
ಅನುಕಂಪದ ನೌಕರಿ: ಹುದ್ದೆ ಪಡೆಯುವುದು ಬಾಧಿತರ ಹಕ್ಕಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಅನುಕಂಪದ ನೌಕರಿ: ಹುದ್ದೆ ಪಡೆಯುವುದು ಬಾಧಿತರ ಹಕ್ಕಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಅನುಕಂಪ ಆಧಾರಿತ ಸರ್ಕಾರಿ ಹುದ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. 'ಅನುಕಂಪ ಆಧಾರ'ದಲ್ಲಿ ನೀಡುವ ಸರ್ಕಾರಿ ಉದ್ಯೋಗವು ಹಕ್ಕಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.
ಅನುಕಂಪ ಆಧಾರದ ನೌಕರಿ ಸರ್ಕಾರ ಬಾಧಿತ ವ್ಯಕ್ತಿಗೆ ನೀಡುವ ಒಂದು ರೀತಿಯ ವಿನಾಯ್ತಿಯೇ ಹೊರತು ಅದು ಹಕ್ಕು ಎಂದು ಪರಿಗಣಿಸಲಾಗದು. ಕುಟುಂಬದ ಆಧಾರ ಸ್ತಂಬವಾದ ವ್ಯಕ್ತಿ ಮೃತಪಟ್ಟಾಗ ಆಗುವ ಆಘಾತದಿಂದ ಚೇತರಿಸಿಕೊಳ್ಳಲು ಸಂತ್ರಸ್ತ ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅನುಕಂಪದ ಉದ್ಯೋಗ ನೀಡಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಬಾಧಿತ ಮಹಿಳೆಯೊಬ್ಬರು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ ರಂಗದ 'ರಸಗೊಬ್ಬರ ಹಾಗೂ ರಾಸಾಯನಿಕ ಕಂಪನಿ ಟ್ರಾವಂಕೋರ್ ಲಿ.;(FACT)ಗೆ ಕೇರಳ ಹೈಕೋರ್ಟ್ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ದಾಖಲಾಗಿತ್ತು.
ಈ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎ.ಆರ್. ಶಾ ಹಾಗೂ ನ್ಯಾ. ಕೃಷ್ಣ ಮುರಾರಿ ಅವರಿದ್ದ ನ್ಯಾಯಪೀಠ, FACT ಉದ್ಯೋಗಿಯಾಗಿದ್ದ ಮಹಿಳೆಯ ತಂದೆ ತೀರಿಕೊಂಡು 24 ವರ್ಷಗೇ ಕಳೆದಿವೆ. ಆ ಕಾರಣದಿಂದ ಅರ್ಜಿದಾರ ಮಹಿಳೆ ಅನುಕಂಪದ ನೌಕರಿ ಪಡೆಯಲು ಅರ್ಹಳಲ್ಲ ಎಂದು ತೀರ್ಪು ನೀಡಿದೆ.
ಘಟನೆಯ ವಿವರ: ಅರ್ಜಿದಾರ ಮಹಿಳೆಯ ತಂದೆಯು 1995ರಲ್ಲಿ ಉದ್ಯೋಗದಲ್ಲಿ ಇದ್ದಾಗ ಮೃತಪಟ್ಟಿದ್ದರು. ಆದರೆ, ಮೃತರ ಪತ್ನಿ ಅಂದರೆ ಅರ್ಜಿದಾರ ಮಹಿಳೆಯ ತಾಯಿ ಆ ಸಂದರ್ಭದಲ್ಲಿ ಉದ್ಯೋಗದಲ್ಲಿ ಇದ್ದರು. ಅರ್ಜಿದಾರರ ಅರ್ಜಿಯನ್ನು ತಿರಸ್ಕರಿಸಲು ಇದೂ ಒಂದು ಕಾರಣವಾಗಿದೆ ಎಂಬುದನ್ನು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.