ ಹಾಗೂ ದಿಶಾಂಕ್‌ಗಳಲ್ಲಿ ನೂತನ ಸರ್ವೇ ನಂಬರ್‌ಗಳನ್ನು ಕಾಲ ಕಾಲಕ್ಕೆ ಗುರುತಿಸುವ ಸೌಲಭ್ಯವಿಲ್ಲ. ಆ ಸಂದರ್ಭದಲ್ಲಿ, ರೆವೆನ್ಯೂ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ನಕಾಶೆಗೆ ಅವಲಂಬಿತರಾಗಿ, ಯೋಜನೆ ರೂಪಿಸುತ್ತಾರೆ. ಈಗ ಸೃಷ್ಟಿಯಾಗುವ ಹೊಸ ಸರ್ವೆ ನಂಬರ್‌ಗಳಿಂದ ಗೊಂದಲ ಉಂಟಾಗುತ್ತದೆ.