ಅನುಕಂಪದ ಉದ್ಯೋಗ: ದತ್ತು ಮಕ್ಕಳಿಗೂ ಅರ್ಹತೆ ಇದೆ ಎಂದ ಕರ್ನಾಟಕ ಹೈಕೋರ್ಟ್
ಅನುಕಂಪದ ಉದ್ಯೋಗ: ದತ್ತು ಮಕ್ಕಳಿಗೂ ಅರ್ಹತೆ ಇದೆ ಎಂದ ಕರ್ನಾಟಕ ಹೈಕೋರ್ಟ್
ದತ್ತು ಮಕ್ಕಳಿಗೂ ಅನುಕಂಪದ ಆಧಾರದಲ್ಲಿ ಪೋಷಕರ ಉದ್ಯೋಗ ಪಡೆಯುವ ಹಕ್ಕು ಇದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ವಿಭಾಗೀಯ ಪೀಠ ಮಹತ್ವದ ತೀರ್ಪು ನೀಡಿದೆ.
ದತ್ತು ಮಕ್ಕಳು ಅನುಕಂಪದ ಆಧಾರದ ನೇಮಕಾತಿಗೆ ಅರ್ಹರಲ್ಲ. ಅವರಿಗೆ ಅನುಕಂಪದ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ನ್ಯಾ. ಸೂರಜ್ ಗೋವಿಂದರಾಜ್ ಮತ್ತು ಜಿ. ಬಸವರಾಜ್ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
ಮಕ್ಕಳು ಸ್ವಂತದ್ದೇ ಆಗಿರಲಿ, ದತ್ತು ತಗೊಂಡದ್ದೇ ಆಗಿರಲಿ.. ಮಕ್ಕಳು ಮಕ್ಕಳೇ.. ಇವರ ನಡುವೆ ತಾರತಮ್ಯ ಇದೆ ಎಂಬುದನ್ನು ನ್ಯಾಯಾಲವೇ ಒಪ್ಪಿಕೊಂಡರೆ ದತ್ತು ಸ್ವೀಕಾರದ ಉದ್ದೇಶವೇ ಈಡೇಡುವುದಿಲ್ಲ. ಈ ಹಿನ್ನೆಲೆಯಲ್ಲಿ ದತ್ತು ಮಕ್ಕಳೂ ಪೋಷಕರ ಅನುಕಂಪದ ಆಧಾರದ ಉದ್ಯೋಗಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
2021ರ ತಿದ್ದುಪಡಿಯಲ್ಲಿ ದತ್ತು ಮಕ್ಕಳಿಗೂ ಸರಿಸಮನಾದ ಹಕ್ಕನ್ನು ಅನುಕಂಪದ ನೇಮಕಾತಿ ವೇಳೆ ಸ್ಥಾಪಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸಿದ ನಂತರ ಈ ತಿದ್ದುಪಡಿ ಮಾಡಲಾಗಿದೆ ಎಂಬ ಕಾರಣಕ್ಕೆ ಆ ತಿದ್ದುಪಡಿಯ ಲಾಭವನ್ನು ಅರ್ಜಿದಾರರಿಗೆ ನಿರಾಕರಿಸುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಪ್ರಕರಣದ ವಿವರ
ಬನಹಟ್ಟಿ JMFC ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿಯಲ್ಲಿ
ವಿನಾಯಕ ಎಂ. ಮುತ್ತಟ್ಟಿ ಅವರು ದಲಾಯತ್ (ಗ್ರೂಪ್- ಡಿ ನೌಕರ) ಆಗಿ ಸೇವೆ ಸಲ್ಲಿಸುತ್ತಿದ್ದರು.
2010ರಲ್ಲಿ ವಿನಾಯಕ ಪುತ್ರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮರುವರ್ಷ ಅಂದರೆ 2011ರಲ್ಲಿ ವಿನಾಯಕರವರು 21 ವರ್ಷದ ಗಿರೀಶ್ ಎಂಬಾತನನ್ನು ದತ್ತು ಪುತ್ರನನ್ನಾಗಿ ಸ್ವೀಕರಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ Adoption Deed (ದತ್ತು ಸ್ವೀಕಾರ ಪತ್ರ) ಮಾಡಿಕೊಂಡಿದ್ದರು.
ವಿನಾಯಕ ಅವರು 2018ರ ಮಾರ್ಚ್ 27ರಂದು ಮೃತಪಟ್ಟ ಹಿನ್ನೆಲೆಯಲ್ಲಿ ಗಿರೀಶ್ ಅನುಕಂಪದ ಆಧಾರದಲ್ಲಿ ತಮ್ಮ ತಂದೆಯ ಉದ್ಯೋಗ ಕೋರಿ ಅರ್ಜಿ ಸಲ್ಲಿಸಿದ್ದರು. ಇದನ್ನು ಅಭಿಯೋಜನಾ ಇಲಾಖೆಯ ನಿರ್ದೇಶಕರು ತಿರಸ್ಕರಿಸಿದ್ದರು.
ಅರ್ಜಿದಾರರು(ಗಿರೀಶ್) ದತ್ತು ಪುತ್ರ. ಅವರಿಗೆ ಅನುಕಂಪದ ಉದ್ಯೋಗ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ. ಅನುಕಂಪದ ನೆಲೆಯ ನೇಮಕಾತಿಗೆ ಅರ್ಜಿದಾರರು ಅರ್ಜಿ ಸಲ್ಲಿಸಿದ ದಿನ 'ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳು-1996’ ಅನ್ವಯ ಆಗುತ್ತಿರಲಿಲ್ಲ ಎಂದು ನಿರ್ದೇಶಕರು ತಮ್ಮ ಆದೇಶದಲ್ಲಿ ತಿಳಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಗಿರೀಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಅರ್ಜಿಯನ್ನು ಏಕಸದಸ್ಯ ಪೀಠ ತಿರಸ್ಕರಿಸಿತ್ತು.
ಅದನ್ನು ಪ್ರಶ್ನಿಸಿ ಅರ್ಜಿದಾರರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, 1996ರ ನಿಯಮಗಳ ಪ್ರಕಾರ ದತ್ತು ಮಕ್ಕಳಿಗೆ ಅನುಕಂಪದ ನೇಮಕಾತಿಗೆ ಅವಕಾಶ ಇಲ್ಲ ಎಂಬ ಸರ್ಕಾರದ ವಾದವನ್ನು ತಿರಸ್ಕರಿಸಿದೆ.
ಅರ್ಜಿದಾರರು (ಗಿರೀಶ್) ಸಲ್ಲಿಸಿರುವ ಅರ್ಜಿಯನ್ನು 12 ವಾರಗಳಲ್ಲಿ ಪರಿಗಣಿಸಬೇಕು ಎಂದು ಅಭಿಯೋಜನಾ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಇದನ್ನೂ ಓದಿ
ಕಿರಿಯ ವಕೀಲರು ಜೀತದಾಳುಗಳಲ್ಲ ಅವರಿಗೂ ಉತ್ತಮ ವೇತನ ಕೊಡಿ: ಸಿಜೆಐ ಚಂದ್ರಚೂಡ್
ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೂ ಟಾರ್ಗೆಟ್: ಪ್ರತಿ ದಿನ 20 ಪ್ರಕರಣದ ತೀರ್ಮಾನ!
ಪ್ರತಿವಾದ ಸಲ್ಲಿಸಲು ಗ್ರಾಹಕರ ಆಯೋಗ ಕೇವಲ 15 ದಿನಗಳ ವಿಳಂಬ ಮನ್ನಿಸಬಹುದು: ಸುಪ್ರೀಂ ಕೋರ್ಟ್