![ವಕೀಲರ ಅನಗತ್ಯ ವಾದ ಸರಣಿಗೆ ಬ್ರೇಕ್; ಕಾಲ ನಿರ್ಬಂಧ ಸೂಕ್ತ: ಕರ್ನಾಟಕ ಹೈಕೋರ್ಟ್ ವಕೀಲರ ಅನಗತ್ಯ ವಾದ ಸರಣಿಗೆ ಬ್ರೇಕ್; ಕಾಲ ನಿರ್ಬಂಧ ಸೂಕ್ತ: ಕರ್ನಾಟಕ ಹೈಕೋರ್ಟ್](https://blogger.googleusercontent.com/img/b/R29vZ2xl/AVvXsEj_sdbrz-EllVxLKklzFXG5FtqjusCx7fdOjmXkhzAuZxK4T_LGv--I3sMu4njuNh8z5gucwRz1T3F2KUPwxUpOSm3dInb3Xdl6jbrW4ax1kVB29pqU51w-pnMPP3H6xSFusNKVDV9_pABlhfQ9WOshbQeJ-VR6ENjJHIyDo4wpkt6Y4kgRoA6JA0Qr3w/w640-h428/Justice%20and%20Equity.jpg)
ವಕೀಲರ ಅನಗತ್ಯ ವಾದ ಸರಣಿಗೆ ಬ್ರೇಕ್; ಕಾಲ ನಿರ್ಬಂಧ ಸೂಕ್ತ: ಕರ್ನಾಟಕ ಹೈಕೋರ್ಟ್
ವಕೀಲರ ಅನಗತ್ಯ ವಾದ ಸರಣಿಗೆ ಬ್ರೇಕ್; ಕಾಲ ನಿರ್ಬಂಧ ಸೂಕ್ತ: ಕರ್ನಾಟಕ ಹೈಕೋರ್ಟ್
ವಕೀಲರು ಕ್ಷುಲ್ಲಕ ವಿಚಾರಕ್ಕೂ ಗಂಟೆಗಟ್ಟಲೆ ವಾದ ಮಂಡಿಸುವ ಪ್ರಕ್ರಿಯೆಗೆ ಮಿತಿ ಹೇರುವ ಅಗತ್ಯವಿದೆ. ಇದರಿಂದ ನ್ಯಾಯಾಲಯದ ಕಲಪಾ ಸಮಯ ವೃಥಾ ವ್ಯರ್ಥವಾಗುವುದು ತಪ್ಪುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಒಂದು ಅರ್ಜಿ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಾಗ, ಅದರ ಸ್ವೀಕೃತಿಗೆ ವಕೀಲರು ಗಂಟೆಗಟ್ಟಲೆ ವಾದ ಮಂಡಿಸುತ್ತಾರೆ. ಈ ಅರ್ಜಿಯನ್ನು ಓದಿಕೊಂಡು ಅದರ ಹೂರಣವನ್ನಷ್ಟೇ ತಿಳಿಸಿದರೆ, ಅದೇ ನ್ಯಾಯಪೀಠಕ್ಕೆ ವಕೀಲರು ಮಾಡುವ ಉಪಕಾರ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಹೇಳಿದರು.
'ವಿಚಾರಣೆಗೆ ಬರುವ ಅರ್ಜಿಗಳನ್ನು ಓದಿಕೊಂಡು ಬಂದರೆ ಈ ಸಮಸ್ಯೆಯೇ ಇರುವುದಿಲ್ಲ. ಬ್ರಿಟಿಷ್ ನ್ಯಾಯಾಲಯದ ಕಲಾಪವನ್ನು ನೋಡಿ.. ಅಲ್ಲಿ ನಿರ್ದಿಷ್ಟವಾಗಿ ಪ್ರಕರಣ ನಡೆಸಲಾಗುತ್ತದೆ” ಎಂದು ನ್ಯಾ. ದೀಕ್ಷಿತ್ ವಿವರಿಸಿದರು.
LIC ಆಫ್ ಇಂಡಿಯಾ Vs ಎಸ್ಕಾರ್ಟ್ಸ್ ಲಿಮಿಟೆಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಚಿನ್ನಪ್ಪ ರೆಡ್ಡಿ ಅವರು “ವಾದ ಸರಣಿಗೆ ನ್ಯಾಯಾಲಯವು ಕಾಲ ನಿಗದಿಪಡಿಸಲು ಇದು ಸುಸಂದರ್ಭ ಎಂದು ಹೇಳಿದ್ದಾರೆ” ಎಂದು ನ್ಯಾ. ದೀಕ್ಷಿತ್ ನೆನಪಿಸಿದರು.
ಹೆಚ್ಚಿನ ಅರ್ಜಿ ವಿಚಾರಣೆಗೆ ಮೂರು ನಿಮಿಷಗಳು ಸಾಕು. ನ್ಯಾಯಪೀಠ ಹೆಚ್ಚು ಸಮಯ ತೆಗೆದುಕೊಂಡು ಪ್ರಕರಣಗಳು ಬಾಕಿ ಉಳಿಯಲು ಕಾರಣವಾಗುತ್ತವೆ. ಪೀಠಾಸೀನ ಅಧಿಕಾರಿಗಳ ಅಸಮರ್ಥತೆಯೂ ಇದಕ್ಕೆ ಕಾರಣ ಎಂದು ನ್ಯಾಯಮೂರ್ತಿಗಳ ವಿರುದ್ಧವೇ ಕೃಷ್ಣ ದೀಕ್ಷಿತ್ ಅಸಮಾಧಾನ ವ್ಯಕ್ತಪಡಿಸಿದರು.
'ಜಾನುವಾರುಗಳನ್ನು ಹೊಳಗೆ ಕರೆದುಕೊಂಡು ಹೋಗಿದ್ದೆ. ಹೊಳೆ ತುಂಬಿತ್ತು. ನೀರು ಈ ಬಣ್ಣದಲ್ಲಿತ್ತು. ಇದೆಲ್ಲವನ್ನೂ ಇಟ್ಟುಕೊಂಡು ಏನು ಮಾಡೋಣ? ಎಂದ ಅವರು, ವಕೀಲರನ್ನು ಕುರಿತು “ನಿಮ್ಮದೇ ಆದ ರೀತಿಯಲ್ಲಿ ನಿಮ್ಮ ಮನವಿಗಳನ್ನು ಓದಿಕೊಳ್ಳಬೇಕು. ಅರ್ಜಿ ಸ್ವೀಕೃತಿಗೆ ಅರ್ಧ ಗಂಟೆ ತೆಗೆದುಕೊಂಡರೆ ಹೇಗೆ? ಉಳಿದವರ ಗತಿ ಏನಾಗಬೇಕು. ಎಲ್ಲರಿಗೂ ಅರ್ಜೆಂಟ್ ಇದೆ. ಯಾವುದೇ ಕೋರ್ಟ್ ಇರಲಿ, ಪ್ರಕರಣದ ಕುರಿತು ಟಿಪ್ಪಣಿ ಮಾಡಿಕೊಳ್ಳಬೇಕು. ಅರ್ಜಿಯ ವಾಸ್ತವಿಕ ವಿಚಾರಗಳು ಹೀಗಿವೆ.. 'ಲೀಗಲ್ ಮ್ಯಾಟ್ರಿಕ್ಸ್' ಸಾಧ್ಯತೆ ಹೀಗಿದೆ. ತೀರ್ಪುಗಳು ಹೀಗಿವೆ. ಸೆಕ್ಷನ್‌ಗಳು ಈ ರೀತಿ ಇವೆ ಎಂದು ವಾದ ಮಂಡಿಸಬೇಕು. ಹೀಗೆ ಮಾಡಿದರೆ, ಅದು ನ್ಯಾಯಪೀಠಕ್ಕೆ ಮಾಡುವ ಚಿಕ್ಕ ಸಹಾಯ ಎಂದು ಅವರು ಹೇಳಿದರು.
ಭಾರತದಲ್ಲಿ 4,21,16,374 ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿವೆ. ಕರ್ನಾಟಕ ಹೈಕೋರ್ಟ್‌ನಲ್ಲಿ 59,56,407 ಪ್ರಕರಣಗಳು ಬಾಕಿ ಉಳಿದಿವೆ ಎಂಬುದನ್ನು ನ್ಯಾಯಾಂಗದ ಅಧಿಕೃತ ಸಾಂಖ್ಯಿಕ ವಿಭಾಗದ ಮಾಹಿತಿಯೇ ತಿಳಿಸುತ್ತದೆ.