
ಕೋಮು ದ್ವೇಷ ಬೀರಿದ ಹಿಜಬ್ ಸಂವಾದ: ಪಕ್ಷಪಾತಿ ಆಂಕರ್‌ಗೆ 50 ಸಾವಿರ ದಂಡ
ಕೋಮು ದ್ವೇಷ ಬೀರಿದ ಹಿಜಬ್ ಸಂವಾದ: ಪಕ್ಷಪಾತಿ ಆಂಕರ್‌ಗೆ 50 ಸಾವಿರ ದಂಡ
ಹಿಜಾಬ್ ವಿವಾದ ಕುರಿತು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನ ಕುರಿತಂತೆ News-18 ಸುದ್ದಿವಾಹಿನಿ ನಡೆಸಿದ ಚರ್ಚೆ ಪಕ್ಷಪಾತದಿಂದ ಕೂಡಿದ್ದು, ಕೋಮು ದ್ವೇಷ ಬೀರಿದ ಆಂಕರ್‌ಗೆ 50 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.
ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಚರ್ಚೆ, ಸಂವಾದ ನಡೆಸಲು ವಾಹಿನಿಗೆ ಹಕ್ಕು, ಅರ್ಹತೆ ಇದೆ. ಆದರೆ, ನಿರೂಪಣೆ ಮತ್ತು ಚರ್ಚೆಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿಲ್ಲ ಎಂದು ದಂಡ ವಿಧಿಸಿದ ಭಾರತೀಯ ಸುದ್ದಿ ಪ್ರಸರಣ ಮತ್ತು ಡಿಜಿಟಲ್ ಮಾನದಂಡ ಪ್ರಾಧಿಕಾರ ತೀರ್ಪಿನಲ್ಲಿ ಹೇಳಿದೆ.
ಚರ್ಚೆ ನ್ಯಾಯಸಮ್ಮತವಾಗಿರಬೇಕು, ನಿಷ್ಪಕ್ಷಪಾತದಿಂದ ಕೂಡಿರಬೇಕು. ಈ ತತ್ವಗಳನ್ನು News-18 ಸಂವಾದದ ಸಂದರ್ಭದಲ್ಲಿ ಪಾಲಿಸಿಲ್ಲ ಎಂದು ಪ್ರಾಧಿಕಾರ ವಿಷಾದ ವ್ಯಕ್ತಪಡಿಸಿದೆ.
ಅಷ್ಟೇ ಅಲ್ಲ, ಮಾಧ್ಯಮದ ಜವಾಬ್ದಾರಿಯಾದ ನಿಷ್ಪಕ್ಷಪಾತ, ತಟಸ್ಥ, ನ್ಯಾಯಸಮ್ಮತ ಮತ್ತು ಸದಭಿರುಚಿಯ ಚರ್ಚೆಯನ್ನು ಮಾಡಲು ಸುದ್ದಿವಾಹಿನಿ ಮರೆತಿದೆ ಎಂದು ಪ್ರಾಧಿಕಾರ ತೀರ್ಪಿನಲ್ಲಿ ಹೇಳಿದೆ.
ಸುದ್ದಿ ಮಾಧ್ಯಮಗಳು ಕಾರ್ಯಕ್ರಮಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ NBDSA ಸಾಕಷ್ಟು ಮಾರ್ಗಸೂಚಿಗಳನ್ನು ನೀಡಿದೆ. ಇದರ ಹೊರತಾಗಿಯೂ ಸುದ್ದಿ ವಾಹಿನಿ ತಮ್ಮಿಷ್ಟದಂತೆ ನಡೆದುಕೊಂಡರೆ, ಸಂಸ್ಥೆಯ ಮುಖ್ಯಸ್ಥರ ಹಾಜರಾತಿಗೆ ಪ್ರಾಧಿಕಾರ ಆದೇಶ ನೀಡಬೇಕಾದೀತು ಎಂಬ ಎಂಬ ಎಚ್ಚರಿಕೆ ನೀಡಿದ ಪ್ರಾಧಿಕಾರ, ವಿವಾದಿತ ಕಾರ್ಯಕ್ರಮದ ಎಲ್ಲ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಿಂದ ಅಳಿಸಿ ಹಾಕುವಂತೆ ನಿರ್ದೇಶನ ನೀಡಿದೆ.
ತೀರ್ಪಿನ ಸಾರಾಂಶ:
"ಚರ್ಚೆಯಲ್ಲಿ ಹಿಜಾಬ್ ಪರ ಸಮರ್ಥಿಸಿ ಚರ್ಚೆಯ ಪ್ಯಾನೆಲ್‌ನಲ್ಲಿ ಭಾಗವಹಿಸಿದ್ದ ಯುವತಿಯರನ್ನು 'ಜವಾಹಿರಿ ಗ್ಯಾಂಗ್ ಸದಸ್ಯ’', 'ಜವಾಹಿರಿಯ ರಾಯಭಾರಿ', 'ಜವಾಹಿರಿಯೇ ನಿಮ್ಮ ದೇವರಾಗಿದ್ದು, ನೀವು ಅವರ ಅಭಿಮಾನಿ' ಎಂದು ಜವಾಹಿರಿ ಜೊತೆ ಬಂಧ ಕಲ್ಪಿಸಿದ ನಿರೂಪಕನ ಉದ್ದೇಶಪೂರ್ವಕ ಅಭಿಪ್ರಾಯವನ್ನು NBDSA (ಪ್ರಾಧಿಕಾರ) ಬಲವಾಗಿ ಖಂಡಿಸುತ್ತದೆ.
"ನಿಲೇಶ್ ನವಲಖಾ VS ಭಾರತ ಸರ್ಕಾರ" ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನುಪಾಲಿಸಲು ಸುದ್ದಿವಾಹಿನಿ ವಿಫಲವಾಗಿದೆ. ದೃಶ್ಯ ಮಾಧ್ಯಮದ ಗೈಡ್‌ಲೈನ್ಸ್ ಮತ್ತು ಮತ್ತು ನೈತಿಕ ಮಾನದಂಡಗಳನ್ನು ಉಲ್ಲಂಘಿಸಿರುವ ಆಂಕರ್ ಚೋಪ್ರಾ ಹದ್ದುಮೀರಿ ಕಾರ್ಯಕ್ರಮ ಏರ್ಪಡಿಸುವುದನ್ನು ಒಪ್ಪಲಾಗದು.
ಚರ್ಚೆಯಲ್ಲಿ ಪಾಲ್ಗೊಂಡ ಪ್ಯಾನೆಲ್ ಅತಿಥಿಗಳನ್ನು ನಿಯಂತ್ರಿಸಲು ನಿರೂಪಕರು ವಿಫಲವಾಗಿದ್ದು, ಈ ಸಂವಾದ ಕಾರ್ಯಕ್ರಮ ದೇಶದಲ್ಲಿ ಕೋಮು ಸೌಹಾರ್ದವನ್ನು ಕದಡುವ ಪ್ರಯತ್ನಕ್ಕೆ ವೇದಿಕೆ ಒದಗಿಸಿದೆ.
ದೃಶ್ಯ ಮಾಧ್ಯಮದಲ್ಲಿ ಸಂವಾದ ಕಾರ್ಯಕ್ರಮಗಳನ್ನು ನಡೆಸುವ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ನೀಡಲಾಗಿದ್ದು, ಇದರ ಉಲ್ಲಂಘನೆಯಾದರೆ, ಪ್ರಾಧಿಕಾರದ ಮುಂದೆ ಖುದ್ದು ಆಂಕರ್ ಚೋಪ್ರಾ ಹಾಜರಿಗೆ ನಿರ್ದೇಶನ ನೀಡಬೇಕಾದೀತು....
ಸದ್ರಿ ವಿವಾದಾತ್ಮಕ ಕಾರ್ಯಕ್ರಮದ ವೀಡಿಯೊವನ್ನು ಏಳು ದಿನಗಳೊಳಗೆ ಅಳಿಸಿ ಹಾಕಬೇಕು.
ಪ್ರಕರಣದ ತೀರ್ಪಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಕರಣ: ಇಂದ್ರಜಿತ್ ಘೋರ್ಪಡೆ Vs ನ್ಯೂಸ್ 18 ಇಂಡಿಯಾ
ಭಾರತೀಯ ಸುದ್ದಿ ಪ್ರಸರಣ ಮತ್ತು ಡಿಜಿಟಲ್ ಮಾನದಂಡ ಪ್ರಾಧಿಕಾರ (NDBSA )
Dated 21-10-2022