ಕರ್ನಾಟಕ ನಾಗರಿಕ ಸೇವಾ ನಿಯಮ 16 (ಎ) ರದ್ದು- ಸರ್ಕಾರಿ ನೌಕರರಿಗೆ ಸಂಕಷ್ಟ: ಅಂತರ್ ಜಿಲ್ಲಾ ವರ್ಗಾವಣೆಗೆ ಬ್ರೇಕ್
ಸರ್ಕಾರಿ ನೌಕರರಿಗೆ ಸಂಕಷ್ಟ: ಅಂತರ್ ಜಿಲ್ಲಾ ವರ್ಗಾವಣೆಗೆ ಬ್ರೇಕ್
ಸರ್ಕಾರಿ ನೌಕರರ ಅಂತರ್ಜಿಲ್ಲಾ ವರ್ಗಾವಣೆಗೆ ಬ್ರೇಕ್ ಬಿದ್ದಿದೆ. ಇದರಿಂದ ಪತಿ ಪತ್ನಿ ಸಹಿತ ವಿವಿಧ ಕಾರಣಗಳಿಂದ ಬೇರೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ತವರು ಜಿಲ್ಲೆಗೆ ವರ್ಗಾವಣೆ ಆಗುವ ಕನಸು ಭಗ್ನವಾಗಿದೆ.
ಆಯಾ ಜಿಲ್ಲಾ ಮಟ್ಟದ ಜ್ಯೇಷ್ಠತೆ (Seniority) ಆಧಾರದಲ್ಲಿ ಸಿಗಬೇಕಿದ್ದ ವರ್ಗಾವಣೆ ಕರ್ನಾಟಕ ನಾಗರಿಕ ಸೇವಾ ನಿಯಮಗಳ 16 (ಎ) ರದ್ದಾಗಿರುವುದರಿಂದ ಅಂತರ್ ಜಿಲ್ಲಾ ವರ್ಗಾವಣೆ ಅವಕಾಶ ಕೈತಪ್ಪಿ ಹೋಗಿದೆ.
ಕೆಲವು ನೌಕರರು ಪ್ರಭಾವ ಬಳಸಿ ವರ್ಗಾವಣೆಗೆ ಪ್ರಯತ್ನ ಮಾಡುತ್ತಾರೆ. ಇನ್ನು ಹಲವರು ತಮ್ಮ ಮೇಲಾಧಿಕಾರಿಗಳ ದುಂಬಾಲು ಬೀಳುತ್ತಾರೆ.
16 (ಎ) ರದ್ದತಿಗೆ ಕಾರಣ ಏನು..?
ನೌಕರರ ವರ್ಗಾವಣೆ ನೆಪದಿಂದ ಸರ್ಕಾರಿ ಕೆಲಸಗಳು ವಿಳಂಬವಾಗುತ್ತವೆ. ಇಲಾಖೆಗಳ ಅಧಿಕಾರಿಗಳ ಮೇಲೆ ವರ್ಗಾವಣೆಗೆ ಒತ್ತಡ ಹಾಕಲಾಗುತ್ತದೆ. ಈ ಕಾರಣದಿಂದಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಗಳ 16(ಎ) ರದ್ದುಗೊಳಿಸಲಾಗಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮೊದಲು, ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳ 16(ಎ) ಪ್ರಕಾರ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಈ ಕಲಂನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಕೆಲವು ಇಲಾಖೆಗಳ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಈ ಅವಕಾಶ ಕೈತಪ್ಪಿದಂತಾಗಿದೆ.
ಇದರಿಂದ ಸರ್ಕಾರಿ ಇಲಾಖೆಯ ಸಿ ಮತ್ತು ಡಿ ದರ್ಜೆಯ ನೌಕರರು ನಿವೃತ್ತಿಯೊಳಗೆ ಬಯಸಿದ ಜಿಲ್ಲೆಗೆ ಅಥವಾ ಸ್ವಂತ ಜಿಲ್ಲೆಗೆ ವರ್ಗಾವಣೆ ಪಡೆಯುವ ಅವಕಾಶ ಇಲ್ಲದಂತಾಗಿದೆ.
ಸರ್ಕಾರದ ಪ್ರಮುಖ ಇಲಾಖೆಗಳಾದ ಅಬಕಾರಿ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಂದಾಯ ಇಲಾಖೆಯ ನೌಕರರಿಗೆ ಈ ನಿಯಮ ಗಂಟಲಲ್ಲಿ ಸಿಲುಕಿದ ಬಿಸಿ ತುಪ್ಪದಂತಾಗಿದೆ.
ಸರ್ಕಾರದ ನಿರ್ಧಾರಕ್ಕೆ ನೌಕರರ ವರ್ಗದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ದಂಪತಿ ಪ್ರಕರಣಗಳಿಗಾದರೂ ವಿಶೇಷ ವಿನಾಯಿತಿ ನೀಡಬೇಕು ಎಂಬ ಕೂಗು ಕೇಳಿಬಂದಿದೆ. ಅದರಲ್ಲೂ ಮುಖ್ಯವಾಗಿ, ಪಂಚಾಯತ್‌ರಾಜ್ ಮತ್ತು ಗ್ರಾಮೀಣಾಭಿವೃದ್ಧಿ, ಅಬಕಾರಿ ಇಲಾಖೆ, ಕಂದಾಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ದಂಪತಿಗಳು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ.
ದಾಂಪತ್ಯದಲ್ಲಿ ವಿರಸ?
ಈ ನಿಯಮ ರದ್ದು ಆದ ಕಾರಣ, ಅಂತರ ಜಿಲ್ಲಾ ವರ್ಗಾವಣೆಗಿದ್ದ ಅವಕಾಶ ಇಲ್ಲವಾಗಿದ್ದ, ಸಿ ಮತ್ತು ಡಿ ದರ್ಜೆಯ ಸಿಬ್ಬಂದಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶವಿಲ್ಲದೇ ದಂಪತಿ ದೂರವಾಗಿಯೇ ಇರಬೇಕಾಗಿದೆ.
ಸರ್ಕಾರದ ಈ ನಡೆಯಿಂದ ಲಕ್ಷಾಂತರ ನೌಕರರ ಪತಿ-ಪತ್ನಿಯರು ನಿವೃತ್ತಿವರೆಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುವ ಅನಿವಾರ್ಯತೆ ಉಂಟಾಗಿದೆ. ಇದೇ ಕಾರಣದಿಂದ ದಾಂಪತ್ಯ ಕಲಹ, ವಿರಸ, ವಿಚ್ಚೇದನ ಆಗುವ ಪ್ರಸಂಗವೂ ಹೆಚ್ಚಾಗತೊಡಗಿದೆ.