ನಿವೃತ್ತಿಯ ಮರುದಿನವೇ ನೇಮಕ: ಮುಖ್ಯ ಚುನಾವಣಾ ಆಯುಕ್ತರ ನೇಮಕದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ
ನಿವೃತ್ತಿಯ ಮರುದಿನವೇ ನೇಮಕ: ಮುಖ್ಯ ಚುನಾವಣಾ ಆಯುಕ್ತರ ನೇಮಕದ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ
ಸ್ವಯಂ ನಿವೃತ್ತಿ ಪಡೆದ ಒಂದೇ ದಿನದಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕ ಮಾಡಲಾದ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆಯ್ಕೆಗೆ ಸಂಬಂಧಿಸಿದ ಕಡತಗಳನ್ನು ಸಲ್ಲಿಸುವಂತೆ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ.
ಇಂತಹ ಮಹತ್ವದ ಸ್ಥಾನಕ್ಕೆ ಜವಾಬ್ದಾರಿಯುತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಇದಕ್ಕೆ ಕೊಲೀಜಿಯಂನಂತಹ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ಜಾರಿ ಮಾಡಿದೆ.
ಪ್ರಧಾನಿ ವಿರುದ್ಧ ದೂರು ಬಂದರೂ ಕ್ರಮ ಕೈಗೊಳ್ಳುವ ಧೈರ್ಯ ಮನೋಸ್ಥಿತಿಯ ಅಧಿಕಾರಿ ಇಂತಹ ಉನ್ನತ ಸ್ಥಾನದಲ್ಲಿ ಇರಬೇಕು. ಹೌದಪ್ಪಾ ಹೌದು ಎಂದು ಹೇಳುವ ಅಧಿಕಾರಿಗಳಲ್ಲ ಎಂದು ನ್ಯಾಯಪೀಠ ಖಡಕ್ ಆಗಿ ತನ್ನ ಅಭಿಪ್ರಾಯವನ್ನು ಮೌಖಿಕವಾಗಿ ತಿಳಿಸಿತು.
ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ಪಡೆದ ಮರುದಿನವೇ ಅರುಣ್ ಗೋಯಲ್ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಇದರಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿ, ನೇಮಕಾತಿಯನ್ನು ಪ್ರಶ್ನಿಸಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
2004ರ ನಂತರ ಯಾವ ಮುಖ್ಯ ಆಯುಕ್ತರೂ ಆರು ವರ್ಷಗಳ ಪೂರ್ಣ ಅವಧಿಯ ವರೆಗೆ ಅಧಿಕಾರವನ್ನು ನಡೆಸಿಲ್ಲ. ಕಾಂಗ್ರೆಸ್ ನೇತೃತ್ವದ 10 ವರ್ಷಗಳ ಯುಪಿಎ ಅವಧಿಯಲ್ಲಿ ಆರು ಮಂದಿ ಮುಖ್ಯ ಚುನಾವಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರೆ, ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 8 ವರ್ಷಗಳ ಅವಧಿಯಲ್ಲಿ ಎಂಟು ಮಂದಿ ಮುಖ್ಯ ಚುನಾವಣಾ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ.
90ರ ದಶಕದಲ್ಲಿ ದೇಶಾದ್ಯಂತ ಭಾರೀ ಪ್ರಶಂಸೆಗೆ ಒಳಗಾಗಿದ್ದ ಟಿ.ಎನ್. ಶೇಷನ್ ಮುಖ್ಯ ಚುನಾವಣಾ ಆಯುಕ್ತರಾಗಿ 1990ರ ಡಿಸೆಂಬರ್‌ನಿಂದ 1996ರ ಡಿಸೆಂಬರ್ ವರೆಗೆ ಕರ್ತವ್ಯ ನಿರ್ವಹಿಸಿದ್ದರು.