ವಾರೆಂಟ್ ಜಾರಿ: ತಪ್ಪಾದ ವ್ಯಕ್ತಿ ಬಂಧನ- ಪೊಲೀಸ್ ಅಧಿಕಾರಿಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ವಾರೆಂಟ್ ಜಾರಿ: ತಪ್ಪಾದ ವ್ಯಕ್ತಿ ಬಂಧನ- ಪೊಲೀಸ್ ಅಧಿಕಾರಿಗೆ 5 ಲಕ್ಷ ದಂಡ ವಿಧಿಸಿದ ಹೈಕೋರ್ಟ್
ನ್ಯಾಯಾಲಯದ ವಾರೆಂಟ್ ಜಾರಿ ಸಂದರ್ಭದಲ್ಲಿ ಒಂದೇ ರೀತಿಯ ಹೆಸರಿನ ಕಾರಣದಿಂದ ಪೊಲೀಸರಿಂದ ಆಗಿರುವ ತಪ್ಪಾದ ಬಂಧನ ಪ್ರಕರಣ ರಾಜ್ಯ ಹೈಕೋರ್ಟ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ಹೈಕೋರ್ಟ್, ನೊಂದ ವ್ಯಕ್ತಿಗೆ ಐದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿದೆ.
ತನ್ನ ತಂದೆಯ ಹೆಸರು ವಾರಂಟ್‌ನಲ್ಲಿನ ಹೆಸರಿಗೆ ಹೋಲುತ್ತದೆ ಎಂಬ ಕಾರಣಕ್ಕಾಗಿ ಪೊಲೀಸರು ವಾರೆಂಟ್‌ನಲ್ಲಿ ಹೆಸರಿಸಲಾಗಿದ್ದ ವ್ಯಕ್ತಿಯನ್ನು ಬಿಟ್ಟು ಅದೇ ಹೆರಸರನ್ನು ಹೋಲುವ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದರು.
ದಿವಾಳಿ ಪ್ರಕ್ರಿಯೆಯಲ್ಲಿ ಕಂಪನಿಯೊಂದರ ಮಾಜಿ ನಿರ್ದೇಶಕ ಎಂದು ಭಾವಿಸಿ ಪೊಲೀಸರು ವ್ಯಕ್ತಿಯನ್ನು ಬಂಧಿಸಿದರು. ಆದರೆ ಅವರು ಬಂಧಿಸಬೇಕಾಗಿದ್ದ ವ್ಯಕ್ತಿಯನ್ನು ಬಿಟ್ಟು ಇನ್ನೊಬ್ಬರನ್ನು ಬಂಧಿಸಲಾಗಿದೆ ಎಂಬ ಸಂಗತಿ ಪೊಲೀಸರಿಗೆ ತಡವಾಗಿ ಗೊತ್ತಾಯಿತು.
ಪೊಲೀಸರ ಬೇಜವಾಬ್ದಾರಿ ಕ್ರಮದಿಂದ ಬಾಧಿತರಾದ ಬಂಧಿತ ನೊಂದ ವ್ಯಕ್ತಿ, ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಇದರ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್, ಕೋರ್ಟ್ ವಾರೆಂಟ್ ಹೊರಡಿಸಿರುವ ವ್ಯಕ್ತಿಯನ್ನು ದೃಢಪಡಿಸಿಕೊಳ್ಳದೆ ಪೊಲೀಸರು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಕ್ಕೆ ನ್ಯಾಯಪೀಠ ಆಘಾತ ವ್ಯಕ್ತಪಡಿಸಿತು.
ಸಂವಿಧಾನದ 21 ನೇ ವಿಧಿ ಎಲ್ಲ ಪ್ರಜೆಗಳಿಗೂ ಸ್ವತಂತ್ರವಾಗಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತರಿಪಡಿಸಿದೆ ಎಂಬುದನ್ನು ನೆನಪಿಸಿದ ನ್ಯಾಯಪೀಠ, ಪೊಲೀಸರ ಕ್ರಮಕ್ಕೆ ಅತೀವ ಬೇಸರ ವ್ಯಕ್ತಪಡಿಸಿತು. ಸಂವಿಧಾನದ ಆಶಯಕ್ಕೆ ಧಕ್ಕೆಯಾದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ದುಬಾರಿ ದಂಡ ವಿಧಿಸಿ ಬಾಧಿತ ವ್ಯಕ್ತಿಗೆ ಪರಿಹಾರ ನೀಡುವಂತೆ ಆದೇಶಿಸಿತು.
ಇಬ್ಬರ ತಂದೆಯ ಹೆಸರು ಒಂದೇ ಆಗಿತ್ತು. ಇದರಿಂದ ಗೊಂದಲ ಉಂಟಾಯಿತು ಎಂಬ ಪೊಲೀಸರ ವಾದ ಸಮರ್ಥನೀಯವಲ್ಲ. ಒಂದು ವೇಳೆ, ಪೊಲೀಸರ ವಾದವನ್ನು ಒಪ್ಪುವುದೇ ಆದರೆ, ತಂದೆಯ ಹೆಸರು ಒಂದೇ ಇದೆ ಎಂಬ ಕಾರಣಕ್ಕೆ ಒಬ್ಬ ಸಹೋದರ, ಇನ್ನೊಬ್ಬ ಸಹೋದರ ಅಥವಾ ಸಹೋದರಿಯನ್ನೂ ಬಂಧಿಸಬಹುದು ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದರು.
ಜಾಮೀನು ನೀಡಬಹುದಾದ ಅಥವಾ ಜಾಮೀನು ರಹಿತ ವಾರೆಂಟ್ ಹೊರಡಿಸಿದಾಗಲೆಲ್ಲಾ ಬಂಧಿತ ಅಧಿಕಾರಿಯು ವ್ಯಕ್ತಿಯ ಗುರುತನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಬಂಧಿಸಲು ಉದ್ದೇಶಿಸಿರುವ ವ್ಯಕ್ತಿಯೇ ವಾರಂಟ್‌ನಲ್ಲಿ ಹೆಸರಿಸಲ್ಪಟ್ಟ ವ್ಯಕ್ತಿಯೇ ಎಂದು ಖಚಿತಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರಿಗೆ ಪರಿಹಾರವನ್ನು ನೀಡುವಾಗ, ಪ್ರಮಾದ ಎಸಗಿ ಬಂಧನ ಮಾಡಿದ ಪೊಲೀಸ್ ಅಧಿಕಾರಿಗಳಿಂದ ಆ ಮೊತ್ತವನ್ನು ವಸೂಲಿ ಮಾಡಲು ರಾಜ್ಯ ಸರ್ಕಾರಕ್ಕೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ಒಬ್ಬ ವ್ಯಕ್ತಿಯನ್ನು ಬಂಧಿಸುವ ಮೊದಲು ಬಂಧಿಸುವ ಅಧಿಕಾರಿಯು ವ್ಯಕ್ತಿಯ ಗುರುತನ್ನು ಪರಿಶೀಲಿಸುವುದು ಸೇರಿದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸೂಕ್ತ ಮಾರ್ಗಸೂಚಿಗಳು ಅಥವಾ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (SOP) ನೀಡುವಂತೆ ನ್ಯಾಯಾಲಯವು ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ (DG & IGP) ಅವರಿಗೆ ನಿರ್ದೇಶನ ನೀಡಿದೆ.
ಮಾರ್ಗಸೂಚಿಗಳು/ಎಸ್‌ಒಪಿ ಈಗಾಗಲೇ ಅಸ್ತಿತ್ವದಲ್ಲಿದ್ದರೆ, ಪೊಲೀಸ್ ಅಧಿಕಾರಿಗಳಿಗೆ ಸರಿಯಾದ ತರಬೇತಿಯನ್ನು ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಬಂಧಿತನ ಸ್ವಾತಂತ್ರ್ಯ ಮತ್ತು ಪ್ರತಿಷ್ಠೆಯ ನಷ್ಟವನ್ನು ಪರಿಗಣಿಸಿದ ನ್ಯಾಯಾಲಯ, ಆದೇಶದ ದಿನಾಂಕದಿಂದ 8 ವಾರಗಳಲ್ಲಿ ಪಾವತಿಸಬೇಕಾದ 5 ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ಪಾವತಿಸಲು ರಾಜ್ಯಕ್ಕೆ ನಿರ್ದೇಶಿಸಿದೆ.