MVC Claim enhanced: 11 ಲಕ್ಷ ನೀಡಲು ಒಪ್ಪದ ವಿಮಾ ಕಂಪೆನಿಗೆ 44 ಲಕ್ಷ ರೂ. ಪರಿಹಾರ ನೀಡಲು ಆದೇಶ: ಕರ್ನಾಟಕ ಹೈಕೋರ್ಟ್
11 ಲಕ್ಷ ನೀಡಲು ಒಪ್ಪದ ವಿಮಾ ಕಂಪೆನಿಗೆ 44 ಲಕ್ಷ ರೂ. ಪರಿಹಾರ ನೀಡಲು ಆದೇಶ: ಕರ್ನಾಟಕ ಹೈಕೋರ್ಟ್
ರಸ್ತೆ ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಶೇ. 65 ಅಂಗವೈಕಲ್ಯ ಅನುಭವಿಸಿದ ಎಂಜಿನಿಯರ್ ಪದವೀಧರರೊಬ್ಬರಿಗೆ 11 ಲಕ್ಷ ರೂ. ಪರಿಹಾರ ನೀಡಲು ಒಪ್ಪದ ವಿಮಾ ಕಂಪೆನಿಗೆ 44 ಲಕ್ಷ ರೂ. ಪರಿಹಾರ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ನೇತೃತ್ವದ ಹೈಕೋರ್ಟ್ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಅರ್ಜಿದಾರರಿಗೆ 11 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ಮಂಗಳೂರು ವಾಹನ ಅಪಘಾತ ಪರಿಹಾರ ನ್ಯಾಯಾಧಿಕರಣದ ತೀರ್ಪುನ್ನು ಪ್ರಶ್ನಿಸಿ ವಿಮಾ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಮೇಲ್ಮನವಿಯನ್ನು ಪುರಸ್ಕರಿಸುವುದು ಯಾ ತಿರಸ್ಕರಿಸುವುದು ಸಾಮಾನ್ಯ. ಕೆಲವೊಂದು ಪ್ರಕರಣಗಳಲ್ಲಿ ಪರಿಹಾರದ ಮೊತ್ತವನ್ನು ಹೆಚ್ಚಿಸುವ ಪ್ರಕರಣಗಳೂ ಇವೆ. ಆದರೆ, ಈ ಪ್ರಕರಣದಲ್ಲಿ ನಾಲ್ಕು ಪಟ್ಟು ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ ನೀಡಿರುವುದು ಅಪರೂಪದ ಸಂಗತಿ. ಈ ಮೂಲಕ ಸಂತ್ರಸ್ತ ವ್ಯಕ್ತಿಯ ಬದುಕು ನೆಮ್ಮದಿಯಿಂದ ಇರುವಂತೆ ನ್ಯಾಯಪೀಠ ನೋಡಿಕೊಂಡಿದೆ.
ವಾಹನ ಅಪಘಾತ ಆದ ದಿನದಿಂದ ಶೇ. 6ರಂತೆ ಬಡ್ಡಿ ನೀಡುವಂತೆ ಆದೇಶದಲ್ಲಿ ಹೇಳಲಾಗಿದ್ದು, ವಿಮಾ ಕಂಪೆನಿಯ ಹಠಮಾರಿ ಧೋರಣೆಗೆ ತಕ್ಕ ಪಾಠ ಸಿಕ್ಕಿದಂತಾಗಿದೆ.
ಪ್ರತಿವಾದಿ ಗಾಯಾಳು ಸಂತ್ರಸ್ತರ ಪರವಾಗಿ ವಕೀಲರಾದ ಧನಂಜಯ ಕುಮಾರ್ ಅವರು ವಾದ ಮಂಡಿಸಿದ್ದರು.
ಘಟನೆಯ ವಿವರ:
ಮೂಡುಬಿದರೆಯ ಮಾಸ್ತಿಕಟ್ಟೆಯ ವಾಸಿ ಅಲ್ವಿನ್ ಲೋಬೋ, ತಮ್ಮ ಸಹೋದರನ ಜೊತೆಗೆ 2009ರ ಮೇ 23ರಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಆಟೋ ರಿಕ್ಷಾ ಬೈಕಿಗೆ ಡಿಕ್ಕಿ ಹೊಡೆದಿತ್ತು. ಇದರ ಪರಿಣಾಮ ಹಿಂಬದಿ ಕುಳಿತಿದ್ದ ಲೋಬೋ ಅವರಿಗೆ ಗಂಭೀರ ಗಾಯಗಳಾಗಿದ್ದವು. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೂ ಶೇ 65 ಅಂಗವೈಕಲ್ಯ ಅನುಭವಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಯನ್ನೂ ಪಡೆದಿದ್ದರು.
ಒಟ್ಟು ಚಿಕಿತ್ಸೆಗಾಗಿ ಒಟ್ಟು 5,24,139.37 ರು. ಖರ್ಚು ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರು ವಾಹನ ನ್ಯಾಯಾಧೀಕರಣ, ಲೋಬೋ ಅವರಿಗೆ ವಾರ್ಷಿಕ ಶೇ. 8ರಷ್ಟು ಬಡ್ಡಿದರದಲ್ಲಿ ಒಟ್ಟು 11,39,340 ರು. ಪರಿಹಾರ ಪಾವತಿಸುವಂತೆ ವಿಮಾ ಕಂಪನಿಗೆ 2015ರ ಜೂ. 20ರಂದು ಆದೇಶ ನೀಡಿತ್ತು. ಈ ತೀರ್ಪನ್ನು ರದ್ದುಪಡಿಸಬೇಕು ಎಂದು ವಿಮಾ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಬೈಕು ಹಾಗೂ ಆಟೋ ಮಧ್ಯೆ ಡಿಕ್ಕಿಯೇ ಸಂಭವಿಸಿಲ್ಲ. ಆಯ ತಪ್ಪಿ ಬಿದ್ದ ಘಟನೆಯನ್ನು ಪೊಲೀಸರ ಸಹಾಯದೊಂದಿಗೆ ತಿರುಚಲಾಗಿದೆ. ಆಟೋ ರಿಕ್ಷಾ ಚಾಲಕ, ಕ್ಲೇಮುದಾರ ಲೋಬೋ ನೆರೆಮನೆಯವರಾಗಿದ್ದಾರೆ. ಹಾಗಾಗಿ, ನ್ಯಾಯಾಧಿಕರಣದ ಆದೇಶ ರದ್ದುಪಡಿಸುವಂತೆ ಕೋರಿದ್ದರು ಎಂದು ವಿಮಾ ಕಂಪೆನಿ ವಾದಿಸಿತ್ತು.
ಆಟೋ ಚಾಲಕರು ನ್ಯಾಯಾಧಿಕರಣಕ್ಕೆ ಸಾಕ್ಷ್ಯ ನುಡಿದು, ತಾವು ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಲೋಬೋ ಸಂಚರಿಸುತ್ತಿದ್ದ ಬೈಕಿಗೆ ಹೊಡೆಯಿತು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಸದ್ರಿ ಅಪಘಾತ ನಡೆದಿಲ್ಲ ಎಂಬುದಕ್ಕೆ ವಿಮಾ ಕಂಪೆನಿ ಯಾವ ದಾಖಲೆಯನ್ನೂ ಒದಗಿಸಿಲ್ಲ. ಹಾಗಾಗಿ, ವಿಮಾ ಕಂಪೆನಿಯ ವಾದ ಒಪ್ಪಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಪಘಾತದಿಂದ ಸಂತ್ರಸ್ತರು ಶೇ. 65ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ. ವೈದ್ಯಕೀಯ ಚಿಕಿತ್ಸೆಗೆ ಐದು ಲಕ್ಷಕ್ಕೂ ಅಧಿಕ ಹಣ ವ್ಯಯಿಸಿದ್ದಾರೆ. ಅಪಘಾತಕ್ಕೂ ಮುನ್ನ ಲೋಬೋ ಅಬುಧಾಬಿಯಲ್ಲಿ ಎಂಜಿನಿಯರ್ ಆಗಿ ಮಾಸಿಕ 50 ಸಾವಿರ ರು.ಗಿಂತ ಅಧಿಕ ವೇತನ ಪಡೆಯುತ್ತಿದ್ದರು. ಅಪಘಾತ ನಡೆದಾಗ ಅವರಿಗೆ 29 ವರ್ಷ ವಯಸ್ಸು.
ಇದೆಲ್ಲವನ್ನು ಪರಿಗಣಿಸಿ ಪರಿಹಾರ ಮೊತ್ತ ಹೆಚ್ಚಿಸುವುದು ಸೂಕ್ತ ಎಂದು ಹೈಕೋರ್ಟ್ ತೀರ್ಮಾನಿಸಿ ರೂ. 44, 92,140ಕ್ಕೆ ಹೆಚ್ಚಿಸಿತು. ಅಲ್ಲದೆ, ಅಪಘಾತದ ದಿನದಿಂದ ವಾರ್ಷಿಕ ಶೇ. 6ರಷ್ಟು ಬಡ್ಡಿ ಸೇರಿಸಿ ಪರಿಹಾರ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.
ಪ್ರಕರಣ: ನ್ಯಾಷನಲ್ ಇನ್ಶೂರೆನ್ಸ್ Vs ಆಲ್ವಿನ್ ಲೋಬೋ ಮತ್ತಿತರರು
ಕರ್ನಾಟಕ ಹೈಕೋರ್ಟ್, MFA 8449/2015 Dated 19-10-2022
..