ನ್ಯಾಯಾಧೀಶರ ಹುದ್ದೆಗೆ ನೇಮಕಾತಿ: ಅರ್ಹ ವಕೀಲರ ಕೊರತೆ: ಸುಪ್ರೀಂ ಕೋರ್ಟ್ ಬೇಸರ
ನ್ಯಾಯಾಧೀಶರ ಹುದ್ದೆಗೆ ನೇಮಕಾತಿ: ಅರ್ಹ ವಕೀಲರ ಕೊರತೆ: ಸುಪ್ರೀಂ ಕೋರ್ಟ್ ಬೇಸರ
ದೇಶದೆಲ್ಲೆಡೆ "ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ"ರಾಗಿ ಪರ್ಯಾಯ ವ್ಯವಸ್ಥೆ ಮೂಲಕ (ಲ್ಯಾಟರಲ್ ಎಂಟ್ರಿ) ನೇಮಕಾತಿ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಅರ್ಹ ವಕೀಲರು ಲಭ್ಯರಾಗದೆ ಇರುವುದಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಏಳು ವರ್ಷದ ವಕೀಲ ವೃತ್ತಿಯ ಅನುಭವ ಹೊಂದಿದ ಉತ್ಸಾಹಿ ನ್ಯಾಯವಾದಿಗಳು 'ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ'ರ ಹುದ್ದೆ ವಹಿಸಲು ಮುಂದಾಗಬೇಕು, ಉನ್ನತ ನ್ಯಾಯಾಂಗ ಸೇವೆಗಳಿಗೆ ಲ್ಯಾಟರಲ್ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಉನ್ನತ ನ್ಯಾಯಾಂಗ ಸೇವೆಗಳ (Higher Judiciary Service) ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಅಭ್ಯರ್ಥಿಗಳ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ನಡೆಸಿತು.
"ಅರ್ಜಿದಾರರು ರಾಜಸ್ಥಾನ ಹೈಕೋರ್ಟ್‌ಗೆ ತೆರಳಲು ಮುಕ್ತ ಅವಕಾಶ ನೀಡುತ್ತೇವೆ. ಅದಕ್ಕಾಗಿ ವಿಶೇಷ ಪೀಠವನ್ನು ರಚಿಸುವಂತೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಕೋರುತ್ತೇವೆ. ಇದಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ'’ ಎಂದು ನ್ಯಾಯಪೀಠ ಹೇಳಿದ್ದು, ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಲು ಒಪ್ಪಲಿಲ್ಲ.
'ಉನ್ನತ ನ್ಯಾಯಾಂಗ ಸೇವೆಗಳ ಹುದ್ದೆಗೆ ಅಭ್ಯರ್ಥಿಗಳು ಬರೆದ ಉತ್ತರ ಪತ್ರಿಕೆಗಳನ್ನು ಮಾಜಿ ನ್ಯಾಯಾಧೀಶರು ಮೌಲ್ಯಮಾಪನ ಮಾಡುತ್ತಾರೆ' ಎಂಬುದಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ನ್ಯಾಯಪೀಠದ ಮುಂದೆ ವಾದಿಸಿದರು.
ರಾಜಸ್ಥಾನದಲ್ಲಿ 85 ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಗಾಗಿ ಉನ್ನತ ನ್ಯಾಯಾಂಗ ಸೇವೆಗಳ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. 3,000ಕ್ಕೂ ಅಧಿಕ ನ್ಯಾಯವಾದಿಗಳು ಪೂರ್ವಭಾವಿ ಪರೀಕ್ಷೆಯನ್ನು ಬರೆದರು. ಆದರೆ, ಅದರಲ್ಲಿ 779 ಯಶಸ್ವಿ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ (ಮೈನ್ಸ್ ಎಕ್ಸಾಂ)ಯನ್ನು ತೆಗೆದುಕೊಂಡರು ಎಂದು ಭೂಷಣ್ ಹೇಳಿದರು.
ವಿಷಾದ ಎಂದರೆ, ಅಂತಿಮ ಸುತ್ತಿನಲ್ಲಿ ಕೇವಲ ನಾಲ್ವರು ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಇದು ನಿಜಕ್ಕೂ ಅತ್ಯಂತ ಗಂಭೀರ ವಿಚಾರವಾಗಿದೆ. ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಮಾಜಿ ನ್ಯಾಯಾಧೀಶರನ್ನು ನೇಮಿಸುವ ಸುಪ್ರೀಂ ಕೋರ್ಟ್ ಇದನ್ನು ಪರಿಶೀಲಿಸಬೇಕಾಗಿದೆ ಎಂದು ಪ್ರಶಾಂತ್ ಭೂಷಣ್ ನ್ಯಾಯಪೀಠವನ್ನು ಕೇಳಿಕೊಂಡರು.
..