ಹೈಕೋರ್ಟ್ ತೀರ್ಪು ಹೋಲುವ ನಕಲಿ ಆದೇಶ: ಆರೋಪಿ ವಕೀಲನ ವಿರುದ್ಧ ಕೇಸ್- ಪತ್ನಿ, ಪುತ್ರನಿಗೆ ಜಾಮೀನು ಮಂಜೂರು
ಹೈಕೋರ್ಟ್ ತೀರ್ಪು ಹೋಲುವ ನಕಲಿ ಆದೇಶ: ಆರೋಪಿ ವಕೀಲನ ವಿರುದ್ಧ ಕೇಸ್- ಪತ್ನಿ, ಪುತ್ರನಿಗೆ ಜಾಮೀನು ಮಂಜೂರು
ಹೈಕೋರ್ಟ್ ಆದೇಶವನ್ನು ಹೋಲುವಂತೆ ನಕಲಿ ಆದೇಶದ ಪ್ರತಿಯನ್ನು ವಿನ್ಯಾಸ ಮಾಡಿ ಕಕ್ಷಿದಾರನ ವಾಟ್ಸ್ ಆಪ್ ಮೊಬೈಲ್‌ಗೆ ಕಳುಹಿಸಿದ್ದ ಆರೋಪಿ ವಕೀಲನ ಪತ್ನಿ ಮತ್ತು ಪುತ್ರನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಪತ್ನಿ ಪುತ್ರನ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ. ರಾಜೇಂದ್ರ ಬಾದಾಮಿಕರ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ವಕೀಲರ ವಿರುದ್ಧ ನಕಲಿ ಆದೇಶ ಪ್ರತಿ ತಯಾರಿಸಿ ಅದನ್ನು ವಾಟ್ಸ್‌ಆಪ್ ಮೂಲಕ ಕಕ್ಷಿದಾರರಿಗೆ ನೀಡಿದ್ದಾರೆ ಎಂಬುದು ಆರೋಪ. ವಿಲ್ಸನ್ ಗಾರ್ಡನ್‌ನ 10ನೇ ಅಡ್ಡರಸ್ತೆಯಲ್ಲಿ ಇರುವ ಮುರುಗೇಶ್ ಶೆಟ್ಟರ್ ಅವರು ಆರೋಪಿ ವಕೀಲರು.
ಕಕ್ಷಿದಾರರು ತಮ್ಮ ಕೇಸನ್ನು ನಡೆಸಲು ಆರೋಪಿ ವಕೀಲರಾದ ಮುರುಗೇಶ್ ಶೆಟ್ಟರ್ ಅವರಿಗೆ ಸುಮಾರು 10 ಲಕ್ಷ ರೂಪಾಯಿಗಳನ್ನು ಡಿಮ್ಯಾಂಡ್ ಡ್ರಾಫ್ಟ್, ಚೆಕ್ ಮತ್ತು ನಗದು ಮೂಲಕ ಪಾವತಿ ಮಾಡಿದ್ದರು. ಈ ಹಣವನ್ನು ಪತ್ನಿ ಮತ್ತು ಪುತ್ರ ಪಡೆದಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಾಟ್ಸ್ಯಾಪ್‌ನಲ್ಲಿ ವಕೀಲರು ಕಳುಹಿಸಿರುವ ಹೈಕೋರ್ಟ್ ಆದೇಶ ಎನ್ನಲಾದ ದಾಖಲೆಗೆ ಮಾನ್ಯ ಹೈಕೋರ್ಟ್‌ನ ಸೀಲ್ ಮತ್ತು ರಿಜಿಸ್ಟ್ರಾರ್ ಅವರ ಸಹಿ ಇತ್ತು. ಆದರೆ, ದೂರುದಾರರು ಈ ದಾಖಲೆಯನ್ನು ಹೈಕೋರ್ಟ್ ಜಾಲತಾಣದಲ್ಲಿ ತಡಕಾಡಿದಾಗ ಇಂತಹ ದಾಖಲೆಯೇ ಇಲ್ಲ ಎಂಬುದಾಗಿ ಕಂಡುಬಂತು.
ಅದನ್ನು ಆರೋಪಿ ವಕೀಲರಲ್ಲಿ ವಿಚಾರಿಸಿದಾಗ, ಕೊರೋನಾ ಕಾರಣದಿಂದ ಈ ಆದೇಶವನ್ನು ಹೈಕೋರ್ಟ್ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗಿಲ್ಲ ಎಂದು ಕಕ್ಷಿದಾರರ ದಾರಿತಪ್ಪಿಸಿದರು.
ಆದರೆ, ಕಕ್ಷಿದಾರರು ಇದು ನಕಲಿಯಾಗಿದೆ ಎಂದು ಹೇಳಿದಾಗ ಆರೋಪಿ ವಕೀಲರು ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದರು. ಈ ಬಗ್ಗೆ ಕಕ್ಷಿದಾರರು ಆರೋಪಿ ವಕೀಲರು, ಅವರ ಪತ್ನಿ ಮತ್ತು ಪುತ್ರರ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.
ಆರೋಪಿ ವಕೀಲರು ನಕಲಿ ದಾಖಲೆ ಸೃಷ್ಟಿಸಿ ಹೈಕೋರ್ಟ್ ಆದೇಶವನ್ನು ತಯಾರಿಸಿದ್ದಾರೆ. ಅದಕ್ಕೆ ಹೈಕೋರ್ಟ್ ನ ಸೀಲ್ ಮತ್ತು ಸಹಿಯನ್ನು ಅಳವಪಡಿಸಿದ್ದಾರೆ ಎಂಬುದು ಆರೋಪ. ಪ್ರಕರಣವನ್ನು ನಡೆಸಲು ನೀಡಿರುವ ಹಣವನ್ನು ಪತ್ನಿ ಮತ್ತು ಪುತ್ರರು ಪಡೆದಿದ್ದಾರೆ ಎಂಬ ಆರೋಪವೂ ಇದೆ.
ಆದರೆ, ವಕೀಲರ ಪತ್ನಿ ಮತ್ತು ಪುತ್ರರು ಆರೋಪದಲ್ಲಿ ನೇರವಾಗಿ ಭಾಗಿಯಾಗಿಲ್ಲ. ಅರ್ಜಿದಾರರು ಹಣ ಪಡೆದು ದುರುಪಯೋಗ ಮಾಡಿದ್ದಾರೆ ಎಂಬ ಬಗ್ಗೆ ದಾಖಲೆಯನ್ನು ಒದಗಿಸಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಿ ನ್ಯಾಯಪೀಠ, ಅರ್ಜಿದಾರರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪುರಸ್ಕರಿಸಿತು.
ಪ್ರಕರಣ: ಉಮಾದೇವಿ ಮುರುಗೇಶ್ ಇನ್ನೊಬ್ಬರು Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, Cr.P. 9966/2022 Dated 10-11-2022
--