
ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಬೆಲೆ ಕೊಡದ ಲೋಕಾಯುಕ್ತ: ಹೈಕೋರ್ಟ್ ನೋಟೀಸ್
ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಬೆಲೆ ಕೊಡದ ಲೋಕಾಯುಕ್ತ: ಹೈಕೋರ್ಟ್ ನೋಟೀಸ್
ಯಾವುದೇ ಪ್ರಕರಣದಲ್ಲಿ FIR ದಾಖಲಿಸಿದ 24 ಗಂಟೆಗಳಲ್ಲಿ FIR ಪ್ರತಿಯನ್ನು ಅಂತರ್ಜಾಲಕ್ಕೆ ಹಾಕಬೇಕು ಎಂಬುದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ. ಅದನ್ನು ಪಾಲಿಸದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ಸೂಕ್ತ ಕಾರಣ ನೀಡುವಂತೆ ಮಾನ್ಯ ರಾಜ್ಯ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಎಫ್‌ಐಆರ್ ಕುರಿತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಲೋಕಾಯುಕ್ತ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿ ನ್ಯಾಯವಾದಿ ಎಸ್. ಉಮಾಪತಿ ಅವರು ಸಲ್ಲಿಸಿದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ ವರಾಳೆ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರ ವಿಭಾಗೀಯ ನ್ಯಾಯಪೀಠ ಈ ನೋಟೀಸ್ ಜಾರಿ ಮಾಡಿದೆ.
ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಎಸಿಎಸ್ ಹಾಗೂ ಲೋಕಾಯುಕ್ತ ಎಡಿಜಿಪಿ ಅವರನ್ನು ಪ್ರಕರಣದಲ್ಲಿ ಪ್ರತಿವಾದಿ ಮಾಡಲಾಗಿತ್ತು.. ಈ ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 9ರಂದು ನಡೆಯಲಿದೆ.
2016ರಲ್ಲಿ ಸುಪ್ರೀಂ ಕೋರ್ಟ್ ಎಫ್‌ಐಅರ್‌ಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿದ್ದು, ಎಫ್‌ಐಆರ್ ದಾಖಲಾದ 24 ಗಂಟೆಗಳಲ್ಲಿ ಅದನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದು ಹೇಳಿತ್ತು. ಆದರೆ, ಲೋಕಾಯುಕ್ತ ಈ ತೀರ್ಪನ್ನು ಉಲ್ಲಂಘಿಸಿದೆ ಎಂದು ಪಿಐಎಲ್‌ನಲ್ಲಿ ದೂರಲಾಗಿತ್ತು.
ಇತರ ತನಿಖಾ ಸಂಸ್ಥೆಗಳಾದ ಎಸಿಬಿ, ಬಿಎಂಟಿಎಫ್ ಮತ್ತು ಸಿಬಿಐ ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದೆ. ಆದರೆ, 2022ರ ಆಗಸ್ಟ್ 11ರಂದು ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿದ ನಂತರ ಲೋಕಾಯುಕ್ತಕ್ಕೆ ತನಿಖಾ ಅಧಿಕಾರ ನೀಡಲಾಗಿತ್ತು. ಆದರೆ, ಪ್ರಕರಣ ದಾಖಲಾದರೂ ಅಂತರ್ಜಾಲದಲ್ಲಿ ಯಾವುದೇ ಮಾಹಿತಿ ಹಾಕುವಲ್ಲಿ ಸಂಸ್ಥೆ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ.
ಇದರಿಂದ ಕಕ್ಷಿದಾರರು ಮತ್ತು ವಕೀಲರಿಗೆ ತೊಂದರೆಯಾಗುತ್ತಿದೆ. 2022ರ ಸೆಪ್ಟೆಂಬರ್ 16ರಂದು ತಾವು ಮನವಿ ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುದು ಅರ್ಜಿದಾರರ ವಾದ.
ಇದನ್ನೂ ಓದಿ
ಲಂಚಕ್ಕೆ ಬೇಡಿಕೆ: ಭ್ರಷ್ಟಾಚಾರದಲ್ಲಿ ಸಾಬೀತಾಗಬೇಕಾದ ಮಹತ್ವದ ಅಂಶ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು