ಬೇಕಾಬಿಟ್ಟಿ ಟ್ರಾನ್‌ಫರ್‌ಗೆ ಕಡಿವಾಣ: ಹೊಸ ಹುದ್ದೆ ತೋರಿಸದೆ ವರ್ಗಾವಣೆ ಮಾಡುವಂತಿಲ್ಲ- ಹೈಕೋರ್ಟ್
ಬೇಕಾಬಿಟ್ಟಿ ಟ್ರಾನ್‌ಫರ್‌ಗೆ ಕಡಿವಾಣ: ಹೊಸ ಹುದ್ದೆ ತೋರಿಸದೆ ವರ್ಗಾವಣೆ ಮಾಡುವಂತಿಲ್ಲ- ಹೈಕೋರ್ಟ್
ನೌಕರರ ವರ್ಗಾವಣೆಗೆ ಕಡಿವಾಣ ಬಿದ್ದಿದೆ. ಬೇಕಾಬಿಟ್ಟಿ ವರ್ಗಾವಣೆಗೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, ಹೊಸ ಹುದ್ದೆ ತೋರಿಸದೆ ವರ್ಗಾವಣೆ ಮಾಡುವಂತಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪುರಸಭೆ ಮುಖ್ಯಾಧಿಕಾರಿಯನ್ನು ನೂತನ ಹುದ್ದೆ ತೋರಿಸದೆ ವರ್ಗಾವಣೆ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್, ವರ್ಗಾವಣೆ ಮಾಡಿ ಆದೇಶ ಹೊರಡಿಸಿದಾಗ ಅಧಿಕಾರಿಗೆ ಹೊಸ ಹುದ್ದೆ ತೋರಿಸುವುದು ಕಡ್ಡಾಯ ಎಂದು ಹೇಳಿದ್ದು, ಬಾಧಿತ ಅರ್ಜಿದಾರರನ್ನು ಅದೇ ಹುದ್ದೆಗೆ ಮರು ನಿಯೋಜಿಸುವಂತೆ ಸೂಚಿಸಿದೆ.
ಬಾಧಿತ ಅಧಿಕಾರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸುನಿಲ್ ದತ್ ಯಾದವ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಶಾಸಕರೊಬ್ಬರು ಬರೆದ ಪತ್ರದ ಆಧಾರದಲ್ಲಿ ಅವರನ್ನು ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆ ಮಾಡಿ ಆರು ತಿಂಗಳಾದರೂ ಅವರಿಗೆ ಹೊಸ ಹುದ್ದೆ ತೋರಿಸಿರಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್, ವರ್ಗಾವಣೆಗೆ ನಿಯಮಗಳು ಪಾಲನೆಯಾಗಬೇಕು. ಸಾಮಾನ್ಯ ವರ್ಗಾವಣೆಯನ್ನು ಅವಧಿ ನಂತರ ಖಾಲಿ ಇರುವ ಹುದ್ದೆಗಳಿಗೆ ಹೊರತುಪಡಿಸಿ ಬೇರೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಕರ್ನಾಟಕ ಹೈಕೋರ್ಟ್ ಇತ್ಯರ್ಥಪಡಿಸಿದ ಎಂ. ಅರುಣ್ ಪ್ರಸಾದ್ Vs ರಾಜ್ಯ ಅಬಕಾರಿ ಆಯುಕ್ತರು ಪ್ರಕರಣದಲ್ಲಿ ನೀಡಲಾದ ತೀರ್ಪು ಆಧರಿಸಿ ಕರ್ನಾಟಕ ಸರ್ಕಾರ 27-03-2017ರಂದು ವರ್ಗಾವಣೆ ಕುರಿತು ಸುತ್ತೋಲೆ ಹೊರಡಿಸಿತ್ತು. ವರ್ಗಾವಣೆ ವೇಳೆ ಅಧಿಕಾರಿಗೆ ಹೊಸ ಹುದ್ದೆ ತೋರಿಸದಿದ್ದರೆ ಅದಕ್ಕೆ ಸಕಾರಣವನ್ನು ಲಿಖಿತವಾಗಿ ನೀಡಬೇಕು ಮತ್ತು ಅದು ಆಡಳಿತಾತ್ಮಕ ಕಾರಣವಾಗಿರಬೇಕು ಎಂದು ಹೇಳಿತ್ತು.
ಈ ಸುತ್ತೋಲೆಯ ಮಾನದಂಡ ಸದ್ರಿ ಪ್ರಕರಣದಲ್ಲಿ ಪಾಲನೆಯಾಗಿಲ್ಲ ಎಂದು ನ್ಯಾಯಪೀಠ ರಾಜ್ಯ ಸರ್ಕಾರದ ವರ್ಗಾವಣೆಯ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.