ಲಾಯರ್ ಫೀಸಿಗೂ ಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ; ಕೇಸು ಗುಣವಾಗದಿದ್ದರೆ ಅದು ವಕೀಲರ ನಂಬಿಕೆ ದ್ರೋಹವಲ್ಲ
ಲಾಯರ್ ಫೀಸಿಗೂ ಕೋರ್ಟ್ ಆದೇಶಕ್ಕೂ ಸಂಬಂಧವಿಲ್ಲ; ಕೇಸು ಗುಣವಾಗದಿದ್ದರೆ ಅದು ವಕೀಲರ ನಂಬಿಕೆ ದ್ರೋಹವಲ್ಲ
- ಕೇಸು ಗೆಲ್ಲಿಸಿಕೊಡುತ್ತೇನೆ ಎಂದು ನಂಬಿಸಿ ವಂಚನೆ ಆರೋಪ
- ನ್ಯಾಯವಾದಿ ವಿರುದ್ಧವೇ ಕೇಸ್ ಹಾಕಿದ ಕಕ್ಷಿದಾರ
- ಮಂಗಳೂರಿನ ನ್ಯಾಯಾಲಯದಲ್ಲಿ ಹಾಕಿದ್ದ ಪ್ರಕರಣ
- ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಸುಪ್ರೀಂ ಕೋರ್ಟಿನಲ್ಲಿ ತಮಗೆ ಪೂರಕವಾದ ಆದೇಶ ಮಾಡಿಸಿ ಕೊಡಿಸುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಕಕ್ಷಿದಾರರೊಬ್ಬರು ಬೆಂಗಳೂರಿನ ಒಬ್ಬ ವಕೀಲರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
2ನೇ ಜೆಎಂಎಫ್‌ಸಿ, ಮಂಗಳೂರು ಇವರ ಘನ ನ್ಯಾಯಾಲಯದಲ್ಲಿ ದಾಖಲಿಸಿರುವ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ವಕೀಲ ಕೆ.ಎಸ್ ಮಹಾದೇವನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪ್ರಕರಣ: ಕೆ.ಎಸ್. ಮಹಾದೇವನ್ Vs ಸಿಪ್ರಿಯಾನ್ ಮೆನೆಜಸ್ ಮತ್ತೊಬ್ಬರು
ಕರ್ನಾಟಕ ಹೈಕೋರ್ಟ್; WP No 54069/2017 dated 09-09-2022
ಪ್ರಕರಣದ ವಿವರ
ಮಂಗಳೂರಿನ ನಿವಾಸಿ ಸುಮಾರು 75 ವರ್ಷದ ಸಿಪ್ರಿಯನ್ ಮೆನೆಜಸ್ ಅವರು ಬೆಂಗಳೂರಿನ ವಕೀಲ ಕೆ.ಎಸ್ ಮಹದೇವನ್ ವಿರುದ್ಧ ಮಂಗಳೂರಿನ ನ್ಯಾಯಾಲಯದಲ್ಲಿ ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪದಡಿ ಖಾಸಗಿ ದೂರು ದಾಖಲಿಸಿದ್ದರು.
ತಮಗೆ ದೊಡ್ಡ ಜನರ ಸಂಪರ್ಕ ಇದೆ, ಸುಪ್ರೀಂ ಕೋರ್ಟಿನ ಹಿರಿಯ ವಕೀಲರ ಪರಿಚಯವಿದೆ. ಅವರ ಮೂಲಕ ಪ್ರಕರಣದಲ್ಲಿ ತಮಗೆ ಬೇಕಾದ ರೀತಿಯ ಆದೇಶ ಮಾಡಿಸಿಕೊಡುತ್ತೇನೆ ಎಂದು ಹೇಳಿ ಸುಮಾರು 15 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ಅವರ ಮಾತಿಗೆ ಮರುಳಾಗಿ ತಾನು ಅಷ್ಟೊಂದು ಹಣ ನೀಡಿದ್ದೆ. ಆದರೆ, ಪ್ರಕರಣದ ವಿಚಾರಣೆಯ ದಿನ ಕೇಸಿನ ವಾಯಿದೆ ಮಾಡಲಾಗಿದ್ದು, ಯಾವುದೇ ಪೂರಕ ಆದೇಶ ಆಗಲಿಲ್ಲ ಎಂಬುದು ದೂರುದಾರರ ಆರೋಪ.
ಈ ಬಗ್ಗೆ ವಿಚಾರಿಸಲಾಗಿ ವಕೀಲರು ಮಾಹಿತಿ ಕೊಡದೆ, ಯಾವುದೇ ರೀತಿಯಲ್ಲೂ ಸ್ಪಂದಿಸದೆ ಉಡಾಫೆಯ ವರ್ತನೆ ತೋರಿದರು. ಈ ಮೂಲಕ ತಮಗೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ದೂರುದಾರರು ವಕೀಲರ ವಿರುದ್ಧ ಆರೋಪ ಮಾಡಿ ಕೇಸು ಹಾಕಿದ್ದರು. ಈ ಕೇಸ್‌ನ್ನು ರದ್ದು ಮಾಡುವಂತೆ ವಕೀಲ ಮಹದೇವನ್ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ತೀರ್ಪು
ಯಾವುದೇ ಪ್ರಕರಣದಲ್ಲಿ ವಕೀಲರು ನಿಶ್ಚಿತವಾಗಿ ಪಕ್ಷಕಾರರ ಪರವಾಗಿ ನ್ಯಾಯಪೀಠದಿಂದ ಪೂರಕವಾದ ಆದೇಶವನ್ನೇ ಪಡೆಯುತ್ತಾರೆ ಎಂಬುದು ನಂಬಲಾಗದ ವಿಚಾರ. ಪ್ರಕರಣದ ವಾಸ್ತವಾಂಶ ಹಾಗೂ ಕಾನೂನು ಇಲ್ಲಿ ಪ್ರಮುಖ ಅಂಶಗಳಾಗಿರುತ್ತವೆ. ಕಕ್ಷಿದಾರರು ವಕೀಲರಿಗೆ ಪಾವತಿಸುವ ಶುಲ್ಕಕ್ಕೂ ನ್ಯಾಯಾಲಯದ ಆದೇಶಕ್ಕೂ ಯಾವುದೇ ಸಂಬಂಧ ಇಲ್ಲ. ವಕೀಲರ ಶುಲ್ಕ ಎಂಬುದು ಸಂಬಂಧಿತ ವಕೀಲರು ಮತ್ತು ಆಯಾ ಕಕ್ಷಿದಾರರ ಖಾಸಗಿ ವಿಚಾರ.
ನ್ಯಾಯಾಲಯದಲ್ಲಿ ವಕೀಲರು ಕಕ್ಷಿದಾರರಿಗೆ ಪೂರಕವಾದ ತೀರ್ಪು ಅಥವಾ ಆದೇಶ ಪಡೆಯಲಾಗಲಿಲ್ಲ ಎಂದಾಕ್ಷಣ ಅದು ನಂಬಿಕೆ ದ್ರೋಹ ಎಂದರ್ಥವಲ್ಲ. ವಕೀಲರು ತಾವು ವಾದಿಸುವ ಪ್ರಕರಣದಲ್ಲಿ ಯಶಸ್ಸು ಸಾಧಿಸುವ ತಮ್ಮಿಂದಾದ ಎಲ್ಲ ಪ್ರಯತ್ನವನ್ನು ಮಾಡಬಹುದು. ಕೊನೆಯಲ್ಲಿ ಪ್ರಕರಣದ ಅರ್ಹತೆ ಮತ್ತು ಕಾನೂನು ಪ್ರಕಾರ ಪ್ರಕರಣ ಇತ್ಯರ್ಥವಾಗುತ್ತದೆ.
ಸದ್ರಿ ಆರೋಪದ ವಸ್ತುವಾಗಿರುವ ಪ್ರಕರಣದಲ್ಲಿ ವಕೀಲರು ತಮ್ಮ ಕಡೆಯಿಂದ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಅನುಕೂಲಕರ ಆದೇಶ ಪಡೆಯುತ್ತೇವೆ ಎಂದು ತಿಳಿಸಿ ನಂಬಿಕೆ ದ್ರೋಹ ಮಾಡಿದ್ದಾರೆ ಹಾಗೂ ವಂಚಿಸಿದ್ದಾರೆ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ವಕೀಲ ಮಹದೇವನ್ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ ಕಾನೂನು ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೈಕೋರ್ಟ್ ಹೇಳಿ, ವಕೀಲ ಮಹದೇವನ್ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ತೀರ್ಪಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೆ.ಎಸ್. ಮಹಾದೇವನ್ Vs ಸಿಪ್ರಿಯಾನ್ ಮೆನೆಜಸ್ ಮತ್ತೊಬ್ಬರು
ಇದನ್ನೂ ಓದಿ:
ನ್ಯಾಯವಾದಿ ಕಕ್ಷಿದಾರರ ಏಜೆಂಟ್ ಅಲ್ಲ; ಫೀಸ್ ಪಡೆಯುವುದು ವಕೀಲರ ಹಕ್ಕು- ಹೈಕೋರ್ಟ್
ನ್ಯಾಯಾಧೀಶರಿಗೆ 'ಟಾರ್ಗೆಟ್' ಆದ ವಕೀಲ: ಜಡ್ಜ್ ವಿರುದ್ಧ ನ್ಯಾಯವಾದಿ ಮಾಡಿದ ಕೆಲಸವೇನು ಗೊತ್ತೇ..?