ನಂಬಿಕೆ, ಆಚರಣೆಗೆ ಕುರಿತ ಸಂಗತಿಗಳಿಗೆ ಮಾತ್ರ ಧರ್ಮಗುರುಗಳ ಅಭಿಪ್ರಾಯ: ಕಾನೂನು ವಿಚಾರಗಳಿಗೆ ಅಗತ್ಯವಿಲ್ಲ ಎಂದ ಕೇರಳ ಹೈಕೋರ್ಟ್
ನಂಬಿಕೆ, ಆಚರಣೆಗೆ ಕುರಿತ ಸಂಗತಿಗಳಿಗೆ ಮಾತ್ರ ಧರ್ಮಗುರುಗಳ ಅಭಿಪ್ರಾಯ: ಕಾನೂನು ವಿಚಾರಗಳಿಗೆ ಅಗತ್ಯವಿಲ್ಲ ಎಂದ ಕೇರಳ ಹೈಕೋರ್ಟ್
ಕಾನೂನಿನ ಸಂಗತಿಗಳನ್ನು ಮತ್ತು ವಿವಾದಾಂಶಗಳನ್ನು ಇತ್ಯರ್ಥ ಮಾಡುವಾಗ ನ್ಯಾಯಾಲಯಗಳು ಧರ್ಮಗುರುಗಳ ಅಭಿಪ್ರಾಯಕ್ಕೆ ಶರಣಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಯಾವುದೇ ಸಂಗತಿಗಳ ಬಗ್ಗೆ ಕಾನೂನಿನ ವಿಚಾರಕ್ಕೆ ಬಂದಾಗ ಆಳವಾದ ಅಧ್ಯಯನ ನಡೆಸಿರುವ ಕಾನೂನು ತಜ್ಞರು ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿಯಾಗಿ ಸಹಕರಿಸಬಹುದಾಗಿದೆ. ಇದಕ್ಕೆ ಹೊರತಾಗಿ ಯಾವುದೇ ಕಾನೂನಿನ ಅರಿವು ಇಲ್ಲದ ಧರ್ಮಗುರುಗಳ ಪರಿಗಣಿಸಲಾಗದು ಎಂದು ಹೈಕೋರ್ಟ್ ಹೇಳಿದೆ.
ಆದರೆ, ನಂಬಿಕೆ ಮತ್ತು ಆಚರಣೆಗೆ ಸಂಬಂಧಿಸಿದಂತೆ ಇರುವ ವಿವಾದಾಂಶಗಳ ಇತ್ಯರ್ಥದ ಸಂದರ್ಭದಲ್ಲಿ ಮಾತ್ರ ಧರ್ಮಗುರುಗಳ ಅಭಿಪ್ರಾಯ ಕೇಳಬಹುದಾಗಿದೆ ಎಂದು ಎಂದು ನ್ಯಾ. ಎ ಮೊಹಮ್ಮದ್ ಮುಶ್ತಾಕ್ ಮತ್ತು ಸಿ. ಎಸ್. ಡಯಾಸ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಹೆಂಡತಿ ಜೊತೆಗಿನ ವೈವಾಹಿಕ ಒಪ್ಪಂದವನ್ನು ಕೊನೆಗೊಳಿಸುವುದು ಪವಿತ್ರ ಕುರಾನ್ ಆಕೆಗೆ ನೀಡಿದ ಸಂಪೂರ್ಣ ಹಕ್ಕಾಗಿದೆ. ಪತಿಯ ಇಚ್ಚೆ ಅಥವಾ ಸಮ್ಮತಿಗೆ ಒಳಪಟ್ಟ ಹಕ್ಕು ಅದಲ್ಲ ಎಂಬ ಹೈಕೋರ್ಟಿನ ಈ ಹಿಂದಿನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿದಾರ ಪತಿ ಸಲ್ಲಿಸಿದ ರಿವಿಷನ್ ಅಪೀಲ್‌ನಲ್ಲಿ "ಖುಲಾ ಮೂಲಕ ವಿಚ್ಚೇದನ ನೀಡುವ ಕುರಿತು ಮುಸ್ಲಿಂ ಹೆಂಡತಿಗೆ ನೀಡಲಾದ ಅಧಿಕಾರವನ್ನು ಅರ್ಜಿದಾರರು ಪ್ರಶ್ನಿಸುವುದಿಲ್ಲ. ಬದಲಾಗಿ, ಮುಸ್ಲಿಂ ಪತ್ನಿ ಖುಲಾ ಪರಿಹಾರ ಕೇಳಲು ನ್ಯಾಯಾಲಯ ಸಮ್ಮತಿಸಿದ ಕಾರ್ಯವಿಧಾನದ ಬಗ್ಗೆ ಮರುಪರಿಶೀಲಿಸುವ ಅರ್ಜಿ ಸಲ್ಲಿಸಿದ್ದೇನೆ ಎಂದು ವಾದಿಸಿದ್ದರು.
ವಾದವನ್ನು ಆಲಿಸಿದ ನ್ಯಾಯಾಲಯ "ಈ ವಾದ, ಮುಸ್ಲಿಂ ಮಹಿಳೆಯರು ತಮ್ಮ ಪುರುಷ ಸಹವರ್ತಿಯ ಇಚ್ಛೆಗೆ ಅಧೀನರು ಎಂಬುದನ್ನು ಚಿತ್ರಿಸುವ ವಿಚಿತ್ರ ವಿಮರ್ಶೆಯಾಗಿದೆ. ಈ ಅವಲೋಕನ ಮೇಲ್ಮನವಿದಾರರ ವಿಚಾರದಲ್ಲಿ ಮುಗ್ಧವಾಗಿ ತೋರುತ್ತಿಲ್ಲ, ಬದಲಿಗೆ ಇದು ಖುಲಾದ ನ್ಯಾಯಾಂಗೇತರ ವಿಚ್ಛೇದನವನ್ನು ಏಕಪಕ್ಷೀಯವಾಗಿ ಆಶ್ರಯಿಸುವ ಮುಸ್ಲಿಂ ಮಹಿಳೆಯರ ಹಕ್ಕನ್ನು ಅರಗಿಸಿಕೊಳ್ಳಲಾಗದ ಧರ್ಮಗುರುಗಳು ಮತ್ತು ಮುಸ್ಲಿಂ ಸಮುದಾಯದ ಪುರುಷ ಪ್ರಾಬಲ್ಯದಿಂದ ರೂಪಿತ ಮತ್ತು ಬೆಂಬಲಿತವಾಗಿರುವಂತೆ ತೋರುತ್ತದೆ” ಎಂದಿತು.
ವಾದ ವಿವಾದ ಆಲಿಸಿದ ನ್ಯಾಯಪೀಠ, ತನ್ನ ತೀರ್ಪನ್ನು ಮರು ಪರಿಶೀಲಿಸಲು ಯಾವುದೇ ಸಕಾರಣ ಕಂಡುಬರುತ್ತಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.