ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ನಿಯಂತ್ರಣ ಕಾಯ್ದೆ: ಕೇಂದ್ರ ಸರ್ಕಾರ ಇಂಗಿತ
ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮ ನಿಯಂತ್ರಣ ಕಾಯ್ದೆ: ಕೇಂದ್ರ ಸರ್ಕಾರ ಇಂಗಿತ
ಸಾಮಾಜಿಕ ಮಾಧ್ಯಮಗಳ ಬಗ್ಗೆ ಕಟ್ಟುನಿಟ್ಟಿನ ನಿಯಮ ರೂಪಿಸಿ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ಕಾಯ್ದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಸಾಮಾಜಿಕ ಮಾಧ್ಯಮ ಖಾತೆಗಳ ಸಸ್ಪೆಂಡ್ ಮಾಡಿದ ಪ್ರಕರಣಕ್ಕೆ ಸಂಬಂದಿಸಿದಂತೆ ದೆಹಲಿ ಹೈಕೋರ್ಟ್ ನಲ್ಲಿ ನಡೆದ ವಿಚಾರಣೆ ವೇಳೆ ಕೇಂದ್ರ ಸರ್ಕಾರದ ವಕೀಲರು ಈ ವಿಷಯ ಬಹಿರಂಗ ಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾ ಖಾತೆಗಳ ಸಸ್ಪೆಂಡ್ ಅಥವಾ ಶಾಶ್ವತ ನಿಷೇಧ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್ ನ್ಯಾಯಪೀಠ, ಪ್ರಕರಣದ ಮುಖ್ಯ ವಿಚಾರಕ್ಕೆ ಹೋಗುವ ಮುನ್ನ ಸರ್ಕಾರದ ನೀತಿ ಸ್ಪಷ್ಟಪಡಿಸಲಿ ಎಂದು ಹೇಳಿತು.
ಸದ್ರಿ ನ್ಯಾಯಪೀಠದ ಮುಂದೆ ಇರುವ ಇಂಥದ್ದೇ ಇತರ ಮನವಿಗಳ ಮೇಲೆ ಈ ವಿಷಯ ಪರಿಣಾಮ ಬೀರುವುದರಿಂದ ಕೇಂದ್ರ ಸರ್ಕಾರ ಮೊದಲು ತನ್ನ ನಿಲುವು ಸ್ಪಷ್ಟಪಡಿಲಿ ಎಂದು ನ್ಯಾಯಪೀಠ ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.
ಆಗ, ಸೋಶಿಯಲ್ ಮೀಡಿಯಾ ವೇದಿಕೆಗಳಿಂದ ಬಳಕೆದಾರರನ್ನು ಅಮಾನತು ಮಾಡುವ ಅಥವಾ ಶಾಶ್ವತವಾಗಿ ನಿಷೇಧಿಸುವ ಕುರಿತು ಮಾರ್ಗಸೂಚಿಗಳು ಶೀಘ್ರದಲ್ಲೇ ಬರಲಿದೆ ಮತ್ತು ಅದು ನಿರೀಕ್ಷಿತ ಎಂದು ಕೇಂದ್ರ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಈ ಮಾರ್ಗಸೂಚಿಗಳು ಯಾವಾಗ ಬರುತ್ತವೆ ಎಂಬುದರ ಕುರಿತು ಸ್ಪಷ್ಟತೆ ಇದೆ ಎಂದು ಸಿಂಗ್ ತಿಳಿಸಿದ ನಂತರ, ನಿಷೇಧಿತ ಸಾಮಾಜಿಕ ಮಾಧ್ಯಮ ಬಳಕೆದಾರರ ಪರ ವಕೀಲರು ವಿಚಾರಣೆಗೆ ಒತ್ತಾಯಿಸಿದರು.
ಡಿ. 19ಕ್ಕೆ ನಡೆಯುವ ಮುಂದಿನ ವಿಚಾರಣೆ ಒಳಗೆ ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸದಿದ್ದರೆ, ನ್ಯಾಯಾಲಯ ಪ್ರಮುಖ ವಿಷಯದ ಕುರಿತಂತೆ ನಿರ್ಧರಿಸುತ್ತದೆ ಎಂದು ನ್ಯಾಯಪೀಠ ಎಚ್ಚರಿಸಿತು.