
ಮೃತ ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೂ ಪಾಲು ಇದೆ: ಕರ್ನಾಟಕ ಹೈಕೋರ್ಟ್
ಮೃತ ಪುತ್ರನ ಆಸ್ತಿಯಲ್ಲಿ ವಿಧವೆ ತಾಯಿಗೂ ಪಾಲು ಇದೆ: ಕರ್ನಾಟಕ ಹೈಕೋರ್ಟ್
ಸಾವನ್ನಪ್ಪಿದ ತನ್ನ ಪುತ್ರನ ಆಸ್ತಿಯಲ್ಲಿ ಹಿಂದೂ ಉತ್ತರಾಧಿಕಾರ ಕಾಯಿದೆ ಸೆಕ್ಷನ್ 8ರ ಅಡಿ ವಿಧವೆ ತಾಯಿಗೂ ಹಕ್ಕಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಬೀದರ್ ಜಿಲ್ಲೆಯ ಈರಮ್ಮ ಎಂಬವರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ.ಸಚಿನ್ ಶಂಕರ್ ಮಗ್ದುಮ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಮಕ್ಕಳು ಆರನೇ ಎಪ್ಪತ್ತೈದರಷ್ಟು (6/75ನೆ) ಭಾಗದ ಆಸ್ತಿಗೆ ಅರ್ಹರಾಗಿದ್ದು, ಈರಮ್ಮ ಅವರು 6/75ನೆ ಪಾಲು ಜೊತೆಗೆ 1/25ರಷ್ಟು ಭಾಗದಷ್ಟು ಆಸ್ತಿಗೆ ಅರ್ಹರಾಗಿದ್ದಾರೆ. ಎರಡೂ ಪಾಲು ಒಟ್ಟು ಮಾಡಿದರೆ, 9/75ರಷ್ಟು ಆಸ್ತಿ ಆಗಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಈ ಹಿಂದೆ, ಟ್ರಯಲ್ ಕೋರ್ಟ್ ಸೇರಿದಂತೆ ಎರಡು ನ್ಯಾಯಾಲಯಗಳೂ ವಿಚಾರಣೆ ಬಳಿಕ ಹೊರಡಿಸಿರುವ ಪ್ರಾಥಮಿಕ ಡಿಕ್ರಿಯಲ್ಲಿ ಮಾರ್ಪಾಡು ಮಾಡಲಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಪ್ರಕರಣದ ವಿವರ:
ಹನುಮಂತರೆಡ್ಡಿ ಹಾಗೂ ಈರಮ್ಮ ದಂಪತಿಗೆ ನಾಲ್ಕು ಮಕ್ಕಳು. ಅದರಲ್ಲಿ ಒಬ್ಬ ಮೃತಪಟ್ಟಿದ್ದು, ಈರಮ್ಮನ ಪತಿ ಹನುಮಂತರೆಡ್ಡಿಯೂ ಮೃತಪಟ್ಟಿದ್ದಾರೆ.
ಪತಿಯ ಆಸ್ತಿಯನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ತಾಯಿ ಮತ್ತು ಮಕ್ಕಳ ನಡುವೆ ವೈಮನಸ್ಯ ಹಾಗೂ ತಗಾದೆ ಉಂಟಾಯಿತು.
ಈ ವಿಚಾರ ಬೀದರ್ ಜಿಲ್ಲೆಯ ದಿವಾಣಿ ನ್ಯಾಯಾಲಯದ ಮೆಟ್ಟಿಲೇರಿತು. ಇಲ್ಲಿ ಅರ್ಜಿದಾರರಿಗೆ ಪ್ರತಿಕೂಲ ಆದೇಶ ಬಂದ ಹಿನ್ನೆಲೆಯಲ್ಲಿ, ಈರಮ್ಮ ಹೈಕೋರ್ಟ್ ನ ಕಲಬುರ್ಗಿ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಕಲಬುರ್ಗಿ ವಿಭಾಗೀಯ ನ್ಯಾಯಪೀಠ, ಒಬ್ಬ ಮಹಿಳೆಗೆ ತನ್ನ ಮೃತ ಗಂಡನ ಆಸ್ತಿಯಲ್ಲಿ ಪಾಲಿದೆ. ಮಾತ್ರವಲ್ಲ, ಮೃತ ಮಗನ ಆಸ್ತಿಯಲ್ಲೂ ಸಮಾನ ಪಾಲು ಪಡೆಯಲು ಅಧಿಕಾರವಿದೆ ಎಂಬ ಮಹತ್ವದ ತೀರ್ಪು ನೀಡಿತು.
ಆದರೆ, ಈ ನಿಯಮ ವಿಧವೆ ತಾಯಿಗೆ ಮಾತ್ರ ಅನ್ವಯವಾಗುತ್ತದೆ. ಇದಕ್ಕೆ ಹೊರತಾಗಿ ಪತಿ ಇರುವ ಮಹಿಳೆ ತನ್ನ ಮೃತ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ತಿಳಿಸಿದೆ.
ಇದನ್ನೂ ಓದಿ
ಗ್ರಾ.ಪಂ. ಸಿಬ್ಬಂದಿ ಹಾಜರಾತಿ ಪುಸ್ತಕದ ಮಾಹಿತಿ: RTI ಅರ್ಜಿ ತಿರಸ್ಕರಿಸಿದ PDOಗೆ ಭರ್ಜರಿ ದಂಡ ವಿಧಿಸಿದ ಮಾಹಿತಿ ಆಯೋಗ