SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್
SC ST ಜಮೀನು ಮಾರಾಟ: ಕಾನೂನಾತ್ಮಕ ವಾರಿಸುದಾರರ ಅರ್ಜಿ ಮಾತ್ರ ಪರಿಗಣನೆ: ಕರ್ನಾಟಕ ಹೈಕೋರ್ಟ್
PTCL Act ಕಲಂ 4(2)ರ ಪ್ರಕಾರ, ಸರ್ಕಾರದಿಂದ ಮಂಜೂರಾದ ಭೂಮಿಯನ್ನು ರಾಜ್ಯ ಸರ್ಕಾರದ ಪೂರ್ವಾನುಮತಿ ಇಲ್ಲದೆ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಒಂದು ವೇಳೆ, ವರ್ಗಾವಣೆ, ಮಾರಾಟ ಯಾ ಸ್ವಾಧೀನಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಎದುರಾದರೆ, ಸರ್ಕಾರದಿಂದ ಮಂಜೂರಾದ ಜಮೀನಿನ ಮೂಲ ಮಂಜೂರುದಾರ ಅಥವಾ ಅವರ ಕಾನೂನಾತ್ಮಕ ವಾರಸುದಾರರು ಸಲ್ಲಿಸಿದ ಅರ್ಜಿಯನ್ನು ಮಾತ್ರವೇ ಪರಿಗಣಿಸಬೇಕು ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಸುಮಾರು 82 ವರ್ಷಗಳ ಹಿಂದೆ ಬೆಂಗಳೂರಿನ ಭೂ ಮಂಜೂರಾತಿ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾ. ಆರ್. ದೇವದಾಸ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
PTCL ಕಾಯಿದೆ ಪ್ರಕಾರ ಮಂಜೂರಾದ ಜಮೀನಿನ ವರ್ಗಾವಣೆ, ಮಾರಾಟ ಮತ್ತು ಸ್ವಾಧೀನಕ್ಕೆ ಅನುಮತಿ ಕೋರಿ ಕಾಯ್ದೆಯ ಸೆಕ್ಷನ್ 4(2)ರ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ, ಮೊದಲು ಮೂಲ ಮಂಜೂರುದಾರರು ಯಾ ಅವರ ಕಾನೂನು ವಾರಿಸುದಾರರು ಸಲ್ಲಿಸಿರುವ ಅರ್ಜಿಯನ್ನೇ ಪರಿಶೀಲಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಮುಂದುವರಿದು, ಅರ್ಜಿ ಸಲ್ಲಿಸಿದವರನ್ನು ಕರೆದು ವಾಸ್ತವಾಂಶ ಪರಿಶೀಲಿಸುವುದು ನ್ಯಾಯಪೀಠದ ಕರ್ತವ್ಯ ಎಂದು ಹೇಳಿದೆ.
ಅರ್ಜಿ ಸ್ವೀಕರಿಸಿದ ಸಕ್ಷಮ ಅಧಿಕಾರಿ ಮೂಲ ಮಂಜೂರುದಾರರು ಯಾ ಅವರ ಕಾನೂನು ವಾರಸುದಾರರನ್ನು ತಮ್ಮ ಸಮ್ಮುಖ ಖುದ್ದು ಹಾಜರಾಗಲು ಸೂಚಿಸಿ ಅರ್ಜಿದಾರರ ಕ್ಲೇಮಿನ ವಾಸ್ತವತೆ ಮತ್ತು ಅದರ ಸ್ಪಷ್ಟತೆಯ ಬಗ್ಗೆ ಪರಿಶೀಲಿಸಬೇಕು. ಅರ್ಜಿ ನೈಜವಾಗಿದ್ದು, ಸಮರ್ಪಕವಾಗಿದೆ ಎಂದು ಅನಿಸಿದರೆ ಮಾತ್ರ ಪೂರ್ವಾನುಮತಿ ಮಂಜೂರು ಮಾಡಬಹುದು.
ಇದರ ಜೊತೆಗೆ, ಹಣ ಪಾವತಿ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕವೇ ಮಾಡಬೇಕು ಎಂಬ ಷರತ್ತು ವಿಧಿಸಬೇಕು. ಇದು ಹಣಕಾಸು ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಇದಕ್ಕೆ ಸಂಬಂಧಪಟ್ಟಂತೆ, ರಾಜ್ಯ ಸರ್ಕಾರವು ಸೂಕ್ತ ಆದೇಶ ಯಾ ಸುತ್ತೋಲೆ ಹೊರಡಿಸಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣ ಏನು...?
20 ವರ್ಷ ಹಸ್ತಾಂತರ ಮಾಡಬಾರದೆಂಬ ಷರತ್ತಿನೊಂದಿಗೆ ವರ್ತೂರು ಹೋಬಳಿ ರಾಮಗೊಂಡನಹಳ್ಳಿ ಗ್ರಾಮದ ಸರ್ವೆ ನಂಬರ್ 114ರಲ್ಲಿ 2.4 ಎಕರೆ ಭೂಮಿಯನ್ನು "ಪೂಜಿಗ" ಎಂಬುವರಿಗೆ 1939ರಲ್ಲಿ ಮಂಜೂರು ಮಾಡಲಾಗಿತ್ತು. ಆದರೆ, ಪೂಜಿಗ ತಾವು ಪಡೆದಿದ್ದ ಭೂಮಿಯನ್ನು 1951ರ ಸೆಪ್ಟೆಂಬರ್ 24ರಂದು ಗೋವಿಂದಪ್ಪ ಎಂಬುವರಿಗೆ ಪೂರ್ವಾನುಮತಿ ಪಡೆಯದೆ ಮಾರಾಟ ಮಾಡಿದ್ದರು.
ಈ ಭೂಮಿಯನ್ನು 1980ರಲ್ಲಿ ರವಿಕಿರಣ್ ಹಾಗೂ ಕುಮಾರ್ ಎಂಬುವರಿಗೆ ಮಾರಾಟ ಮಾಡಲಾಗಿತ್ತು. ಇದಾದ ಬಳಿಕ ಮೂಲ ಮಂಜೂರುದಾರ ಪೂಜಿಗ ಅವರು ಉಪವಿಭಾಗಾಧಿಕಾರಿ ಎದುರು ಕರ್ನಾಟಕ ಎಸ್ಸಿ-ಎಸ್ಟಿ (PTCL) ಕಾಯ್ದೆ ಸೆಕ್ಷನ್ 4 ಮತ್ತು 5ರ ಪ್ರಕಾರ ಅರ್ಜಿ ಸಲ್ಲಿಸಿ ಭೂಮಿಯ ಸ್ವಾಧೀನ ಕೋರಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಉಪ ವಿಭಾಗಾಧಿಕಾರಿ, ಎಲ್ಲ ಮಾರಾಟ ಪ್ರಕ್ರಿಯೆ/ವರ್ಗಾವಣೆ ಕಾನೂನು ಬಾಹಿರ ಎಂದು ಘೋಷಿಸಿ 1985ರ ಸೆಪ್ಟೆಂಬರ್ 11ರಂದು ಪೂಜಿಗ ಹೆಸರಿಗೆ ಜಮೀನನ್ನು ಪುನರ್ ಸ್ಥಾಪಿಸಲಾಗಿತ್ತು.
ಇದಾದ ಮೂರು ವರ್ಷಗಳ ಬಳಿಕ, ಅಂದರೆ 1988ರಲ್ಲಿ ಪೂಜಿಗ ಸಾವನ್ನಪ್ಪಿದರು. ಈ ನಡುವೆ ಉಪವಿಭಾಗಾಧಿಕಾರಿ ಆದೇಶ ಪ್ರಶ್ನಿಸಿ ಎನ್. ಕುಮಾರ್ ಮತ್ತು ರವಿಕಿರಣ್ ಕಾನೂನು ಹೋರಾಟ ನಡೆಸಿದರೂ ಜಮೀನು ಮರಳಿ ಪಡೆಯುವಲ್ಲಿ ಸಫಲರಾಗಲಿಲ್ಲ.
ಇನ್ನೊಂದು ಬೆಳವಣಿಗೆಯಲ್ಲಿ, ಪೂಜಿಗ ಅವರ ಪತ್ನಿಯವರು ತಮ್ಮ ದತ್ತುಪುತ್ರ ವೆಂಕಟೇಶ್‌ಗೆ ಈ ಜಮೀನಿನ ವಿಲ್ ಬರೆದಿದ್ದರು. ವೆಂಕಟೇಶ್ ಅವರು ಶ್ರೀನಿವಾಸ್ ಎಂಬವರಿಗೆ GPO ಕೊಟ್ಟರು. ಈ GPO ಆಧಾರದಲ್ಲಿ, 2008ರ ಮಾರ್ಚ್ 24ರಲ್ಲಿ ಜಮೀನನ್ನು ಎ. ವಿಜಯ್ ಕುಮಾರ್ ಎಂಬುವರಿಗೆ ಮಾರಾಟ ಮಾಡಿದ್ದರು. ಆದರೆ, ದತ್ತುಪುತ್ರ ಮೂಲ ಮಂಜೂರುದಾರರ ಕಾನೂನು ವಾರಸುದಾರ ಅಲ್ಲ ಎಂದು ಸಿವಿಲ್ ನ್ಯಾಯಾಲಯ ತೀರ್ಪು ನೀಡಿತ್ತು.
ಪ್ರಕರಣದ ವಿವರ
ಮುನಿರಾಜು Vs ಕರ್ನಾಟಕ ಸರ್ಕಾರ
ಕರ್ನಾಟಕ ಹೈಕೋರ್ಟ್, WP No. 52945/2018 Dated 19-05-2021