ಮೊಮ್ಮಗಳಿಂದ ವೃದ್ಧೆಯ ನಿರ್ಲಕ್ಷ್ಯ: ಅಜ್ಜಿಗೆ ಜಮೀನು ವಾಪಸ್ ಕೊಡಿಸಿದ ನ್ಯಾಯಾಲಯ
ಮೊಮ್ಮಗಳಿಂದ ವೃದ್ಧೆಯ ನಿರ್ಲಕ್ಷ್ಯ: ಅಜ್ಜಿಗೆ ಜಮೀನು ವಾಪಸ್ ಕೊಡಿಸಿದ ನ್ಯಾಯಾಲಯ
ತನ್ನ ಅಜ್ಜಿಯ ಯೋಗಕ್ಷೇಮ ನೋಡಿಕೊಳ್ಳದ ಮೊಮ್ಮಗಳಿಗೆ ಚಿಕ್ಕಬಳ್ಳಾಪುರ ಎ.ಸಿ. ನ್ಯಾಯಾಲಯ ತಕ್ಕ ಶಾಸ್ತಿ ಮಾಡಿದೆ. ಹಿರಿಯ ಜೀವದ ಯೋಗಕ್ಷೇಮ ನೋಡಿಕೊಳ್ಳದ ಮೊಮ್ಮಗಳ ಹೆಸರಿನಲ್ಲಿ ಇದ್ದ ಜಮೀನನ್ನು ಉಪವಿಭಾಗಾಧಿಕಾರಿ ನ್ಯಾಯಾಲಯ ಮರಳಿ ಅಜ್ಜಿಗೆ ವಾಪಸ್ ಕೊಡಿಸಿದೆ.
ಇಲ್ಲಿನ ಕೇತೇನಹಳ್ಳಿ ಗ್ರಾಮದ ಮುನಿವೆಂಕಟಮ್ಮ ಇಟ್ಟಪ್ಪನಹಳ್ಳಿ ಗ್ರಾಮದಲ್ಲಿ 2.14 ಎಕರೆ ಜಮೀನು ಹೊಂದಿದ್ದರು.
ಅನಕ್ಷರಸ್ಥೆಯಾಗಿರುವ ಮುನಿವೆಂಕಟಮ್ಮ ಅವರಿಂದ ಮೊಮ್ಮಗಳು ಶೈಲಜಾ ದಾನಪತ್ರದ ಮೂಲಕ ಈ ಜಮೀನನ್ನು ಉಪಾಯವಾಗಿ ಪಡೆದುಕೊಂಡಿದ್ದರು. ಅಲ್ಲದೆ, ತಮ್ಮ ಹೆಸರಿಗೆ ಖಾತೆಯನ್ನೂ ಮಾಡಿಸಿಕೊಂಡಿದ್ದರು.
ಆ ಬಳಿಕ, ಮೊಮ್ಮಗಳು ತಮ್ಮ ಅಜ್ಜಿಯ ಆರೋಗ್ಯ ಹಾಗೂ ಯೋಗಕ್ಷೇಮ ನೋಡಿಕೊಳ್ಳದೆ ಉಪೇಕ್ಷಿಸಿದ್ದರು. ಮೊಮ್ಮಗಳ ವರ್ತನೆಯಿಂದ ಬೇಸರಗೊಂಡ ಮುನಿವೆಂಕಟಮ್ಮ ದಾನಪತ್ರ ರದ್ದುಗೊಳಿಸುವಂತೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, 'ಹಿರಿಯ ನಾಗರಿಕರ ಪಾಲನೆ, ಪೋಷಣೆ ಕಾಯ್ದೆ' ಅಡಿ ದಾನಪತ್ರ ರದ್ದುಗೊಳಿಸಿದ್ದಾರೆ.
ಅಲ್ಲದೆ, ಅಜ್ಜಿಯ ಜೀವನ ನಿರ್ವಹಣೆಗಾಗಿ ಶೈಲಜಾ ಮಾಸಿಕ ರೂ. 8 ಸಾವಿರ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಉಲ್ಲಂಘಿಸಿದ ಪಕ್ಷದಲ್ಲಿ ದಂಡ ವಿಧಿಸುವ ಹಾಗೂ ಬಂಧಿಸುವ ಎಚ್ಚರಿಕೆಯನ್ನೂ ನೀಡಿದ್ದಾರೆ.
ಇತ್ತೀಚೆಗೆ, ಚಿಂತಾಮಣಿಯಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಗಿಫ್ಟ್ ಡೀಡ್ ರದ್ದು ಮಾಡಿದ್ದರು. ಹಾಗೂ ಪೋಷಕರ ಜೀವನ ನಿರ್ವಹಣೆಗೆ ಮೂವರು ಪುತ್ರಿಯರಿಗೆ ತಿಂಗಳಿಗೆ ತಲಾ ರೂ. 7000/- ನೀಡುವಂತೆ ಆದೇಶ ಹೊರಡಿಸಿದ್ದರು.
ಈ ಎರಡೂ ಪ್ರಕರಣಗಳಲ್ಲಿ ಸ್ವತಃ ಉಪವಿಭಾಗಾಧಿಕಾರಿಯವರೇ ಹಿರಿಯರ ಮನೆಗೆ ತೆರಳಿ ಆದೇಶ ಪತ್ರ ನೀಡಿರುವುದು ಸ್ಮರಣೀಯವಾಗಿದೆ.