ವಯೋವೃದ್ಧ ಮನೆ ಬಾಗಿಲಿಗೆ ತೆರಳಿ ಮನವಿ ಸ್ವೀಕರಿಸಿ ನ್ಯಾಯಾಧೀಶರು
ವಯೋವೃದ್ಧ ಮನೆ ಬಾಗಿಲಿಗೆ ತೆರಳಿ ಮನವಿ ಸ್ವೀಕರಿಸಿ ನ್ಯಾಯಾಧೀಶರು
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಕಾನೂನು ಸಂಕಷ್ಟಕ್ಕೆ ಸಿಲುಕಿದ ಅಂಗವಿಕಲ ವಯೋವೃದ್ಧನ ಮನೆ ಬಾಗಿಲಿಗೆ ಭೇಟಿ ನೀಡಿ ಮನವಿ ಸ್ವೀಕರಿಸಿದ ಘಟನೆ ರಾಜ್ಯದ ಹುಳಿಯಾರಿನಲ್ಲಿ ನಡೆದಿದೆ.
ಇಲ್ಲಿನ ಚಿಕ್ಕನಾಯಕನ ಹಳ್ಳಿಯ ಕೆಂಕೆರೆಯಲ್ಲಿ ಜಮೀನು ವಿಚಾರವಾಗಿ ತಮಗೆ ಅನ್ಯಾಯವಾಗಿದೆ ಎಂದು ನ್ಯಾಯಾಧೀಶರ ಎದುರು ಅಂಗವೈಕಲ್ಯಕ್ಕೊಳಗಾಗಿದ್ದ ವಯೋವೃದ್ಧರು ಅಳಲು ತೋಡಿಕೊಂಡರು.
1966ರಲ್ಲಿ ತಮ್ಮ ಜೀವನೋಪಾಯಕ್ಕಾಗಿ ಪುಟ್ಟಯ ಎಂಬವರಿಗೆ ಸರ್ಕಾರ ಈ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ ಅವರು ಕೃಷಿ ಕಾಯಕ ಮಾಡಿ ತಮ್ಮ ಜೀವನ ನಡೆಸುತ್ತಿದ್ದರು. ಆದರೆ, ಸುಮಾರು 20 ವರ್ಷದ ಹಿಂದೆ ಮರದಿಂದ ಬಿದ್ದು ಸೊಂಟ ಮರಿದುಕೊಂಡಿದ್ದರು.
ದುರದೃಷ್ಟವಶಾತ್, ಅವರ ಇಬ್ಬರು ಮಕ್ಕಳೂ ವಿಕಲಚೇತನರು. ಇವರ ಅಸಹಾಯಕತೆಯನ್ನು ಅರಿತ ಸ್ಥಳೀಯ ಕೆಲವರು, ವಯೋವೃದ್ಧರಿಗೆ ಮಂಜೂರಾಗಿರುವ ಭೂಮಿಯನ್ನು ಸ್ವಾಧೀನ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ ಎಂದು ಪುಟ್ಟಯ್ಯ ಅವರ ಅಳಲು.
ಇತ್ತೀಚೆಗೆ ಗ್ರಾಮದಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುಟ್ಟಯ್ಯ ಬಯಸಿದ್ದರು.
ಈ ವಿಚಾರವನ್ನು ತಿಳಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶಪ್ಪ ಮತ್ತು ಶ್ರೀನಾಥ್ ಸಭೆಗೆ ಮುಂಚೆಯೇ ಕಾನೂನು ನೆರವು ಬಯಸಿದ್ದ ವೃದ್ಧರ ಮನೆಗೆ ತೆರಳಿ ಮನವಿ ಸ್ವೀಕರಿಸಿದರು. ಅಲ್ಲದೆ, ವೃದ್ಧರಿಗೆ ಆಹಾರದ ಕಿಟ್ ನೀಡಿ ಸಂತೈಸಿದರು.
ಸರ್ಕಾರಿ ವಕೀಲರನ್ನು ನೇಮಿಸಿ ಪುಟ್ಟಯ್ಯ ಅವರಿಗಾಗಿರುವ ಅನ್ಯಾಯವನ್ನು ಕಾನೂನು ಮೂಲಕ ಇತ್ಯರ್ಥ ಪಡಿಸುವ ಭರವಸೆಯನ್ನೂ ನ್ಯಾಯಾಧೀಶರು ನೀಡಿದರು.