ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರ: ಇತಿಹಾಸ ಸೃಷ್ಟಿಸಿದ ಸಂವಿಧಾನ ಪೀಠ
ಸುಪ್ರೀಂ ಕೋರ್ಟ್ ಕಲಾಪ ನೇರ ಪ್ರಸಾರ: ಇತಿಹಾಸ ಸೃಷ್ಟಿಸಿದ ಸಂವಿಧಾನ ಪೀಠ
ಸುಪ್ರೀಂ ಕೋರ್ಟ್ ಕಲಾಪಗಳು ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುವಂತೆ ಇನ್ನು ನೇರ ಪ್ರಸಾರ ಮಾಡಲಿದೆ. ಸುಪ್ರೀಂ ಕೋರ್ಟ್ ತನ್ನದೇ ವೇದಿಕೆ (ಪ್ಲ್ಯಾಟ್‌ಫಾರಂ) ಮೂಲಕ ಕಲಾಪದ ನೇರ ಪ್ರಸಾರವನ್ನು ನಿರ್ವಹಿಸಲಿದೆ.
ಆರಂಭದಲ್ಲಿ ಸಂವಿಧಾನ ಪೀಠದ ಮುಂದೆ ಬರುವ ಅರ್ಜಿಗಳನ್ನು ವಿಚಾರಣೆ ನಡೆಸುವ ಕಲಾಪದ ನೇರ ಪ್ರಸಾರ ನಡೆಯಲಿದೆ. ಸೆಪ್ಟಂಬರ್ 27ರಂದು ಮೊದಲ ನೇರ ಪ್ರಸಾರ ನಡೆಯುತ್ತದೆ.
ಸಾಮಾನ್ಯವಾಗಿ ಯೂಟ್ಯೂಬ್‌ನಲ್ಲಿ ಕಲಾಪದ ಪ್ರಸಾರ ಮಾಡುವುದಿದ್ದರೆ ಅದರ ಹಕ್ಕುಸ್ವಾಮ್ಯ (ಕಾಪಿರೈಟ್) ಪಡೆದುಕೊಳ್ಳಬೇಕು. ಹಾಗಾಗಿ, ಸುಪ್ರೀಂ ಕೋರ್ಟ್ ಕಲಾಪಗಳ ನೇರಪ್ರಸಾರಕ್ಕೆ ವೇದಿಕೆಯನ್ನು (ಪ್ಲಾಟ್‌ಫಾರ್ಮ್) ಬಳಸಿಕೊಳ್ಳಲಿದೆ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ಕಲಾಪದ ನೇರ ಪ್ರಸಾರವನ್ನು ಆರಂಭಿಸಲು ಸುಪ್ರೀಂ ಕೋರ್ಟ್ ಪೂರ್ಣ ನ್ಯಾಯಾಲಯ ಸೆಪ್ಟೆಂಬರ್ 22ರಂದು ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರ ಸರ್ವಾನುಮತದಿಂದ ಕೂಡಿದ್ದು ಆರಂಭಿಕ ಹಂತದಲ್ಲಿ ವಿಚಾರಣೆಗಳನ್ನು ಯೂಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು ಎಂದು ನ್ಯಾಯಪೀಠ ಹೇಳಿದೆ.
ಈ ದಿಸೆಯಲ್ಲಿ, ಪ್ರಾರಂಭಿಕ ಹಂತದಲ್ಲಿ ಕೇವಲ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಯಾಗುವ ಅರ್ಜಿಗಳ ವಿಚಾರಣೆ ಮಾತ್ರವೇ ಯೂಟ್ಯೂಬ್ (You Tube) ಮೂಲಕ ನೇರ ಪ್ರಸಾರ ಮಾಡಲಾಗುವುದು. ವಿಚಾರಣೆ ವೇಳೆ, ಸಾಂವಿಧಾನಿಕ ಮಹತ್ವದ ಅರ್ಜಿಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡುವುದರಿಂದ ಜನರಿಗೂ ಅವುಗಳ ಕುರಿತು ಅರಿವು ಮೂಡುತ್ತದೆ ಮತ್ತು ವಿಚಾರಣೆಯ ವಿಚಾರವು ಸಾರ್ವಜನಿಕರಿಗೆ ಒಂದು ಉತ್ತಮ ಮಾಹಿತಿ ಸಂಗ್ರಹವೂ ಆಗುತ್ತದೆ ಎಂಬ ಒತ್ತಾಯ ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಮುಂದಾಗಿದೆ.
2022ರ ಆಗಸ್ಟ್ 26ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ನ್ಯಾಯಪೀಠ ತನ್ನ ಕಲಾಪದ ದೃಶ್ಯವನ್ನು ಸಾರ್ವಜನಿಕ ವಲಯಕ್ಕೆ ಮೊಟ್ಟಮೊದಲ ಬಾರಿಗೆ ನೇರಪ್ರಸಾರ ಮಾಡಿ ಇತಿಹಾಸ ಸೃಷ್ಟಿಸಿತ್ತು. ಮತ್ತು ಈ ನೇರ ಪ್ರಸಾರ ಪ್ರಾಯೋಗಿಕ ಪ್ರಯತ್ನವಾಗಿತ್ತು.
ಕಲಾಪದ ನೇರ ಪ್ರಸಾರಕ್ಕೆ ಪ್ರತ್ಯೇಕ ವ್ಯವಸ್ಥೆ:
ತನ್ನ ಪ್ರಕ್ರಿಯೆಗಳನ್ನು ಲೈವ್-ಸ್ಟ್ರೀಮ್ ಮಾಡಲು ತನ್ನದೇ ಆದ "ಪ್ಲಾಟ್‌ಫಾರ್ಮ್" ಅನ್ನು ಹೊಂದಿರುತ್ತದೆ ಮತ್ತು ಯೂಟ್ಯೂಬ್ ಬಳಕೆ ತಾತ್ಕಾಲಿಕವಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ದೇಶದ ಅತ್ಯುನ್ನತ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ತನ್ನ ಕಲಾಪಗಳ ಹಕ್ಕು ಸ್ವಾಮ್ಯವನ್ನು ಯೂಟ್ಯೂಬ್‌ನಂತಹ ಖಾಸಗಿ ವೇದಿಕೆಗಳಿಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿತು.