RTI ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣ: ಸಹೋದರಿ ಮನವಿಗೆ ಒಪ್ಪಿ ವಿಶೇಷ ಅಭಿಯೋಜಕರನ್ನು ನೇಮಿಸಿದ ರಾಜ್ಯ ಸರ್ಕಾರ
RTI ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣ: ಸಹೋದರಿ ಮನವಿಗೆ ಒಪ್ಪಿ ವಿಶೇಷ ಅಭಿಯೋಜಕರನ್ನು ನೇಮಿಸಿದ ರಾಜ್ಯ ಸರ್ಕಾರ
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರಿನ RTI ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ಹತ್ಯೆಗೀಡಾದ ವಿನಾಯಕ ಬಾಳಿಗ ಅವರ ಸಹೋದರಿ, ವಕೀಲರಾದ ಅನುರಾಧಾ ಬಾಳಿಗ ಅವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ, ಪ್ರಕರಣದ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಲು ಖ್ಯಾತ ಕ್ರಿಮಿನಲ್ ವಕೀಲ ಎಸ್. ಬಾಲಕೃಷ್ಣನ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಿಸಲಾಗಿದೆ.
ಖ್ಯಾತ ಕ್ರಿಮಿನಲ್ ಲಾಯರ್ ಎಸ್ ಬಾಲಕೃಷ್ಣನ್ ಅವರನ್ನು SSPಯಾಗಿ ನೇಮಿಸುವಂತೆ ಹತ್ಯೆಗೀಡಾದ ಬಾಳಿಗಾ ಅವರ ಸಹೋದರಿ ಅನುರಾಧಾ ಬಾಳಿಗ ಸರ್ಕಾರಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಸರ್ಕಾರ, ಈ ಆದೇಶ ಹೊರಡಿಸಿದೆ.
2016ರ ಮಾರ್ಚ್ 21ರಂದು ಮಂಗಳೂರಿನ ಹೃದಯ ಭಾಗದಲ್ಲಿ RTI ಕಾರ್ಯಕರ್ತ ವಿನಾಯಕ ಬಾಳಿಗ ಅವರನ್ನು ಅವರ ಮನೆಯ ಹತ್ತಿರವೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಮುಂಜಾನೆ ವಿಳಾಸ ಕೇಳುವ ನೆಪದಲ್ಲಿ ತಡೆದು ನಿಲ್ಲಿಸಿ ವಿನಾಯಕ ಬಾಳಿಗ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಿಶಿತ್ ದೇವಾಡಿಗ, ವಿನೀತ್ ಪೂಜಾರಿ, ಶಿವ ಪ್ರಸಾದ್ ಸೇರಿದಂತೆ ಹಲವರನ್ನು ಬಂಧಿಸಿದ್ದರು. ವಿಶೇಷವೆಂದರೆ, ಬಿಜೆಪಿ ಕಾರ್ಯಕರ್ತನೂ ಆಗಿದ್ದ ವಿನಾಯಕ ಬಾಳಿಗ ಅವರ ಹತ್ಯೆಯಲ್ಲಿ ಆಗಿನ ಯುವ ಬ್ರಿಗೇಡ್ ಮುಖಂಡ ನರೇಶ್ ಶಣೈ ಪ್ರಮುಖ ಆರೋಪಿಯಾಗಿದ್ದರು.
ಸ್ವತಃ ನರೇಶ್ ಶೆಣೈ ಬಾಳಿಗ ಕೊಲೆಗೆ ಸುಪಾರಿ ನೀಡಿದ್ದರು ಎಂದು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದರು. ಈಗ ಈ ಪ್ರಕರಣ ಮಂಗಳೂರಿನ ಜಿಲ್ಲಾ 6ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲದಲ್ಲಿ ವಿಚಾರಣಾ ಹಂತದಲ್ಲಿದ್ದು, ಹಿರಿಯ ವಕೀಲ ಎಸ್. ಬಾಲಕೃಷ್ಣನ್ ಪ್ರಾಸಿಕ್ಯೂಷನ್ ಪರ ವಾದಿಸಲಿದ್ದಾರೆ.