5 ವರ್ಷವಾದರೂ ಕಾಮಗಾರಿ ಬಿಲ್ ನೀಡದ ಇಲಾಖೆಗೆ ಬಿಸಿ ಮುಟ್ಟಿಸಿದ ಕರ್ನಾಟಕ ಹೈಕೋರ್ಟ್
5 ವರ್ಷವಾದರೂ ಕಾಮಗಾರಿ ಬಿಲ್ ನೀಡದ ಇಲಾಖೆಗೆ ಬಿಸಿ ಮುಟ್ಟಿಸಿದ ಕರ್ನಾಟಕ ಹೈಕೋರ್ಟ್
ಕಾಮಗಾರಿ ಮುಗಿಸಿ ಐದು ವರ್ಷವಾದರೂ ಗುತ್ತಿಗೆದಾರರಿಗೆ ಬಿಲ್ ಪಾಸ್ ಮಾಡದ ಸರ್ಕಾರಿ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಬಿಸಿ ಮುಟ್ಟಿಸಿದೆ.
ಜನರ ಹಿತಾಸಕ್ತಿ ಮುಖ್ಯ. ಅದರ ಜೊತೆಗೆ ಚೆಲ್ಲಾಟವಾಡುವ ಸರ್ಕಾರಿ ಸಂಸ್ಥೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದ ಹೈಕೋರ್ಟ್ ನ್ಯಾಯಪೀಠ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(KSTDC)ಕ್ಕೆ ರೂ. 2 ಲಕ್ಷ ದಂಡ ವಿಧಿಸಿದೆ.
ಕಾಮಗಾರಿ ಮುಗಿಸಿ ಐದು ವರ್ಷವಾದರೂ ಬಿಲ್ ನೀಡದ ಹಿನ್ನೆಲೆಯಲ್ಲಿ, ಬೆಂಗಳೂರು ನಿವಾಸಿ ಪ್ರಥಮ ದರ್ಜೆ ಗುತ್ತಿಗೆದಾರ ಚಿರಂಜೀವಿ ಎಂಬವರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ನ್ಯಾಯಪೀಠ, ಈ ತೀರ್ಪು ಇತರ ಇಲಾಖೆಗಳಿಗೂ ಪಾಠವಾಗಬೇಕು, ಸಮಾಜಕ್ಕೆ ಸ್ಪಷ್ಟ ಸಂದೇಶ ರವಾನೆಯಾಗಬೇಕು ಎಂದು ಬಯಸಿದರು.
"ಸರಕಾರಿ ಸಂಸ್ಥೆಗೆ ಕೆಲಸ ಮಾಡಿಕೊಟ್ಟರೂ ನಿಗದಿತ ಸಮಯಕ್ಕೆ ಬಿಲ್ ಪಾಸ್ ಮಾಡದೆ ಗುತ್ತಿಗೆದಾರನಿಗೆ ತೊಂದರೆ ನೀಡಲಾಗಿದೆ. ಇದು ಇಲಾಖೆಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಸರಿಯಾದ ಪ್ರಕರಣವಾಗಿದೆ. ಜನರ ಹಿತಾಸಕ್ತಿಯನ್ನು ಅಪಾಯಕಾರಿ ಸ್ಥಿತಿಗೆ ದೂಡುವಂತಹ ಸರ್ಕಾರ ಮತ್ತು ಸಂಸ್ಥೆಗಳ ನಿರ್ಲಕ್ಷ್ಯವನ್ನು ನ್ಯಾಯಪೀಠ ಸಹಿಸುವುದಿಲ್ಲ ಎಂಬ ಸಂದೇಶ ರವಾನೆಯಾಗಬೇಕಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.
ಕಾಮಗಾರಿ ನಡೆಸಿದ ಅರ್ಜಿದಾರಿಗೆ ಬಡ್ಡಿ ಸಹಿತ ಬಿಲ್ ಮೊತ್ತ ಹಾಗೂ ಹೆಚ್ಚುವರಿಯಾಗಿ 2 ಲಕ್ಷ ದಂಡದ ಮೊತ್ತ ಪಾವತಿಸಬೇಕು ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಗುತ್ತಿಗೆ ಕಾಮಗಾರಿ ಹಣವಾದ ₹34,85,179 ಅನ್ನು ವಾರ್ಷಿಕ ಶೇ 12ರಷ್ಟು ಬಡ್ಡಿದರಲ್ಲಿ ಪಾವತಿಸಬೇಕು. ಈ ಆದೇಶ ಪಾಲಿಸಿದ ಬಗ್ಗೆ ಆರು ವಾರದಲ್ಲಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ಗೆ ವರದಿ ಸಲ್ಲಿಸಬೇಕು ಎಂದು ಹೈಕೋರ್ಟ್ನಿಗಮಕ್ಕೆ ನಿರ್ದೇಶಿಸಿದೆ.
ಈ ಹಣ ಪಾವತಿಸಲು ತಡ ಮಾಡಿದರೆ, ಹೆಚ್ಚುವರಿಯಾಗಿ ಶೇ 1ರಷ್ಟು ಬಡ್ಡಿ ತೆರಬೇಕಾಗುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿದೆ. ದಂಡದ ಮೊತ್ತ ಮತ್ತು ಬಡ್ಡಿ ಹಣವನ್ನು ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಲೋಪ ಎಸಗಿರುವ ಅಧಿಕಾರಿಗಳಿಂದ ವಸೂಲಿ ಮಾಡಿಕೊಳ್ಳಬಹುದು ಎಂದು ನಿಗಮಕ್ಕೆ ಪೀಠವು ಸೂಚಿಸಿದೆ.