ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ಅಧಿಕೃತ ಭಾಷೆಯಾಗಿ ಸೇರಿಸಲು ವಕೀಲರ ಆಗ್ರಹ
ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡ ಅಧಿಕೃತ ಭಾಷೆಯಾಗಿ ಸೇರಿಸಲು ವಕೀಲರ ಆಗ್ರಹ
ಕರ್ನಾಟಕ ಹೈಕೋರ್ಟ್‌ನಲ್ಲಿ ಕನ್ನಡವನ್ನು ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂಬ ಬೇಡಿಕೆಗೆ ಮತ್ತಷ್ಟು ಬಲ ಬಂದಿದೆ. ಹಿಂದಿ ದಿವಸ್ ಸಂದರ್ಭದಲ್ಲಿ ಕನ್ನಡ ಪರ ವಕೀಲರು ಹೈಕೋರ್ಟ್‌ನಲ್ಲಿ ರಾಜ್ಯ ಭಾಷೆಗೆ ಅಧಿಕೃತ ಸ್ಥಾನಮಾನ ಬೇಕು ಎಂದು ಒತ್ತಾಯಿಸಿ ಕರಪತ್ರ ಚಳವಳಿ ನಡೆಸಿದರು.
ಸಂವಿಧಾನದ 348ನೇ ವಿಧಿಗೆ ತಿದ್ದುಪಡಿ ಮಾಡಿ, ಹೈಕೋರ್ಟ್‌ನಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನ ಮಾಡಬೇಕು ಎಂದು ವಕೀಲರು ಹಾಗೂ ಕನ್ನಡ ಗೆಳೆಯರ ಬಳಗದ ಪದಾಧಿಕಾರಿಗಳು ಬೆಂಗಳೂರು ನಗರ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ಆವರಣದಲ್ಲಿ ನಡೆದ ಚಳವಳಿಯಲ್ಲಿ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಹಿಂದಿ ದಿವಸ ವಿರೋಧಿ ಅಭಿಯಾನ ನಡೆಯಿತು. ಹಾಗೂ ಕನ್ನಡ ಪರ ಅಭಿಯಾನ ಬೆಂಬಲಿಸುವಂತೆ ವಕೀಲರಿಗೆ ಕರಪತ್ರಗಳನ್ನು ನೀಡಿ ಮನವಿ ಮಾಡಲಾಯಿತು.
ನ್ಯಾಯಪೀಠದ ಮುಂದೆ ವಕೀಲರು ಹಾಗೂ ಕಕ್ಷಿದಾರರಿಗೆ ಸುಲಭವಾಗಿ ಅರ್ಥವಾಗುವಂತೆ, ಸುಲಲಿತವಾಗಿ ಮತ್ತು ನಿರರ್ಗಳವಾಗಿ ಕನ್ನಡ ಭಾಷೆಯಲ್ಲಿ ವಾದಮಂಡನೆ ಸಾಧ್ಯವಾಗುವವರೆಗೆ ಅಭಿಯಾನಕ್ಕೆ ಬೆಂಬಲ ಸೂಚಿಸಬೇಕು ಎಂದು ಈ ವೇಳೆ ಮನವಿ ಮಾಡಲಾಯಿತು.
ಅಭಿಯಾನದಲ್ಲಿ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ ಪಿ ರಂಗನಾಥ್, ವಕೀಲರಾದ ಸೂರ್ಯ ಮುಕುಂದರಾಜ್ ಮೊದಲಾದವರು ಭಾಗವಹಿಸಿದ್ದರು.