ಪತಿಯ ಕಚೇರಿಗೆ ತೆರಳಿ ನಿಂದಿಸುವುದು ಪತ್ನಿಯ ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್
ಪತಿಯ ಕಚೇರಿಗೆ ತೆರಳಿ ನಿಂದಿಸುವುದು ಪತ್ನಿಯ ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್
ತನ್ನ ಪತಿಯ ಕಚೇರಿಗೆ ತೆರಳಿ ಅವರನ್ನು ನಿಂದಿಸುವುದು ಪತ್ನಿ ತನ್ನ ಪತಿಗೆ ಎಸಗುವ ಕ್ರೌರ್ಯಕ್ಕೆ ಸಮಾನ ಎಂದು ಛತ್ತೀಸ್‌ಗಢ ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಗಂಡನಿಗೆ ವಿಚ್ಚೇದನ ನೀಡಿದ್ದ ರಾಯ್‌ಪುರ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ.
ರಾಯಪುರ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವಿಚ್ಚೇದಿತ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದರ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಅನ್ಯ ಮಹಿಳೆ ಅಥವಾ ತನ್ನ ಮಹಿಳಾ ಸಹೋದ್ಯೋಗಿ ಜೊತೆ ಅಕ್ರಮ ಸಂಬಂಧ ಹೊಂದುವುದು ಪತಿ ಎಸಗುವ ಕ್ರೌರ್ಯ ಎಂದು ಪರಿಗಣಿಸಲ್ಪಡುವುದು ಎಂದು ಆಗಸ್ಟ್ 18ರಂದು ಹೈಕೋರ್ಟ್ ತೀರ್ಪು ನೀಡಿತ್ತು.
32 ವರ್ಷದ ಧಮ್ತಾರಿ ಜಿಲ್ಲೆಯ ನಿವಾಸಿ 2010ರಲ್ಲಿ ರಾಯ್‌ಪುರ ನಿವಾಸಿ 34 ವರ್ಷದ ಮಹಿಳೆಯನ್ನು ಮದುವೆಯಾಗಿದ್ದರು. ಬಳಿಕ, ವಿವಿಧ ಕಾರಣಗಳನ್ನು ಉಲ್ಲೇಖಿಸಿ ಪತಿ ವಿಚ್ಛೇದನ ಕೋರಿ ರಾಯ್‌ಪುರ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ತನ್ನನ್ನು ಪತ್ನಿ ನಿಂದಿಸುತ್ತಾಳೆ, ನನ್ನ ಹೆತ್ತವರು ಮತ್ತು ಇತರ ಕುಟುಂಬದ ಸದಸ್ಯರನ್ನು ಭೇಟಿಯಾಗದಂತೆ ತಡೆಯುತ್ತಾಳೆ ಎಂದು ಪತಿ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ 2019ರ ಡಿಸೆಂಬರ್ನಲ್ಲಿ ಅವರಿಗೆ ವಿಚ್ಛೇದನದ ತೀರ್ಪು ನೀಡಿತ್ತು.
ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪತ್ನಿ, ವಿಚ್ಚೇದನ ಪಡೆಯಲು ತನ್ನ ಪತಿ ಸುಳ್ಳು ಪುರಾವೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾದ ಮಂಡಿಸಿದ್ದರು.
ನ್ಯಾಯಾಲಯದ ಮುಂದೆ, ವಿಚಾರಣೆ ಸಮಯದಲ್ಲಿ, ಪತಿಯ ಕಚೇರಿಗೆ ತೆರಳಿ ಪತ್ನಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ನ್ಯಾಯಾಲಯದ ತೀರ್ಪನ್ನು ದೃಢೀಕರಿಸಿತು.