-->
Suit Valuation Slip: ವಾದಪತ್ರ ಜೊತೆ ದಾವಾ ಮೌಲ್ಯಮಾಪನ ಪಟ್ಟಿ ಸಲ್ಲಿಕೆ ಕಡ್ಡಾಯವೇ?

Suit Valuation Slip: ವಾದಪತ್ರ ಜೊತೆ ದಾವಾ ಮೌಲ್ಯಮಾಪನ ಪಟ್ಟಿ ಸಲ್ಲಿಕೆ ಕಡ್ಡಾಯವೇ?

Suit Valuation Slip: ವಾದಪತ್ರ ಜೊತೆ ದಾವಾ ಮೌಲ್ಯಮಾಪನ ಪಟ್ಟಿ ಸಲ್ಲಿಕೆ ಕಡ್ಡಾಯವೇ?





ಸಿವಿಲ್ ನ್ಯಾಯಾಲಯಗಳಲ್ಲಿ ದಾಖಲಿಸುವ ಎಲ್ಲಾ ವಿಧದ ದಾವೆಗಳಲ್ಲಿ ವಾದಪತ್ರದ ಜೊತೆಗೆ ದಾವಾ ಮೌಲ್ಯಮಾಪನ ಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯವೇ ಎಂಬ ಪ್ರಶ್ನೆಗೆ ಉತ್ತರ ಭಾಗಶಃ ಸಕಾರಾತ್ಮಕವಾಗಿದೆ.



ಸಿವಿಲ್ ರೂಲ್ಸ್ ಆಫ್ ಪ್ರಾಕ್ಟೀಸ್ ನ ನಿಯಮ 11(1) ಪ್ರಕಾರ ಯಾವುದೇ ದಾವೆಯು ಸ್ಥಿರಾಸ್ತಿ ಗೆ ಸಂಬಂಧಪಟ್ಟಲ್ಲಿ ವಾದಪತ್ರದ ಜೊತೆಗೆ ದಾವಾ ಮೌಲ್ಯಮಾಪನ ಪಟ್ಟಿಯನ್ನು ಸಲ್ಲಿಸತಕ್ಕದ್ದು. ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲ್ಯಮಾಪನ ಕಾಯ್ದೆ (Karnataka Court Fee and Suit Valuation Act) 1958 ರಡಿ ದಾವಾ ಆಸ್ತಿಗಳ ಮೌಲ್ಯವನ್ನು ನಿಗದಿಪಡಿಸಬೇಕಾದಲ್ಲಿ ನಿಗದಿಪಡಿಸಿದ ನಮೂನೆ 1ರಲ್ಲಿ ದಾವಾ ಮೌಲ್ಯಮಾಪನ ಪಟ್ಟಿಯನ್ನು ಪಕ್ಷಕಾರರ ಸಹಿಯೊಂದಿಗೆ ಹಾಜರು ಪಡಿಸತಕ್ಕದ್ದು ಎಂದು ತಿಳಿಸಲಾಗಿದೆ.



ಸದರಿ ನಮೂನೆ 1ರ ಎರಡನೆಯ ಕಾಲಂನಲ್ಲಿ ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲ್ಯಮಾಪನ ಕಾಯ್ದೆ 1958 ರ ಸೆಕ್ಷನ್ 7 (2)ರಡಿ ಬರುವ ಯಾವ ಖಂಡಿಕೆಯಡಿ ದಾವೆಯನ್ನು ಮೌಲ್ಯಮಾಪನ ಮಾಡಲಾಗಿದೆ ಎಂಬುದನ್ನು ಕಾಣಿಸಬೇಕಾಗಿದೆ.



ಕರ್ನಾಟಕ ನ್ಯಾಯಾಲಯ ಶುಲ್ಕ ಮತ್ತು ದಾವಾ ಮೌಲ್ಯಮಾಪನ ಕಾಯ್ದೆ 1958 ರಡಿ ಈ ಕೆಳಗಿನ ಸೆಕ್ಷನ್ ಗಳು ಸದರಿ ಕಾಯ್ದೆಯ ಸೆಕ್ಷನ್ 7 (2)ರಡಿ ಬರುತ್ತವೆ.



Section 24(a) 24(b), 26(a), 27, 28, 29, 31, 35(1), 35(2), 36, 38, 39, 45


ಮೇಲ್ಕಾಣಿಸಿದ ಸೆಕ್ಷನ್ ಗಳನ್ನು ಹೊರತುಪಡಿಸಿ ಉಳಿದ ಸೆಕ್ಷನ್ ಗಳಡಿ ದಾವೆಯನ್ನು ಮೌಲ್ಯಮಾಪನ ಮಾಡಿದ್ದಲ್ಲಿ ವಾದಪತ್ರದ ಜೊತೆಗೆ ದಾವಾ ಮೌಲ್ಯಮಾಪನ ಪಟ್ಟಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ.



ಹಣಕಾಸಿನ ದಾವೆಗಳು, ಶಾಶ್ವತ ನಿರ್ಬಂಧಕಾಜ್ಞೆ ಕೋರಿ ಸಲ್ಲಿಸುವ ದಾವೆಗಳಿಗೆ ವಾದಪತ್ರದ ಜೊತೆಗೆ ಸಾಮಾನ್ಯವಾಗಿ ದಾವಾ ಮೌಲ್ಯಮಾಪನ ಪಟ್ಟಿಯನ್ನು ಲಗತ್ತಿಸುವ ಪದ್ಧತಿ ಇಲ್ಲ. ಏಕೆಂದರೆ ಸದರಿ ದಾವೆಗಳನ್ನು ಸೆಕ್ಷನ್ 7 (2)ರಡಿ ಕಾಣಿಸಲಾದ ಯಾವುದೇ ಸೆಕ್ಷನ್ ಗಳಡಿ ಮೌಲ್ಯಮಾಪನ ಮಾಡಿರುವುದಿಲ್ಲ.



ಸೆಕ್ಷನ್ 7 (2) (a) ಪ್ರಕಾರ ದಾವಾ ಸ್ಥಿರಾಸ್ತಿ ಕೃಷಿ ಜಮೀನು ಆಗಿದ್ದಲ್ಲಿ ಹಾಗೂ ತೀರ್ವೆಯನ್ನು ಶಾಶ್ವತವಾಗಿ ನಿಗದಿಪಡಿಸಿದ್ದಲ್ಲಿ ತೀರ್ವೆಯ 25 ಪಟ್ಟು ಮೌಲ್ಯಮಾಪನ ಮಾಡತಕ್ಕದ್ದು ಎಂದು ತಿಳಿಸಲಾಗಿದೆ.



ಸೆಕ್ಷನ್ 7 (2) (b) ಪ್ರಕಾರ ದಾವಾ ಸ್ಥಿರಾಸ್ತಿ ಕೃಷಿ ಜಮೀನು ಆಗಿದ್ದು ತೀರ್ವೇಯನ್ನು ಶಾಶ್ವತವಾಗಿ ನಿಗದಿ ಪಡಿಸಿಲ್ಲವಾದಲ್ಲಿ ತೀರ್ವೆಯ 12.50 ಪಟ್ಟು ಮೌಲ್ಯಮಾಪನ ಮಾಡತಕ್ಕದ್ದಾಗಿದೆ.



ಸೆಕ್ಷನ್ 7 (2) (c) ಪ್ರಕಾರ ದಾವಾ ಸ್ಥಿರಾಸ್ತಿಯು ತೀರ್ವೇ ಪಾವತಿಯಿಂದ ವಿರಹಿತಪಟ್ಟಲ್ಲಿ ಅಥವಾ ದಾವಾ ಸ್ಥಿರಾಸ್ತಿಯು ಭಾಗಾಯ್ತು, ಮನೆ ನಿವೇಶನ ವಾಗಿದ್ದಲ್ಲಿ ಸದರಿ ಸೊತ್ತಿನ ಲಾಭಾಂಶದ 15 ಪಟ್ಟು ಅಥವಾ ಅದೇ ರೀತಿಯ ಹತ್ತಿರದ ಸ್ಥಿರಾಸ್ತಿಯ ತೀರ್ವೆಯ 30 ಪಟ್ಟು ಯಾವುದು ಕಡಿಮೆಯೋ ಅಷ್ಟು ನ್ಯಾಯಾಲಯ ಶುಲ್ಕವನ್ನು ಪಾವತಿಸ ತಕ್ಕದ್ದು.



ಸೆಕ್ಷನ್ 7 (2) (ಡಿ) ಪ್ರಕಾರ ದಾವಾ ಸ್ಥಿರಾಸ್ತಿಯು ತೀರ್ವೆ ಪಾವತಿಯಿಂದ ವಿರಹಿತ ಪಟ್ಟಲ್ಲಿ ಅಥವಾ ದಾವಾ ಸೊತ್ತು ಬಾಗಾಯಿತು, ಮನೆ ನಿವೇಶನವಾಗಿದ್ದಲ್ಲಿ ಹಾಗೂ ಮೇಲೆ ಹೇಳಿದ ತಪಶೀಲಿಗೆ ಸಂಬಂಧಪಟ್ಟ ಸ್ಥಿರಾಸ್ತಿ ಆಗಿಲ್ಲದಿದ್ದಲ್ಲಿ ಆಸ್ತಿಯ ಬಾಜಾರು ಧಾರಣೆಯ ಮೇಲೆ (market value) ನ್ಯಾಯಾಲಯ ಶುಲ್ಕ ಪಾವತಿಸತಕ್ಕದ್ದು.



ಒಟ್ಟಿನಲ್ಲಿ ನ್ಯಾಯಾಲಯದಲ್ಲಿ ದಾಖಲಿಸುವ ಎಲ್ಲಾ ವಿಧದ ದಾವೆಗಳ ವಾದಪತ್ರದ ಜೊತೆಗೆ ದಾವಾ ಮೌಲ್ಯಮಾಪನ ಪಟ್ಟಿಯನ್ನು ಸಲ್ಲಿಸುವುದು ಕಡ್ಡಾಯವಲ್ಲ.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Photo: Sri Prakash Nayak, Mangaluru

Ads on article

Advertise in articles 1

advertising articles 2

Advertise under the article