ಅತ್ಯಂತ ಭ್ರಷ್ಟ ಎನಿಸಿದ್ದ ತಹಶೀಲ್ದಾರ್ ಜೈಲಿಗೆ: ಸ್ಟೇಟಸ್ ಹಾಕಿಕೊಂಡು ಸಂಭ್ರಮ ಪಟ್ಟ ಮಂಗಳೂರು ವಕೀಲರು
ಅತ್ಯಂತ ಭ್ರಷ್ಟ ಎನಿಸಿದ್ದ ತಹಶೀಲ್ದಾರ್ ಜೈಲಿಗೆ: ಸ್ಟೇಟಸ್ ಹಾಕಿಕೊಂಡು ಸಂಭ್ರಮ ಪಟ್ಟ ಮಂಗಳೂರು ವಕೀಲರು
ಮಂಗಳೂರಿನ ಸರ್ಕಾರಿ ಕಚೇರಿಗಳು ಎಷ್ಟು ಗಬ್ಬೆದ್ದು ಹೋಗಿದೆ... ಭ್ರಷ್ಟಾಚಾರದಿಂದ ಕೊಳೆತುಹೋಗಿದೆ ಎಂಬುದಕ್ಕೆ ಜೀವಂತ ಉದಾಹರಣೆ ಸ್ವತಃ ತಹಶೀಲ್ದಾರನೇ ಕಂಬಿ ಎಣಿಸುತ್ತಿರುವುದು.
ಹಣ ಪೀಕಿಸುವುದರಲ್ಲಿ ಎತ್ತಿದ ಕೈ ಎಣಿಸಿರುವ ತಹಶೀಲ್ದಾರ್ ತನ್ನ ಚೇಲಾನ ಜೊತೆ ಬಂಧನಕ್ಕೊಳಗಾಗಿರುವುದು ಸಾರ್ವಜನಿಕರಲ್ಲಿ ಭಾರೀ ಸಂತಸ ವ್ಯಕ್ತವಾಗಿದೆ.
ಒಂದು ಜಾತಿ ಸರ್ಟಿಫಿಕೇಟಿಗೆ ಹತ್ತಾರು ಬಾರಿ ನಲಿದಾಡಿಸುವ ಇಲ್ಲಿನ ಸಿಬ್ಬಂದಿ, ಪ್ರತಿ ಖುರ್ಚಿಗೆ ಇಂತಿಷ್ಟು ಅಂತ ಕೊಡಬೇಕು... ಇಲ್ಲದಿದ್ದರೆ ಫೈಲೇ ಮುಂದೆ ಹೋಗಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಾರೆ. ಇದರಿಂದ ರೋಸಿ ಹೋದ ಮಹಿಳೆಯೊಬ್ಬರು ಗದ್ದಲ ಎಬ್ಬಿಸಿ ಮಿನಿ ವಿಧಾನಸೌಧದಲ್ಲಿ ಸುದ್ದಿಯಾದ ಒಂದು ದಿನದಲ್ಲೇ ತಹಶೀಲ್ದಾರ್ ಕೈಗೆ ಕೋಳ ಬಿದ್ದಿದೆ.
ಈ ವಿಷಯ ರೋಸಿ ಹೋದ ಜನರಿಗೆ ಭಾರೀ ಖುಷಿ ತಂದಿದೆ. ವಕೀಲರ ಸಮುದಾಯವೂ ತಹಶೀಲ್ದಾರನ ಬಂಧನದಿಂದ ತುಂಬಾನೇ ಸಂತಸ ಪಟ್ಟಿದ್ದಾರೆ. ಕೆಲ ವಕೀಲರಂತೂ ಈತನ ಬಂಧನದ ಸುದ್ದಿಯನ್ನು ಸ್ಟೇಟಸ್ ಹಾಕಿಕೊಂಡು ಸಂಭ್ರಮಪಟ್ಟಿದ್ದಾರೆ.
ಇನ್ನೊಂದಷ್ಟು ಮಿಕಗಳೂ ಲೋಕಾಯುಕ್ತರ ಬೇಟೆಗೆ ಒಳಗಾಗಬೇಕು ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇಲ್ಲಿನ ಸಿಬ್ಬಂದಿ ಅಷ್ಟೊಂದು ಸತಾಯಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.
ಒಬ್ಬ ಸಿಬ್ಬಂದಿಯಂತೂ ಒಂದು ಮಾಮೂಲಿ ಜೆರಾಕ್ಸ್ ಪ್ರತಿಗಾಗಿ ಮಹಿಳಾ ವಕೀಲರನ್ನು ಮಹಡಿಯಿಂದ ಮಹಡಿಗೆ ಸುತ್ತಾಡಿಸಿ ಕಣ್ಣೀರು ಹಾಕಿಸಿದ್ದಾನೆ. ಇದರಿಂದ ರೋಸಿ ಹೋದ ಆ ಮಹಿಳಾ ವಕೀಲರು ಮಾನವ ಹಕ್ಕುಗಳ ಸಂಘಟನೆಗೆ ದೂರು ನೀಡಿದ್ದರು. ಆ ಬಳಿಕವಷ್ಟೇ ಬಾಲ ಮುದುರಿಕೊಂಡು ಸಿಬ್ಬಂದಿ ತನ್ನ ವಿರುದ್ಧ ಕ್ರಮ ಜರುಗಿಸದಂತೆ ಅಂಗಾಲಾಚಿದ್ದಾನೆ.
ಆದರೆ, ಇದು ಕೇವಲ ಮಿನಿ ವಿಧಾನಸೌಧದ ಕಥೆಯಲ್ಲ. ನಗರಾಭಿವೃದ್ಧಿ ಕಚೇರಿ ಇರಲಿ, ಸರ್ವೇ ಕಚೇರಿ ಇರಲಿ, ಮಂಗಳೂರು ಮಹಾನಗರ ಪಾಲಿಕೆಯ ಕಚೇರಿ ಇರಲಿ ಎಲ್ಲೆಡೆ ಲಂಚಾವತಾರ ತಾಂಡವವಾಡುತ್ತಿದೆ.
ಇದನ್ನೂ ಓದಿ
ಮಂಗಳೂರು: ಲಂಚ ಸ್ವೀಕಾರ ಪ್ರರಕಣ; ಮಂಗಳೂರು ತಹಶಿಲ್ದಾರ್ ಗೆ ಜಾಮೀನು ನಿರಾಕರಣೆ
ನಲ್ವತ್ತು ಪರ್ಸೆಂಟ್ ಸರ್ಕಾರ ಎಂಬ ಭಾರೀ ಗದ್ದಲ ರಾಜ್ಯಾದ್ಯಂತ ಸುದ್ದಿಯಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಅಧಿಕಾರಿ ವರ್ಗ ಲಂಚಕ್ಕಾಗಿ ಜನರ ಜೀವ ಹಿಂಡುತ್ತಿರುವುದು ಮಾತ್ರ ಇಲ್ಲಿನ ಮಹಾನ್ ಜನನಾಯಕರಿಗೆ ಕಣ್ಣಿಗೂ ಬಿದ್ದಿಲ್ಲ, ಕಿವಿಗೂ ಬಿದ್ದಿಲ್ಲ. ಜನರ ಪಾಡು ದೇವರೇ ಗತಿ...