ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ವಕೀಲರ ಬ್ಯಾಟಿಂಗ್: ವಕೀಲರ ಪರಿಷತ್ತುಗಳಿಂದ ನಿರ್ಣಯ
ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ವಕೀಲರ ಬ್ಯಾಟಿಂಗ್: ವಕೀಲರ ಪರಿಷತ್ತುಗಳಿಂದ ನಿರ್ಣಯ
ದೇಶದ ಎಲ್ಲ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವಂತೆ ವಕೀಲ ಸಂಘಗಳು ಬ್ಯಾಟಿಂಗ್ ನಡೆಸಿವೆ. ಭಾರತೀಯ ವಕೀಲರ ಪರಿಷತ್ತು (BCI) ಮತ್ತು ವಿವಿಧ ರಾಜ್ಯಗಳ ವಕೀಲರ ಪರಿಷತ್ತುಗಳು ಹಾಗೂ ಹೈಕೋರ್ಟ್ ಸಂಘಗಳು ಈ ಬಗ್ಗೆ ಒಟ್ಟಾಗಿ ನಿರ್ಣಯವನ್ನು ಕೈಗೊಂಡಿದೆ.
ಇದರ ಜೊತೆಗೆ, ಅನುಭವಿ ಹಿರಿಯ ವಕೀಲರನ್ನು ವಿವಿಧ ಆಯೋಗಗಳು ಮತ್ತು ವೇದಿಕೆಗಳ ಅಧ್ಯಕ್ಷರನ್ನಾಗಿ ನೇಮಿಸಲು ಕಾನೂನು ತಿದ್ದುಪಡಿ ಮಾಡುವಂತೆ ಮತ್ತು ಈ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಒತ್ತಾಯಿಸಿ ವಕೀಲ ಸಂಘಗಳು ನಿರ್ಧಾರ ಕೈಗೊಂಡಿದೆ.
ವಿವಿಧ ವಕೀಲರ ಸಂಘಗಳ ಸಂಯುಕ್ತ ಸಭೆಯಲ್ಲಿ ಈ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಲಾಯಿತು. ಸಂವಿಧಾನಕ್ಕೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 67 ವರ್ಷಕ್ಕೆ ವಿಸ್ತರಿಸಬೇಕು ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ಏರಿಸಬೇಕು ಎಂದು ಸಭೆಯಲ್ಲಿ ಅವಿರೋಧವಾಗಿ ನಿರ್ಣಯ ಕೈಗೊಂಡಿದೆ. ಈ ವಿಷಯವನ್ನು BCI ದೃಢಪಡಿಸಿದೆ.
ಈ ನಿರ್ಣಯಗಳನ್ನು ಜಾರಿಗೊಳಿಸುವ ಬಗ್ಗೆ ಅತಿ ಶೀಘ್ರದಲ್ಲಿ ಕಾರ್ಯಪ್ರವೃತ್ತವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರಿಗೆ ನಿರ್ಣಯದ ಮೂಲಕ ಒತ್ತಾಯಿಸಲಾಗಿದೆ.