KSBC guideline to Uniform for Advocates- ವಕೀಲರ ಸಮವಸ್ತ್ರ ಮತ್ತಷ್ಟು ಕಟ್ಟುನಿಟ್ಟು!- ವಕೀಲರ ಪರಿಷತ್ತು ಅಧಿಸೂಚನೆ
ವಕೀಲರ ಸಮವಸ್ತ್ರ ಮತ್ತಷ್ಟು ಕಟ್ಟುನಿಟ್ಟು!- ವಕೀಲರ ಪರಿಷತ್ತು ಅಧಿಸೂಚನೆ
ನ್ಯಾಯದೇವತೆ ಮುಂದೆ ಹಾಜರಾಗುವ ವಕೀಲರು ಸಮವಸ್ತ್ರವನ್ನು ಕಡ್ಡಾಯವಾಗಿ ಪಾಲಿಸಬೇಕು. ಇನ್ನು ಮುಂದೆ, ವಕೀಲರು ಬೇಕಾಬಿಟ್ಟಿ ಉಡುಪು ಧರಿಸಿಕೊಂಡು ನ್ಯಾಯಪೀಠದ ಮುಂದೆ ವಾದ ಮಂಡಿಸುವಂತಿಲ್ಲ.
ನ್ಯಾಯಾಲಯಕ್ಕೆ ಹಾಜರಾಗುವ ವಕೀಲರು ಜೀನ್ಸ್, ಕಾರ್ಡುರಾಯ್ ಪ್ಯಾಂಟ್ ಮತ್ತು ಸ್ಪೋರ್ಟ್ ಶೂಗಳನ್ನು ಧರಿಸುವುದನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ.
13-10-2022ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಕೆಎಸ್‌ಬಿಸಿ, ಅಖಿಲ ಭಾರತ ವಕೀಲರ ಪರಿಷತ್ತು- ಐಬಿಸಿ ಯಿಂದ ಅನುಮತಿಸಲಾದ ಉಡುಗೆ ತೊಡುಗೆಯನ್ನು ಮಾತ್ರ ಹಾಕುವಂತೆ ಸೂಚಿಸಿದೆ.
ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದ್ದು, ಈ ಬಗ್ಗೆ ಈಗಾಗಲೇ ವಕೀಲರ ಸಮುದಾಯಕ್ಕೆ ಮಾಹಿತಿ ಮತ್ತು ವಿವರಣೆ ನೀಡಲಾಗಿದೆ ಎಂಬುದನ್ನು ಕೆಎಸ್‌ಬಿಸಿ ಸ್ಪಷ್ಟಪಡಿಸಿದೆ.
ಸಮಾಜದಲ್ಲಿ ಅತ್ಯಂತ ಗೌರವಯುತ ವೃತ್ತಿಯಲ್ಲಿ ತೊಡಗಿರುವ ವಕೀಲರು ತಮ್ಮ ವೃತ್ತಿ ಘನತೆಯನ್ನು ಮತ್ತು ಬದ್ಧತೆಯನ್ನು ಪಾಲಿಸಿ ವೃತ್ತಿ ಶ್ರೇಷ್ಟತೆಯನ್ನು ಎತ್ತಿ ಹಿಡಿಯಬೇಕು ಎಂದು ಕೆಎಸ್‌ಬಿಸಿ ಅಧ್ಯಕ್ಷರಾದ ಮೋಟಕಪಲ್ಲಿ ಕಾಶೀನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.