ಐದೇ ನಿಮಿಷದಲ್ಲಿ ಆಸ್ತಿ ನೋಂದಣಿ ನಿಯಮ ಸದ್ಯದಲ್ಲೇ ಜಾರಿ? : ಭ್ರಷ್ಟಾಚಾರ ನಿಗ್ರಹ ಸಾಧ್ಯವೇ..?
ಐದೇ ನಿಮಿಷದಲ್ಲಿ ಆಸ್ತಿ ನೋಂದಣಿ ನಿಯಮ ಸದ್ಯದಲ್ಲೇ ಜಾರಿ? : ಭ್ರಷ್ಟಾಚಾರ ನಿಗ್ರಹ ಸಾಧ್ಯವೇ..?
ಇನ್ನು ಕೇವಲ ಐದೇ ನಿಮಿಷಗಳಲ್ಲಿ ಆಸ್ತಿಯನ್ನು ನೋಂದಣಿ ಮಾಡುವ ನೂತನ ನೋಂದಣಿ ಪದ್ಧತಿ ನವೆಂಬರ್ 1 ರಿಂದ ಜಾರಿಗೆ ಬರಲಿದೆ.
ಆಸ್ತಿ ನೋಂದಣಿಗಾಗಿ ನೋಂದಣಿ ಕಚೇರಿಗೆ ಜನರ ಅಲೆದಾಟ ನಡೆಸುತ್ತಿದ್ದಾರೆ. ಇದನ್ನು ತಪ್ಪಿಸಲು ಕಾವೇರಿ-2 ಎಂಬ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದು ಸಾಕಾರಗೊಂಡರೆ, ಆಸ್ತಿ ನೋಂದಣಿ ಮಾಡಿಸಲು ಜನ ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಡುವುದು ತಪ್ಪಲಿದೆ.
ಹೊಸ ಪದ್ಧತಿಯ ಪ್ರಕಾರ, ಮನೆಯಲ್ಲಿ ಕುಳಿತೇ ಆನ್‌ಲೈನ್ ಮೂಲಕ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಅರ್ಜಿ ಜೊತೆಗೆ ದಾಖಲೆಯನ್ನೂ ಪರಿಶೀಲಿಸಬೇಕು. ವ್ಯತ್ಯಾಸ, ಕೊರತೆ ಇದ್ದರೆ ಅಧಿಕಾರಿಗಳೇ ನೇರವಾಗಿ ಅರ್ಜಿದಾರರಿಗೆ ಮಾಹಿತಿ ನೀಡುತ್ತಾರೆ.
ಆ ಬಳಿಕ, ದಾಖಲೆ ನೋಂದಣಿಗೆ ಸಮಯಾವಕಾಶ ನಿಗದಿಪಡಿಸಲಾಗುತ್ತದೆ. ನಿಗದಿತ ಸಮಯಕ್ಕೆ ನೋಂದಣಿ ಕಚೇರಿಗೆ ಹೋದರೆ, ಅವರ ಭಾವಚಿತ್ರ, ಹೆಬ್ಬೆಟ್ಟು ಗುರುತು ಮತ್ತು ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು ಕೇವಲ ಐದೇ ನಿಮಿಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ.
ಡಿ.ಜಿ. ಲಾಕರ್‌ಗೆ ಪ್ರತಿ ರವಾನೆ:
ನೋಂದಣಿ ಬಳಿಕ ಅದರ ಪ್ರತಿ ಪಡೆಯಲೂ ಅರ್ಜಿದಾರರು ಕಾಯಬೇಕಾಗಿಲ್ಲ. ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಅರ್ಜಿದಾರರ ಡಿ.ಜಿ ಲಾಕರ್‌ಗೆ ಅದರ ಪ್ರತಿ ರವಾನೆಯಾಗುತ್ತದೆ. ಡಿ.ಜಿ. ಲಾಕರ್ ಸುರಕ್ಷಿತವಾದ ಕಾರಣ, ಆ ನೋಂದಣಿ ದಾಖಲೆಯನ್ನು ಬೇರೆಯವರು ಪಡೆಯಲು ಸಾಧ್ಯವಾಗುವುದಿಲ್ಲ.
ಭ್ರಷ್ಟಾಚಾರ ನಿಗ್ರಹ ಸಾಧ್ಯವೇ..?
ಆದರೆ, ಎಲ್ಲೆ ಮೀರಿದ ಭ್ರಷ್ಟಾಚಾರ ಇದರಿಂದ ಸಾಧ್ಯವೇ...? ಇಲ್ಲ ಅನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು. ಇತ್ತೀಚಿನ ದಿನಗಳಲ್ಲಿ ನೋಂದಣಿ ಕಚೇರಿಯಲ್ಲಿ ಖುಲ್ಲಾಂಖುಲ್ಲ ಹಣ ಪಡೆಯಲಾಗುತ್ತದೆ. ಇಷ್ಟು ಹಣ ನೀಡದಿದ್ದರೆ ನೋಂದಣಿ ಅಸಾಧ್ಯ ಎಂಬ ಮಾತಿದೆ.
ಈ ಹಣದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಪಾಲು, ಸಚಿವರ ಪಾಲೂ ಇದೆ ಎನ್ನುವ ಆರೋಪವೂ ಇದೆ.
ಹಿಂದೆಲ್ಲ ತಿಂಗಳಿಗೆ ಒಂದು ಕಂತೆ ಕೊಟ್ಟರೆ ಸಾಕು ಎಂಬ ಅಲಿಖಿತ ನಿಯಮ ಇತ್ತು. ಅದರ ಪ್ರಕಾರ, ಒಂದಷ್ಟು ಹಣವನ್ನು ನೋಂದಣಾಧಿಕಾರಿಗಳು ತಮ್ಮ ಮೇಲಾಧಿಕಾರಿಗಳಿಗೆ ನೀಡಬೇಕು, ಸಚಿವರು, ಶಾಸಕರಿಗೆ ನೀಡಬೇಕು... ಆದರೆ, ಈಗ ಪ್ರತಿ ದಿನದ ಪಾಲು ಕೇಳಲು ಶಾಸಕರ ಕಡೆಯವರು ತಮ್ಮ ಕಚೇರಿಗೆ ಬರುತ್ತಾರೆ. ಹಣ ಪಡೆದು ಮರಳುತ್ತಾರೆ ಎಂಬುದಾಗಿ ಹೆಸರು ಹೇಳಲು ಇಚ್ಚಿಸದ ನೋಂದಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆನ್‌ಲೈನ್ ನೋಂದಣಿ: ಭ್ರಷ್ಟತೆಗೆ ಮತ್ತೊಂದು ದಾರಿ..?
ನಿವಾಸ, ಕಟ್ಟಡ, ನಿವೇಶನ ಮತ್ತು ಭೂಮಿಯ ಖರೀದಿಯಲ್ಲಿ ಯಾರೂ ಮೋಸ ಹೋಗದಂತೆ ತಡೆಯಲು ಸರ್ಕಾರವೇ ಏಜೆನ್ಸಿ ಆರಂಭಿಸಲಿದೆ. ಸಂಬಂಧಿತ ಆಸ್ತಿಯ ಖರೀದಿಯಲ್ಲಿ ಯಾವುದಾದರೂ ಸಮಸ್ಯೆ ಇದೆಯೇ? ಅಥವಾ ಸಮಸ್ಯೆ ಇಲ್ಲವೇ? ಎಂಬುದನ್ನು ಸರ್ಕಾರದ ಏಜೆನ್ಸಿಯೇ ಪರಿಶೀಲಿಸಿ ಗ್ರೀನ್ ಸಿಗ್ನಲ್ ನೀಡುತ್ತದೆ ಎನ್ನುತ್ತದೆ ಕಂದಾಯ ಸಚಿವಾಲಯ.