ದಯವಿಟ್ಟು ಸಮಸ್ಯೆ ಬಗೆಹರಿಸಿ, ನಾವು ನಿರ್ಧರಿಸುವಂತೆ ಮಾಡಬೇಡಿ: ಕೊಲೀಜಿಯಂ ಪಾಲಿಸದ ಕೇಂದ್ರಕ್ಕೆ ಸುಪ್ರೀಂ ತರಾಟೆ
ದಯವಿಟ್ಟು ಸಮಸ್ಯೆ ಬಗೆಹರಿಸಿ, ನಾವು ನಿರ್ಧರಿಸುವಂತೆ ಮಾಡಬೇಡಿ: ಕೊಲೀಜಿಯಂ ಪಾಲಿಸದ ಕೇಂದ್ರಕ್ಕೆ ಸುಪ್ರೀಂ ತರಾಟೆ
ಕೊಲೀಜಿಯಂ ವ್ಯವಸ್ಥೆ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದೆ. ಈ ಅವಧಿಯಲ್ಲಿ ಹೈಕೋರ್ಟ್‌ಗಳಿಗೆ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳ ನೇಮಕ ಪ್ರಕ್ರಿಯೆ ನಿಂತುಹೋಗಿದೆ. ಕೊಲೀಜಿಯಂ ಶಿಫಾರಸು ಪಾಲಿಸದ ಕೇಂದ್ರ ಕ್ರಮವೇ ಇದಕ್ಕೆ ಕಾರಣ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ದಯವಿಟ್ಟು ಸಮಸ್ಯೆಯನ್ನು ಬಗೆಹರಿಸಿ... ನ್ಯಾಯಾಲಯದ ಕಡೆಯಿಂದ ನಿರ್ಧಾರ ತೆಗೆದುಕೊಳ್ಳುವಂತೆ ಮಾಡಬೇಡಿ ಎಂದು ಕೊಲೀಜಿಯಂ ಶಿಫಾರಸ್ಸುಗಳನ್ನು ತಡೆಹಿಡಿದಿರುವ ಕೇಂದ್ರ ಸರ್ಕಾರ ಸುಪ್ರೀಂ ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಸರ್ಕಾರ ಕಡತವನ್ನು ಹಿಡಿದಿಟ್ಟುಕೊಂಡಿದೆ ಎಂದು ಹೇಳಬೇಡಿ. ಹಾಗಿದ್ದರೆ ನೀವು ಸರ್ಕಾರಕ್ಕೆ ಕಡತವನ್ನೇ ಕಳುಹಿಸಬೇಡಿ. ನೀವು ನೇಮಕಾತಿ ಮಾಡಿಕೊಳ್ಳಿ. ಎಲ್ಲವನ್ನೂ ನೀವೇ ನಿರ್ವಹಿಸಿ ಎಂದು ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದರು.
ಈ ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾಯಪೀಠ, ನೇಮಕಾತಿ ಆಯೋಗ ಜಾರಿಗೆ ಬರಲಿಲ್ಲ ಎಂಬ ಕಾರಣಕ್ಕೆ ಕೊಲೀಜಿಯಂ ನಿರ್ಧಾರ ತಡೆ ಹಿಡಿದಿರುವುದು ಸರಿಯಲ್ಲ ಎಂದು ಹೇಳಿದೆ.
ಶಿಫಾರಸ್ಸನ್ನು ಪುನರುಚ್ಚರಿಸಿದರೆ ಸರ್ಕಾರ ಅದಕ್ಕೆ ಒಪ್ಪಿಗೆ ನೀಡಲೇಬೇಕು. ಕಾನೂನು ಪ್ರಕಾರ ಈ ವಿಚಾರವು ಅಲ್ಲಿಗೆ ಕೊನೆಗೊಳ್ಳುತ್ತದೆ ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್.ಓಕಾ ಅವರ ನ್ಯಾಯಪೀಠ ಹೇಳಿದೆ.
ಬೆಂಗಳೂರು ವಕೀಲರ ಸಂಘ ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಶಿಫಾರಸ್ಸು ಮಾಡಿದ ಹೆಸರುಗಳನ್ನು ತಡೆ ಹಿಡಿಯಲು ಅವರೇ ಕಾರಣ ಎಂದು ಗುಡುಗಿತು.
ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಮೂವರು ನ್ಯಾಯಮೂರ್ತಿಗಳ ಪೀಠ ಕಾಲಮಿತಿ ನಿಗದಿ ಪಡಿಸಿದೆ.
1993ರಲ್ಲಿ ಜಾರಿಗೆ ಬಂದ ಕೊಲೀಜಿಯಂ ವ್ಯವಸ್ಥೆ ಪ್ರಕಾರ ಮುಖ್ಯ ನ್ಯಾಯಮೂರ್ತಿ ಮತ್ತು ನಾಲ್ವರು ಅತಿ ಹಿರಿಯ ನ್ಯಾಯಮೂರ್ತಿಗಳು ಇರುವ ಕೊಲೀಜಿಯಂ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸ್ಸು ಮಾಡುತ್ತದೆ. ಈ ಶಿಫಾರಸ್ಸುಗಳಿಗೆ ಕೇಂದ್ರ ಸರ್ಕಾರವು ಅನುಮೋದನೆ ಕೊಡಬೇಕು.
ಈ ಮಧ್ಯೆ, 2014ರಲ್ಲಿ ಸಂವಿಧಾನದ 99ನೇ ತಿದ್ದುಪಡಿಯ ಪ್ರಕಾರ ನೇಮಕಾತಿ ಆಯೋಗವನ್ನು ಜಾರಿಗೆ ತಂದಿತ್ತು. ಇದನ್ನು ಸುಪ್ರೀಂ ಕೋರ್ಟ್ 2015ರಲ್ಲಿ ರದ್ದುಗೊಳಿಸಿತ್ತು. ಈ ಕಾರಣದಿಂದ ಕೊಲೀಜಿಯಂ ವ್ಯವಸ್ಥೆ ಮುಂದುವರಿದಿತ್ತು.