
ಜಪ್ತಿ ಮಾಡಲಾದ ಚಿನ್ನ 15 ದಿನದಿಂದ 1 ತಿಂಗಳಿಗಿಂತ ಹೆಚ್ಚು ಪೊಲೀಸ್ ವಶದಲ್ಲಿ ಇರುವಂತಿಲ್ಲ: ಹೈಕೋರ್ಟ್
ಜಪ್ತಿ ಮಾಡಲಾದ ಚಿನ್ನ 15 ದಿನದಿಂದ 1 ತಿಂಗಳಿಗಿಂತ ಹೆಚ್ಚು ಪೊಲೀಸ್ ವಶದಲ್ಲಿ ಇರುವಂತಿಲ್ಲ: ಹೈಕೋರ್ಟ್
ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸ್ ತನಿಖೆ ಸಂದರ್ಭದಲ್ಲಿ ವಶಕ್ಕೆ ಪಡೆದುಕೊಂಡು ಜಪ್ತಿ ಮಾಡುವ ಚಿನ್ನ ಒಂದು ತಿಂಗಳಿಗಿಂತ ಹೆಚ್ಚು ಅವಧಿ ಪೊಲೀಸರು ತಮ್ಮ ವಶದಲ್ಲಿ ಇಡುವಂತಿಲ್ಲ. ಅದನ್ನು ಸಂತ್ರಸ್ತರು ಅಥವಾ ದೂರುದಾರರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಬೆಂಗಳೂರು ಜ್ಯೂವೆಲ್ಲರಿ ಮಳಿಗೆ ಮಾಲಕರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ನೇತೃತ್ವದ ನ್ಯಾಯಪೀಠ, ಅರ್ಜಿದಾರರಿಂದ ವಶಪಡಿಸಿಕೊಂಡಿದ್ದ ಚಿನ್ನದ ಗಟ್ಟಿಯನ್ನು ಅವರ ಮಧ್ಯಂತರ ಸುಪರ್ದಿಗೆ ನೀಡುವಂತೆ ಮೈಸೂರಿನ ಲಷ್ಕರ್ ಠಾಣಾ ಪೊಲೀಸರಿಗೆ ನಿರ್ದೇಶನ ನೀಡಿದೆ.
ಪೊಲೀಸರು ಚಿನ್ನದ ಗಟ್ಟಿ ಯಾ ಆಭರಣಗಳನ್ನು ಹೆಚ್ಚೆಂದರೆ 15 ದಿನದಿಂದ 1 ತಿಂಗಳವರಗೆ ಮಾತ್ರ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು. ಅದಕ್ಕೆ ಸಂಬಂಧಿಸಿದ ತನಿಖೆ ನಡೆಸಿ ಬಳಿಕ ನಂತರ ಅದನ್ನು ಸಂತ್ರಸ್ತರು ಅಥವಾ ದೂರುದಾರರ ಮಧ್ಯಂತರ ಸುಪರ್ದಿಗೆ ನೀಡಬೇಕು ಎಂದು ನ್ಯಾಯಪೀಠ ಆದೇಶದಲ್ಲಿ ಹೇಳಿದೆ.
ಸದ್ರಿ ಕ್ರಿಮಿನಲ್ ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧ ಇಲ್ಲ. ಹಾಗಾಗಿ, ಸಂತ್ರಸ್ತರಾಗಿರುವ ಅರ್ಜಿದಾರರ ಸುಪರ್ದಿಗೆ ಚಿನ್ನದ ಗಟ್ಟಿ ನೀಡಬೇಕು ಎಂದು ಅರ್ಜಿದಾರ ಪರ ವಕೀಲರು ವಾದಿಸಿದರು. ಆದರೆ, ಕೋರ್ಟ್ ವಿಚಾರಣೆ ಪೂರ್ಣಗೊಳ್ಳುವವರೆಗೆ ಜಪ್ತಿ ಮಾಡಿರುವ ಚಿನ್ನ ಅರ್ಜಿದಾರರ ವಶಕ್ಕೆ ನೀಡಬಾರದು ಎಂದು ಅಭಿಯೋಜನೆ ಪರ ವಕೀಲರು ಪ್ರತಿಪಾದಿಸಿದರು. ವಾದ ಆಲಿಸಿದ ನ್ಯಾಯಪೀಠ, ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ ಈ ಮೇಲಿನ ಆದೇಶ ಹೊರಡಿಸಿತು.
ಅಂತಿಮವಾಗಿ ಪೀಠವು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ತನಿಖೆಯ ವೇಳೆ ವಶಪಡಿಸಿಕೊಂಡ ವಸ್ತುಗಳನ್ನು ಪೊಲೀಸ್ ಠಾಣೆಯಲ್ಲಿ ಹೆಚ್ಚೆಂದರೆ ಹದಿನೈದು ದಿನಗಳಿಂದ ಒಂದು ತಿಂಗಳವರೆ ಮಾತ್ರ ಇರಿಸಿಕೊಳ್ಳುವಂತೆ ವಿಚಾರಣಾ ನ್ಯಾಯಲಯ ನೋಡಿಕೊಳ್ಳಬೇಕು. ಇನ್ನು, ಸೆಷನ್ಸ್ ನ್ಯಾಯಾಲಯ ಚಿನ್ನಾಭರಣಗಳನ್ನು ಮಧ್ಯಂತರ ಸುಪರ್ದಿ ಪಡೆಯುವವರಿಗೆ ಇನ್ನಷ್ಟು ಸೂಕ್ತ ಷರತ್ತು ವಿಧಿಸುವ ಆದೇಶ ಹೊರಡಿಸಬಹುದು ಎಂದು ಸೂಚಿಸಿತು.
ಜಪ್ತಿ ಮಾಡಲಾದ ಚಿನ್ನವನ್ನು ಪೊಲೀಸ್ ಠಾಣೆಯಲ್ಲಿ ಹೆಚ್ಚೆಂದರೆ 15 ದಿನದಿಂದ 1 ತಿಂಗಳ ವರೆಗೆ ಇಡಬಹುದು. ಬಳಿಕ, ದೂರುದಾರರು-ಸಂತ್ರಸ್ತರಿಗೆ ನೀಡುವ ಮುನ್ನ ಅದರ ಸಮಗ್ರ ಪಂಚನಾಮೆ ನಡೆಸಬೇಕು ಎಂದು ಆದೇಶಿಸಿತು.
ನ್ಯಾಯಾಲಯದ ವಿಚಾರಣೆ ವೇಳೆ ಚಿನ್ನವನ್ನು ಮತ್ತೆ ಹಾಜರುಪಡಿಸುವ ಷರತ್ತು ವಿಧಿಸಿ ಬಾಂಡ್ ಪಡೆಯಬೇಕು, ಭದ್ರತಾ ಖಾತರಿ ಪಡೆದುಕೊಳ್ಳಬೇಕು ಎಂದು ನ್ಯಾಯಪೀಠ ತಿಳಿಸಿತು. ಅಗತ್ಯಬಿದ್ದರೆ ಇನ್ನಷ್ಟು ಸೂಕ್ತ ಷರತ್ತುಗಳನ್ನು ವಿಧಿಸಲು ಮ್ಯಾಜಿಸ್ಟ್ರೇಟ್ ಕೋರ್ಟ್ ಸ್ವತಂತ್ರ ಎಂದು ತಿಳಿಸಿತು.