ಇಮೇಲ್, ಕೊರಿಯರ್ ಮೂಲಕ ಸಮನ್ಸ್; ಹೈಟೆಕ್ ಆಗುತ್ತಿರುವ ಕರ್ನಾಟಕ ಹೈಕೋರ್ಟ್
ಇಮೇಲ್, ಕೊರಿಯರ್ ಮೂಲಕ ಸಮನ್ಸ್; ಹೈಟೆಕ್ ಆಗುತ್ತಿರುವ ಕರ್ನಾಟಕ ಹೈಕೋರ್ಟ್
ಕರ್ನಾಟಕದಲ್ಲಿ ನ್ಯಾಯಾಂಗ ಇಲಾಖೆ ನ್ಯಾಯದಾನದಲ್ಲಿ ಹೈಟೆಕ್ ಹಾದಿಯಲ್ಲಿ ಮುನ್ನಡೆದಿದೆ. ಸರ್ಕಾರ ಪಕ್ಷಕಾರನಾಗಿರುವ ಪ್ರಕರಣಗಳಲ್ಲಿ ಇನ್ನು ಮುಂದೆ ನ್ಯಾಯಾಲಯ ಇಮೇಲ್ ಮೂಲಕ ಸಮನ್ಸ್ ಜಾರಿಗೊಳಿಸಲಿದೆ. ಇದರ ಪ್ರತಿಯನ್ನು ಅಧಿಕಾರಿ ಯಾ ಇಲಾಖೆಗಳ ಇಮೇಲ್‌ಗೆ ಲಗತ್ತಿಸುವ ಮೂಲಕ ಕ್ಷಿಪ್ರ ನ್ಯಾಯದಾನಕ್ಕೆ ಮುನ್ನುಡಿ ಬರೆಯಲಿದೆ.
ಇಂತಹ ಒಂದು ಐತಿಹಾಸಿಕ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಒಪ್ಪಿಗೆ ನೀಡಿದ್ದು, ಸರ್ಕಾರ ಪಕ್ಷಕಾರನಾಗಿರುವ ದಾವೆಗಳಲ್ಲಿ ಕಾಲಮಿತಿಯಲ್ಲಿ ಸರ್ಕಾರದ ಪ್ರತಿಕ್ರಿಯೆ ಪಡೆಯುವುದನ್ನು ಸುಲಲಿತಗೊಳಿಸಲು ಸಿವಿಲ್ ಪ್ರೊಸೀಜರ್ ಕೋಡ್ (ಸಿಪಿಸಿ) ಅಡಿಯ ನಿಯಮಗಳ ಬದಲಾವಣೆಗೆ ನ್ಯಾಯಪೀಠ ಗ್ರೀನ್ ಸಿಗ್ನಲ್ ನೀಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ನ್ಯಾಯಮೂರ್ತಿಗಳ ತಂಡ ತಾತ್ಕಾಲಿಕ ಕರಡು ಸಮಿತಿಯು ನಿಯಮಗಳನ್ನು ರಚಿಸಿದೆ. ನ್ಯಾ. ಎಸ್ ಜಿ ಪಂಡಿತ್, ಆರ್ ದೇವದಾಸ್, ಬಿ ಎಂ ಶ್ಯಾಮ್ ಪ್ರಸಾದ್, ಎಸ್ ಸುನಿಲ್ ದತ್ ಯಾದವ್, ಮೊಹಮ್ಮದ್ ನವಾಜ್, ನರೇಂದ್ರ ಪ್ರಸಾದ್, ಎಸ್ ಆರ್ ಕೃಷ್ಣ ಕುಮಾರ್, ಅಶೋಕ್ ಎಸ್. ಕಿಣಗಿ ಮತ್ತು ಸೂರಜ್ ಗೋವಿಂದರಾಜ್ ಈ ಸಮಿತಿಯಲ್ಲಿ ಇದ್ದಾರೆ.
ಪೂರ್ಣಪೀಠವು ಈ ನಿಯಮಗಳಿಗೆ ಹಸಿರು ನಿಶಾನೆ ತೋರಿದ ಬಳಿಕ ರಿಜಿಸ್ಟ್ರಾರ್ ಜನರಲ್ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆ. ಕಾರ್ಯಾಂಗ ಕೂಡ ಅದನ್ನು ಜಾರಿಗೊಳಿಸಲು ಒಪ್ಪಿದೆ. ಶೀಘ್ರದಲ್ಲೇ ಸರ್ಕಾರವು ನಿಯಮಗಳನ್ನು ಗೆಜೆಟ್‌ನಲ್ಲಿ ಪ್ರಕಟಿಸಲಿದೆ.
ಇನ್ನು ಮುಂದೆ, ಸಂಬಂಧಿತ ಇಲಾಖೆಯ ಅಧಿಕಾರಿಗಳ ಮೊಬೈಲ್, ಇಮೇಲ್ (ಮಿಂಚಂಚೆ) ವಿಳಾಸವನ್ನು ಕಂಪ್ಯೂಟರ್‌ನಲ್ಲಿ ದಾಖಲಿಸಿಕೊಂಡು ಆಯಾ ಇಲಾಖಾವಾರು ಪ್ರಕರಣಗಳ ಮಾಹಿತಿಯನ್ನು ಅವರಿಗೆ ಟ್ಯಾಗ್ ಮಾಡುವ ಮೂಲಕ ನೋಟೀಸ್, ಸಮನ್ಸ್ ಜಾರಿಗೊಳಿಸಲಾಗುವುದು. ಇದರಿಂದ ಪ್ರಕರಣದ ವಿಚಾರಣಾ ಪ್ರಗತಿ ಶೀಘ್ರಗೊಳ್ಳಲಿದೆ.
ಪ್ರಭುತ್ವ(ಸರ್ಕಾರ) ನ್ಯಾಯಾಲಯದ ಮುಂದಿರುವ ಅತಿ ದೊಡ್ಡ ದಾವೆದಾರನಾಗಿದೆ. ಈ ಬದಲಾವಣೆಯಿಂದಾಗಿ, ಸರ್ಕಾರಿ ಇಲಾಖೆಗಳ E-Link ಮೂಲಕ ಕೋರ್ಟ್ ಕಲಾಪದ ಮಾಹಿತಿ ಒಂದು ಕ್ಲಿಕ್‌ನಲ್ಲಿ ಪಕ್ಷಕಾರರಿಗೆ(ಸರ್ಕಾರಕ್ಕೆ) ತಲುಪುತ್ತದೆ. ಮತ್ತು ಇಲಾಖೆಗಳು ಪ್ರತಿಕ್ರಿಯಿಸಲು ಉಂಟಾಗುವ ವಿಳಂಬಕ್ಕೆ ತಡೆ ಬೀಳಲಿದೆ. ಅಭಿಯೋಜನೆ ಇಲಾಖೆಯಿಂದ ಮಾಹಿತಿ ಪಡೆಯುವ ಜಂಜಾಟ ತಪ್ಪಲಿದ್ದು, ನ್ಯಾಯಾಲಯ ನೇರವಾಗಿ ಅಧಿಕಾರಿಳಿಗೆ ನೀಡಲಿದ್ದು, ಇತರೆ ಇಲಾಖೆಗಳ ನಡುವಿನ ಸಂವಹನವು ತ್ವರಿತಗೊಳ್ಳಲಿದೆ.
ರಾಜ್ಯದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಈ ಬಗ್ಗೆ ಮತ್ತಷ್ಟು ಉತ್ಸುಕತೆ ತೋರಿಸಿದ್ದಾರೆ. ಕೇಸುಗಳ ಸಂಬಂಧ ಜೋಡಣೆ ಮತ್ತು "ಡಿಜಿಟಲ್ ಪ್ರಕರಣ ಡೈರಿ" ಕುರಿತು ಅವರು ಸುತ್ತೋಲೆ ಹೊರಡಿಸಿದ್ದಾರೆ. ಇ-ಆಡಳಿತದ ಪ್ರಧಾನ ಕಾರ್ಯದರ್ಶಿ ವಿ ಪೊನ್ನುರಾಜ್ ಅವರು ಈ ಕೆಲಸವನ್ನು ಆದ್ಯತೆಯ ಮೇಲೆ ಕೈಗೊಂಡಿದ್ದಾರೆ. ಕಳೆದ ಒಂದು ತಿಂಗಳಲ್ಲಿ ರಾಜ್ಯ ಸರ್ಕಾರದ 650 ವಿವಿಧ ಇಲಾಖೆ/ಸಂಸ್ಥೆಗಳು ಹೈಕೋರ್ಟ್ ಜೊತೆ ಲಿಂಕ್ ಹೊಂದಿವೆ.
ಇದರಿಂದ ಲಾಭವೇನು...?
ದಾವೆ ಹೂಡಿದ ಪಕ್ಷಕಾರರು ಪ್ರತಿವಾದಿ ಪಕ್ಷಕಾರರನ್ನು ಇಮೇಲ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. ವಿಳಂಬ ಇಲ್ಲದೆ, ಆಡಳಿತದ ಪ್ರತಿಕ್ರಿಯೆ ಪಡೆದು ತ್ವರಿರ ನ್ಯಾಯದಾನ ಸಾಧ್ಯವಾಗಲಿದೆ.
ಇದಕ್ಕೂ ಮುನ್ನ, ನಿರ್ದಿಷ್ಟ ಇಲಾಖೆಯ ಪತ್ತೆ ಮತ್ತು ಸಂಬಂಧಿತ ಅಧಿಕಾರಿಗೆ ಇಮೇಲ್ ಮೂಲಕ ಪ್ರತಿಕ್ರಿಯೆ ಕಳುಹಿಸಲು ಹರಸಾಹಸಪಡಬೇಕಿತ್ತು.
ಪ್ರೈವೇಟ್ ಕೋರಿಯರ್ ಸೇವೆ ಮೂಲಕ ಹೈಕೋರ್ಟ್ ಸಮನ್ಸ್ ಜಾರಿ ಮಾಡಲಿದೆ. ಈ ಬಗ್ಗೆ ಕೋರಿಯರ್ ಸಂಸ್ಥೆಗಳ ಗುರುತಿಸವ ಕಾರ್ಯ ಹೈಕೋರ್ಟ್‌ನಲ್ಲಿ ಆರಂಭವಾಗಿದೆ. ಇದರ ಜೊತೆಗೆ, ಇಮೇಲ್ ಮೂಲಕ ಸಮನ್ಸ್ ಜಾರಿ ಮಾಡುವ ಪ್ರಕ್ರಿಯೆಯನ್ನು ನ್ಯಾಯಾಲಯವು ಆರಂಭಿಸಿದ್ದು, ಇದು ವಿಳಂಬಕ್ಕೆ ಕಡಿವಾಣ ಹಾಕುವ ಸಾಧ್ಯತೆ ಇದೆ.