ಹೆರಿಗೆಗೆ 6 ಸಾವಿರ ಲಂಚಕ್ಕೆ ಬೇಡಿಕೆ: ಇಬ್ಬರು ಮಹಿಳಾ ವೈದ್ಯರು ಸಸ್ಪೆಂಡ್
ಹೆರಿಗೆಗೆ 6 ಸಾವಿರ ಲಂಚಕ್ಕೆ ಬೇಡಿಕೆ: ಇಬ್ಬರು ಮಹಿಳಾ ವೈದ್ಯರು ಸಸ್ಪೆಂಡ್
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿಸಲು 6 ಸಾವಿರ ಲಂಚಕ್ಕೆ ಬೇಡಿಕೆ ಮಂಡಿಸಿದ ಇಬ್ಬರು ಮಹಿಳಾ ವೈದ್ಯರನ್ನು ಅಮಾನತು ಮಾಡಲಾಗಿದೆ. ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಮತ್ತು ಡಾ ಐಶ್ವರ್ಯಾ ಅವರು ಸಸ್ಪೆಂಡ್ ಆದ ಲಂಚಕೋರ ವೈದ್ಯರಾಗಿದ್ದಾರೆ.
ಇವರು ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸೂತಿ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರಿನ ರೂಪಾ ಎಂಬವರಿಗೆ ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಲಾಗಿತ್ತು. ಬಾಣಂತಿ ಬಿಡುಗಡೆ ಸಂದರ್ಭದಲ್ಲಿ ಈ ಇಬ್ಬರು ವೈದ್ಯರು ಲಂಚದ ಹಣಕ್ಕೆ ಬೇಡಿಕೆ ಮುಂದಿಟ್ಟಿದ್ದರು.
ನನ್ನ ಬಳಿ ಕೇವಲ 2000/- ಮಾತ್ರ ಇದೆ ಎಂದು ರೂಪಾ ಪತಿ ಮಂಜುನಾಥ್ ಹೇಳಿದ್ದರು. ಅದಕ್ಕೆ ವೈದ್ಯರು ಮೂರು ಜನರಿಗೂ ತಲಾ 2000/- ಕೊಡಬೇಕು. ನೀವು ಬರೀ 2000/- ಕೊಟ್ಟರೆ ನಾವು ಎಲ್ಲರಿಗೂ 500/- ಹಂಚಲು ಆಗುವುದಿಲ್ಲ. ನೀವೊಬ್ಬರು ಹೀಗೆ ಮಾಡಿದರೆ ವಾರ್ಡಿನಲ್ಲಿರುವ ಎಲ್ಲರೂ ಹಾಗೆಯೇ ಮಾಡುತ್ತಾರೆ. ನಾವು ಹಾಗೆಲ್ಲ ಭೇದ ಮಾಡಲು ಆಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ಸಂಭಾಷಣೆಯನ್ನು ಮಹಿಳೆಯ ಸಂಬಂಧಿಕರು ಸೆರೆ ಹಿಡಿದಿದ್ದರು.
ಅಧಿಕಾರಿಗಳಿಂದ ತನಿಖೆ
ವೈದ್ಯರು ಹಣಕ್ಕೆ ಬೇಡಿಕೆ ಇಟ್ಟಿರುವುದು ವೀಡಿಯೋ ಚಿತ್ರೀಕರಣದಲ್ಲಿ ಬಹಿರಂಗವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ವೈದ್ಯರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಉಳಿದಂತೆ, ಯಾರಿಗೆಲ್ಲ ಹಣ ಹಂಚಿಕೆಯಾಗುತ್ತಿತ್ತು ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ತನಿಖಾಧಿಕಾರಿ ಡಾ. ಮಂಜುನಾಥ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಾಂತರಾಜು ಹೇಳಿದ್ದಾರೆ.