ಮೃತ ವ್ಯಕ್ತಿ ಹೆಸರಲ್ಲಿ ಶೂರಿಟಿ: ನಕಲಿ ದಾಖಲೆ ಸೃಷ್ಟಿ ಬಗ್ಗೆ ಹೈಕೋರ್ಟ್ ಕೆಂಡಾಮಂಡಲ- ಕ್ರಿಮಿನಲ್ ಕೇಸ್‌ಗಳ ಶೂರಿಟಿಗೆ ಮಾರ್ಗಸೂಚಿ ಪ್ರಕಟ
ಮೃತ ವ್ಯಕ್ತಿ ಹೆಸರಲ್ಲಿ ಶೂರಿಟಿ: ನಕಲಿ ದಾಖಲೆ ಸೃಷ್ಟಿ ಬಗ್ಗೆ ಹೈಕೋರ್ಟ್ ಕೆಂಡಾಮಂಡಲ- ಕ್ರಿಮಿನಲ್ ಕೇಸ್‌ಗಳ ಶೂರಿಟಿಗೆ ಮಾರ್ಗಸೂಚಿ ಪ್ರಕಟ
ಕ್ರಿಮಿನಲ್ ಕೇಸುಗಳಲ್ಲಿ ಆರೋಪಿಗೆ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಶೂರಿಟಿ ನಿಲ್ಲುವವರು ನಕಲಿ ದಾಖಲೆ ಸಲ್ಲಿಸುತ್ತಿರುವ ಬಗ್ಗೆ ಕರ್ನಾಟಕ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಜಾಮೀನಿಗಾಗಿ ಶೂರಿಟಿ ನೀಡುವ ದಾಖಲೆಗಳ ಪರಿಶೀಲನೆ ನಡೆಸಿ ಸಂಪೂರ್ಣ ವಿವರವನ್ನು ಪರಿಶೀಲಿಸಿ ಅದನ್ನು ಖಾತ್ರಿಪಡಿಸಲು ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಾರ್ಗಸೂಚಿ ಹೊರಡಿಸಿದೆ.
ಇದಕ್ಕೆ ಅಗತ್ಯವಿರುವ ತಾಂತ್ರಿಕ ನೆರವನ್ನು ಕಂದಾಯ ಇಲಾಖೆ ಹಾಗೂ ಆಧಾರ ಕಾರ್ಡ್ ನೀಡುವ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI)ಕ್ಕೆ ನಿರ್ದೇಶನ ನೀಡಿದೆ.
ಸಾವನ್ನಪ್ಪಿದವರ ಹೆಸರಿನಲ್ಲಿ ನಕಲಿ ಆಧಾರ ಕಾರ್ಡ್ ಮಾಡಿ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಜಾಮೀನು ಪಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್ ಈ ಮಾರ್ಗಸೂಚಿ ಹೊರಡಿಸಿದೆ.
ಸದ್ರಿ ಪ್ರಕರಣದ ರದ್ದು ಕೋರಿ ಸಂಬಂಧಿಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರ ನ್ಯಾಯಪೀಠ, ಈ ಮಹತ್ವದ ನಿರ್ದೇಶನಗಳನ್ನು ಹೊರಡಿಸಿದ್ದು, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ಅನುಮತಿ ಪಡೆದು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳಿಗೆ ಸುತ್ತೋಲೆಗಳನ್ನು ಹೊರಡಿಸಬೇಕು ಎಂದು ಸೂಚಿಸಿದೆ.
ಜಾಮೀನು ಉಲ್ಲಂಘಿಸಿದ ಪಕ್ಷದಲ್ಲಿ ಬಾಂಡ್ ಹಣವನ್ನು ತೀರಿಸುವ ಸಾಮರ್ಥ್ಯ (Solvency), ಅದಕ್ಕೆ ಸಲ್ಲಿಸುವ ಸರ್ಟಿಫಿಕೇಟ್‌ನಲ್ಲಿ ಸಂಬಂಧಿತ ಇಲಾಖಾ ಪ್ರಮುಖರ ಸಹಿ, ಹೆಸರು, ಸೀಲ್, ಸರ್ಟಿಫಿಕೇಟ್ ನೀಡಿದ ದಿನಾಂಕ ಇರಬೇಕು. ಮೂಲ ದಾಖಲೆ(ಒರಿಜಿನಲ್) Solvency Certificateನ್ನು ಮಾತ್ರ ಪರಿಗಣಿಸುವುದು.
ಹೀಗೆ ನೀಡಲಾದ Solvency Certificateನಲ್ಲಿ ಭದ್ರತೆ ನೀಡುವವರ ಫೋಟೊ, ಸಹಿ ಅಥವಾ ಸ್ಪಷ್ಟವಾದ ಬೆರಳಿನ ಗುರುತನ್ನು ಸಂಬಂಧ ಪಟ್ಟ ಇಲಾಖೆ ಪಡೆಯಬೇಕು ಹಾಗೂ ಅದನ್ನು ದೃಢೀಕರಿಸಬೇಕು.
ಈ ಸರ್ಟಿಫಿಕೇಟ್‌ನ ಜೊತೆಗೆ ಸ್ವ ದೃಢೀಕರಣ (Self attested) ಮಾಡಿದ ಆಧಾರ್ ಕಾರ್ಡ್ ಪ್ರತಿಯನ್ನೂ ಸಲ್ಲಿಸಬೇಕು.
ಉದ್ಯೋಗಿಯು ಭದ್ರತೆ ನೀಡುವುದಿದ್ದರೆ, ಅವರು ತಮ್ಮ ಉದ್ಯೋಗದಾತರಿಂದ ಗುರುತು ಮತ್ತು ವೇತನ ಪ್ರಮಾಣಪತ್ರ ಪಡೆದು ಸಲ್ಲಿಸಬೇಕು ಮತ್ತು ಆ ಸರ್ಟಿಫಿಕೇಟಿನಲ್ಲಿ ಉದ್ಯೋಗಿ ಸಹಿ ಮಾಡಿರಬೇಕು ಅದನ್ನು ಉದ್ಯೋಗದಾತರು ದೃಢೀಕರಿಸಬೇಕು.
Solvency Certificate ಅಥವಾ ವೇತನ ಪ್ರಮಾಣಪತ್ರದಲ್ಲಿನ ಭದ್ರತೆಯ ಸಹಿ, ಜೊತೆಗೆ ಬೆರಳಿನ ಗುರುತು ಹಾಗೂ ನ್ಯಾಯಾಲಯದಲ್ಲಿ ಶೂರಿಟಿಯಾಗಿ ಹಾಜರಾಗುವ ವ್ಯಕ್ತಿಯ ಸಹಿ, ಬೆರಳಿನ ಗುರುತು, ಫೋಟೊ ತಾಳೆಯಾಗಬೇಕು.
ಶೂರಿಟಿ ನೀಡುವ ನೀಡುವ ವ್ಯಕ್ತಿ ತಮ್ಮ ಪೂರ್ಣ ಹೆಸರು, ತಂದೆ ಹೆಸರು, ವಯಸ್ಸು, ಉದ್ಯೋಗ, ಸಂಪೂರ್ಣವಾದ ಅಂಚೆ ವಿಳಾಸವನ್ನು ನಿಖರವಾಗಿ ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯಕ್ಕೆ ನೀಡಬೇಕು.
ಆರೋಪಿಗೆ ಯಾ ಮುದ್ದೇಮಾಲು ಬಿಡುಗಡೆ ಸಂಬಂಧ ಶೂರಿಟಿ ನೀಡುವವರು ತಮ್ಮ ಬ್ಯಾಂಕ್ ಪಾಸ್ ಪುಸ್ತಕ ಯಾ ರೇಶನ್ ಕಾರ್ಡ್ ಹಾಜರುಪಡಿಸಬೇಕು. ನ್ಯಾಯಾಲಯಕ್ಕೆ ನೀಡುವ ಸಾಲ್ವೆನ್ಸಿ ಸರ್ಟಿಫಿಕೇಟ್‌ನ ಮಾಹಿತಿಗೆ ಪೂರಕವಾಗುವ ಆಧಾರ್ ಕಾರ್ಡ್ ಯಾ ಇತರೆ ಗುರುತಿನ ದಾಖಲೆಗಳನ್ನು ಹಾಜರುಪಡಿಸಬೇಕು.
ತಮ್ಮ ಆಸ್ತಿಯ ಆಧಾರದಲ್ಲಿ ಭದ್ರತೆ ನೀಡಿದರೆ, ನ್ಯಾಯಾಲಯದ ವಿವೇಚನೆಗೆ ಒಳಪಟ್ಟು ಅಗತ್ಯ ಕಂಡುಬಂದರೆ ಕಂದಾಯ ಇಲಾಖೆಯ ವೆಬ್‌ಸೈಟ್, ಭೂಮಿ ಅಥವಾ ಕಾವೇರಿ ಸಾಫ್ಟವೇರ್‌ಗಳನ್ನು ಬಳಸಿ ಆಸ್ತಿಯ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳು ಪುನರ್ ಪರಿಶೀಲಿಸಿಕೊಳ್ಳಬಹುದು.
ಇಂತಹ ಪರಿಶೀಲನೆಗೆ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಕ್ತ ವ್ಯವಸ್ಥೆ ಮಾಡಬೇಕು. ಅದಕ್ಕಾಗಿ, ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರ ಜೊತೆಗೆ ಸಮನ್ವಯ ಸಾಧಿಸಲು ನಿರ್ದೇಶಿಸಲಾಗಿದೆ.
ಅದೇ ರೀತಿ, ಶೂರಿಟಿ ನೀಡುವವರನ್ನು ತಾವು ಸಲ್ಲಿಸಿದ ಆಧಾರ್ ಕಾರ್ಡ್ ಬಳಸಿ ಪತ್ತೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಸಾಧನ ಮತ್ತು ಸಾಫ್ಟ್‌ವೇರ್‌ಗಳನ್ನು UIDAI ಎಲ್ಲಾ ನ್ಯಾಯಾಲಯಗಳಿಗೂ ಪೂರೈಸಬೇಕು.
ಒಂದು ವೇಳೆ, ನಗದು ಭದ್ರತೆ ನೀಡಿದರೆ ಆರೋಪಿಯ ಮಾಹಿತಿ ನೀಡುವ ಖಾಯಂ ವಿಳಾಸದ ಬಗ್ಗೆ ನ್ಯಾಯಾಲಯಕ್ಕೆ ವಿಶ್ವಾಸ ಮೂಡಬೇಕು. ಏಕೆಂದರೆ, ಪ್ರಕರಣದ ವಿಚಾರಣೆಯಲ್ಲಿ ಆರೋಪಿಯ ಹಾಜರಿ ಸುಲಭವಾಗಿರಬೇಕು. ಆರೋಪಿಯ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರರ ಚೀಟಿ ಇತ್ಯಾದಿಗಳನ್ನು ಪಡೆಯಬೇಕು.
ವಿಚಾರಣಾ ನ್ಯಾಯಾಲಯಗಳು ಬಳಸುವ ಪ್ರಕರಣದ ಮಾಹಿತಿ ಸಾಫ್ಟ್‌ವೇರ್‌ನಲ್ಲಿ ಶೂರಿಟಿದಾರರ ಹೆಸರು, ಅಪರಾಧ ಸಂಖ್ಯೆ, ಪೊಲೀಸ್ ಠಾಣೆ, ಆರೋಪಿ ಹೆಸರುಗಳ ಮಾಹಿತಿ ಸಿಗುವಂತಿರಬೇಕು. ಇದಕ್ಕೆ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು ಮತ್ತು ಸೆಂಟ್ರಲ್ ಪ್ರಾಜೆಕ್ಟ್ ಸಮನ್ವಯಕಾರರು ವಿಚಾರಣಾ ನ್ಯಾಯಾಲಯಗಳಿಗೆ ಶೂರಿಟಿಗಳ ನೋಂದಣಿಯ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ಇದು ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಏಕಪ್ರಕಾರವಾಗಿ ಇರುವಂತಿರಬೇಕು.
ಈ ಹಿಂದೆ ಯಾವುದೇ ಆರೋಪಿಗೆ ಒಬ್ಬ ವ್ಯಕ್ತಿ ಶೂರಿಟಯಾಗಿ ನಿಂತಿದ್ದರೆ, ಅದನ್ನು ಪುನರ್ ಪರಿಶೀಲಿಸಬೇಕು. ಶೂರಿಟಿ ನೀಡುವುದನ್ನೇ ರೂಢಿ ಮಾಡಿಕೊಂಡ ವ್ಯಕ್ತಿಗಳ ಬಗ್ಗೆ ನ್ಯಾಯಾಲಯ ಅತ್ಯಂತ ಎಚ್ಚರಿಕೆ ವಹಿಸಬೇಕು.
ಸಂಬಂಧಿತ ನ್ಯಾಯಾಲಯಗಳ ಮೇಲುಸ್ತುವಾರಿ ಅಧಿಕಾರಿಗಳು ಶೂರಿಟಿ ನೀಡುವವರ ರಿಜಿಸ್ಟರ್ ಅನ್ನು ಸರಿಯಾಗಿ ನಿರ್ವಹಿಸಲಾಗುತ್ತಿದೆಯೇ ಎಂಬುದನ್ನು ಪ್ರತಿ ತಿಂಗಳು ಪರಿಶೀಲನೆ ನಡೆಸಬೇಕು.
ಇನ್ನು, ವಾರ್ಷಿಕವಾಗಿ ಈ ರಿಜಿಸ್ಟರ್ ಪರಿಶೀಲನೆ ವೇಳೆ, ಪ್ರಧಾನ ಜಿಲ್ಲಾ ನ್ಯಾಯಾಧೀಶರು (Principal District Judge) ಮತ್ತು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ (CJM) ಗಳು ಭದ್ರತೆ ನೀಡಿರುವವರ ರಿಜಿಸ್ಟರ್‌ಗಳನ್ನು ಪರಿಶೀಲಿಸಬೇಕು. ಈ ಮಾರ್ಗಸೂಚಿಯ ಬಗ್ಗೆ ಸೂಕ್ತ ಎಂದು ಕಂಡು ಬಂದಿರೆ ಸೂಕ್ತ ಸಲಹೆಗಳನ್ನು ನೀಡಬಹುದು.